600 ಕೋಟಿ ರೂಪಾಯಿ ಮೌಲ್ಯದ ಗೋಮಾಳ ಭೂಗಳ್ಳರ ಪಾಲು

 ಲಿಂಗರಾಜು ಮಳವಳ್ಳಿ

ಬೆಂಗಳೂರು: ನಗರದ ಭೂ ಮಾಫಿಯಾ ಕೆರೆ-ಕಟ್ಟೆ, ಗೋಮಾಳ, ಸ್ಮಶಾನ, ಗೋಕುಂಟೆ, ಗುಂಡುತೋಪು, ರಾಜಕಾಲುವೆ ಯಾವುದನ್ನೂ ಬಿಟ್ಟಿಲ್ಲ. ಕೊನೆಗೆ ಡಾಂಬರು ಹಾಕಿದ ರಸ್ತೆಯನ್ನೂ ಬಿಟ್ಟಿಲ್ಲ! ಇಂಚಿಂಚೂ ಭೂಮಿಯನ್ನು ನುಂಗಿ ನೀರು ಕುಡಿದು ಆಗಿದೆ. ನಗರದ ಭೂಮಾಫಿಯಾಗೆ ಕಾನೂನಿನ ಭಯ ಎಳ್ಳಷ್ಟೂ ಇಲ್ಲ! ಇದಕ್ಕೆ ಎಲ್ಲವನ್ನೂ ದಕ್ಕಿಸಿಕೊಳ್ಳುವ ಗುಂಡಿಗೆ ಇದೆ. ಕಾರಣ ಇಷ್ಟೇ, ಇಡೀ ರಾಜ್ಯಾಂಗ ಭೂ ಮಾಫಿಯಾದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದೆ!

ಬೆಂಗಳೂರಿನ ಭೂಮಿಗೆ ಚಿನ್ನದ ಬೆಲೆ ಅಲ್ಲ, ವಜ್ರದ ಬೆಲೆ ಬಂದಾಗಿದೆ. ಹೊಸೂರು – ಸರ್ಜಾಪುರ ರಸ್ತೆ ಹೆಚ್ಎಸ್ಆರ್ ಬಡಾವಣೆಯ 27ನೇ ಮುಖ್ಯರಸ್ತೆಯಲ್ಲಿ ಒಂದು ಚದರ ಅಡಿ ಜಾಗದ ಬೆಲೆ 60 ಸಾವಿರ ರೂಪಾಯಿ! ಭೂ ಮಾಫಿಯಾದ ಕಥನಗಳು ನಿಗೂಢ, ಅಷ್ಟೇ ಸ್ವಾರಸ್ಯಕರ! ಸರ್ಕಾರಿ ಜಮೀನು ಅತಿಕ್ರಮಣ, ತಾನೇ ಮಾರಾಟ ಮಾಡಿದ ಜಮೀನಿನ ಮೇಲೆ ಕೇಸು ದಾಖಲಿಸುವುದು, ದಿಕ್ಕಿಲ್ಲದವರ ನಿವೇಶನಗಳಿಗೆ ಬೇಲಿ ಹಾಕುವುದು, ಫೇಕು ಡಾಕ್ಯುಮೆಂಟ್ ಗಳನ್ನು ಸೃಷ್ಟಿಸಿ ಮಾರಾಟ ಮಾಡುವುದು, ಬದಲಿ ನಿವೇಶನ, ಬದಲಿ ಜಮೀನು ದಂಧೆ, ಡಿನೋಟಿಫಿಕೇಶನ್, ಇಲ್ಲದ ಜಮೀನಿಗೆ ಟಿಡಿಆರ್, ಹೀಗೆ ನಾವ್ಯಾರೂ ಕೇಳದ, ಅರಿಯದ ನಿಗೂಢ ಅಧ್ಯಾಯಗಳಿವೆ. ಭೂ ಮಾಫಿಯಾದ ಇಂತಹ ನಿಗೂಢ ಕಥನಗಳ ತನಿಖಾ ವರದಿ ಇದೀಗ ಜನಶಕ್ತಿ ಮೀಡಿಯಾ ಓದುಗರಿಗಾಗಿ…

ನೂರಾರು ಕೋಟಿ ಬೆಲೆ ಬಾಳುವ ಗೋಮಾಳ ಭೂಗಳ್ಳರ ಪಾಲಾಗುತ್ತಿದೆ, ಇದನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಹೈಕೋರ್ಟ್ ಅಂಗಳದಲ್ಲಿ ಇತ್ತೀಚೆಗೆ ಸದ್ದು ಮಾಡಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮದ ಸರ್ವೆ ನಂ.5 ರಲ್ಲಿ 78 ಎಕರೆ 5 ಗುಂಟೆ ಗೋಮಾಳ ಜಮೀನು ಭೂಗಳ್ಳರ ಪಾಲಾಗುತ್ತಿದ್ದು, ಈ ಬಗ್ಗೆ 15 ದಿನದ ಒಳಗಾಗಿ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಎಂ.ಬಾಬು ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನಾಗರತ್ನ ಹಾಗು ನ್ಯಾಯಮೂರ್ತಿ ಹಂಚತೆ ಸಂಜೀವ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಮೇಲ್ಕಂಡಂತೆ ಆದೇಶಿಸಿದೆ.

ಸದರಿ ಜಮೀನಿನಲ್ಲಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದ್ದು, ಇದರಿಂದ ಅಮಾಯಕರು ನಿವೇಶನ ಖರೀದಿಸಿ ಮೋಸ ಹೋಗುತ್ತಿದ್ದಾರೆ ಇದನ್ನು ತಡೆಬೇಕೆಂದು ಕೋರಿದ್ದರು.  ಕಂದಾಯ ದಾಖಲೆಗಳ ಪ್ರಕಾರ 78 ಎಕರೆ 5 ಗುಂಟೆ ಜಮೀನಿನಲ್ಲಿ, 52 ಎಕರೆ 25 ಗಂಟೆ ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿತ್ತು. ಅರಣ್ಯ ಇಲಾಖೆಯ ಬೇಜವಾಬ್ದಾರಿಯೋ ಅಥವಾ ಹೊಂದಾಣಿಕೆಯೋ ಏನೋ, ಈ ಭೂಮಿ ಅತಿಕ್ರಮಣ ಆಗುತ್ತಿದ್ದರೂ ಮೌನ ವಹಿಸಿತ್ತು! ಸಾಮಾಜಿಕ ಕಳಕಳಿಯುಳ್ಳವರು ಅತಿಕ್ರಮಣ ನಿಲ್ಲಬೇಕೆಂದು ನಡೆಸಿದ ಹೋರಾಟ ಮಾತ್ರ ಒಂದು ಅರಣ್ಯ ರೋಧನವೇ ಸರಿ.

ಕಂದಾಯ ದಾಖಲೆಗಳು ಹೇಳುವುದೇನು?

ಕಂದಾಯ ದಾಖಲೆಗಳಾದ ಪಹಣಿ ಮತ್ತು ಐಎಲ್ ಆರ್ ಆರ್ ಪ್ರಕಾರ ಕಾಲಂ 9ರಲ್ಲಿ 78 ಎಕರೆ 5 ಗುಂಟೆ ಜಮೀನು ಗೋಮಾಳ ಸ್ಪಷ್ಟಪಡಿಸಲಾಗಿದೆ. ಕಾಲಂ 11 ರಲ್ಲಿ ಎಲ್ಲಮ್ಮ ದೇವಿ ದೇವಸ್ಥಾನ ಎಂದೂ ದಾಖಲೆ ಹೇಳುತ್ತದೆ. ಕಾಲಂ 12 ರಲ್ಲಿ ಎಲ್ಲಮ್ಮ ದೇವಿ ಜಾತ್ರೆಗೆ ಜಾಗ ಹಾಗು ಜನತಾ ಮನೆ ಹಾಗು ನಿವೇಶನಗಳೆಂದು ನಮೂದಾಗಿದೆ. ಅಂದರೆ ಒಟ್ಟು ಜಮೀನಿನಲ್ಲಿ 15 ಎಕರೆ ಜನತಾ ನಿವೇಶನಗಳಿಗೆ ಎಂತಲೂ, ಎಲ್ಲಮ್ಮ ದೇವಿ ದೇವಸ್ಥಾನ, ಗದ್ದಿಗೆ ಮಂಟಪ ಸೇರಿ 20 ಗುಂಟೆ ಹಾಗು 10 ಎಕರೆ ಅನಧಿಕೃತ ಸಾಗುವಳಿ ಎಂದು ತೋರಿಸಲಾಗಿದೆ. ಉಳಿದಂತೆ 52 ಎಕರೆ 25 ಗಂಟೆ ಜಮೀನು ಖುಲ್ಲಾ ಇರುತ್ತದೆ.

ಅರಣ್ಯ ಇಲಾಖೆಗೆ ಜಮೀನು ಹಸ್ತಾಂತರ

ಸರ್ಕಾರಿ ಆದೇಶ ಸಂಖ್ಯೆ ಡಿವಿಎಸ್ (ಡಿ) ಸಿಆರ್: 10:94-95, ಬೆಂಗಳೂರು, ದಿನಾಂಕ: 9-8-95 ರಂತೆ ಈ 52 ಎಕರೆ 25 ಗಂಟೆ ಜಮೀನನ್ನು ಅಂದಿನ ವಿಶೇಷ ಜಿಲ್ಲಾಧಿಕಾರಿಗಳು ಕೆಲ ಷರತ್ತಿನೊಂದಿಗೆ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು. ಅದರಂತೆ 52 ಎಕರೆ 25 ಗಂಟೆ ಜಮೀನನ್ನು ತಾತ್ಕಾಲಿಕವಾಗಿ ಅರಣ್ಯ ಇಲಾಖೆಯು ಉಸ್ತುವಾರಿ ನೋಡಿಕೊಳ್ಳುವುದು ಹಾಗು ಸಸ್ಯ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದು, ಅತಿಕ್ರಮ ಆಗದಂತೆ ಎಚ್ಚರವಹಿಸಬೇಕು ಜತೆಗೆ ಅಗತ್ಯ ಎನಿಸಿದಾಗ ಕಂದಾಯ ಇಲಾಖೆಯ ಮೂಲಕ ಸರ್ಕಾರದ ವಶಕ್ಕೆ ನೀಡುವುದು ಎಂದಾಗಿತ್ತು.

ಭೂಗಳ್ಳತನದ ಆರಂಭ

ಎಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್ ನ ಸಂಚಾಲಕರೆಂದು ಹೇಳಿಕೊಂಡಿರುವ ಎಂ.ವಿ.ರಾಜಯ್ಯ ಎಂಬುವವರು ಸದರಿ ಗೋಮಾಳ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ, ಜಿಪಿಎ ಮಾಡಿಕೊಟ್ಟು ಮಾರಾಟ ಮಾಡುತ್ತಿದ್ದಾರೆ, ಇದನ್ನು ತಡೆಹಿಡಿಯಬೇಕೆಂದು 1995 ರಲ್ಲಿ ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಂದಿನ ಆನೇಕಲ್ ತಾಲ್ಲೂಕು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರು. ಮುಂದುವರಿದು, ಜಿಲ್ಲಾಧಿಕಾರಿಗಳು, ಅರಣ್ಯ ಸಚಿವರು, ಕಂದಾಯ ಸಚಿವರು ಹಾಗು ಇದೇ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೂ ದೂರು ನೀಡಲಾಗಿತ್ತು. ಸಚಿವರ ಸೂಚನೆ ಮೇರೆಗೆ ತಹಶೀಲ್ದಾರ್ ಹಾಗು ಉಪ ವಿಭಾಗಧಿಕಾರಿಗಳು ಸ್ಥಳ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಒತ್ತುವರಿ ಆಗಿರುವುದು, ಅಕ್ರಮವಾಗಿ ನಿವೇಶನ ಮಾಡಿರುವ ಕುರಿತು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಇದಾದ ಬಳಿಕ ಸರ್ಕಾರ ಆದೇಶ ನೀಡಿ ಷರತ್ತಿನ ಮೇಲೆ ಸದರಿ 52 ಎಕರೆ 25 ಗಂಟೆ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು.

ಷರತ್ತುಗಳು ಹೇಳುವುದೇನು?

  1. 52 ಎಕರೆ 25 ಗಂಟೆ ಜಮೀನನ್ನು ತಾತ್ಕಾಲಿಕವಾಗಿ ಹಸ್ತಾಂತರ.
  2. ಸದರಿ ಜಮೀನಿನನ್ನು ಸಸ್ಯ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಬೇಕು.
  3. ಅತಿಕ್ರಮಣ ಆಗದಂತೆ ನೋಡಿಕೊಳ್ಳಬೇಕು
  4. ಅಗತ್ಯ ಎನಿಸಿದಾಗ ಕಂದಾಯ ಇಲಾಖೆಗೆ ಭೂಮಿ ನೀಡಬೇಕು.

ಷರತ್ತುಗಳು ಕೇಳಲು ಹಿತವಾಗಿವೆಯಾದರೂ, ಹಸ್ತಾಂತರ ಆದಂದಿನಿಂದ ಅರಣ್ಯ ಇಲಾಖೆ ಸಸ್ಯ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದು ಒತ್ತಟ್ಟಿಗಿರಲಿ, ಕನಿಷ್ಟ ತಂತಿ ಬೇಲಿಯನ್ನೂ ಹಾಕಲಿಲ್ಲ! ಹೀಗಾಗಿ ಚಿನ್ನದಂತಹ ಈ ಭೂಮಿ ಭೂಗಳ್ಳರ ಸ್ವರ್ಗವಾಯಿತು. ಹಾಡಹಗಲೇ ನಿವೇಶನ, ರಸ್ತೆ ನಿರ್ಮಾಣ ಆಗುತ್ತಿದ್ದರೂ ಕೇಳುವವರು ದಿಕ್ಕಿಲ್ಲ ಎಂಬಂತಾಗಿತ್ತು.

1995ರಲ್ಲಿ ಹೆನ್ನಾಗರ ಪಂಚಾಯಿತಿ ಅಧ್ಯಕ್ಷನಾಗಿ ಭೂಗಳ್ಳತನಕ್ಕೆ ಅಡ್ಡಿಯಾಗಿ ನಿಂತಿದ್ದ ಎಂ.ಬಾಬು 25 ವರ್ಷಗಳ ನಂತರವೂ  ಭೂಮಿ ಉಳಿಸಲು ಹೆಣಗುತ್ತಿದ್ದಾರೆ. ಸದ್ಯ ಹೈಕೋರ್ಟ್ ದ್ವಿಸದಸ್ಯ ಪೀಠವು 15 ದಿನಗಳ ಒಳಗಾಗಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವುದು ಧೀರ್ಘಕಾಲದ ಹೋರಾಟದಲ್ಲಿ ಕೊಂಚ ನೆಮ್ಮದಿ ನೀಡಿದೆ ಎಂದು ಎಂ.ಬಾಬು ನಿಟ್ಟಿಸಿರು ಬಿಡುತ್ತಾರೆ.

ಗೋಮಾಳ ಉಳಿಸುವ ಶತಪ್ರಯತ್ನದಲ್ಲಿರುವ ಹೋರಾಟಗಾರರು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ನ್ಯಾಯ ದಕ್ಕುತ್ತದೋ, ಅಥವಾ ಸಾಕ್ಷ್ಯಾಧಾರಗಳ ಬರ ಎದುರಿಸುತ್ತದೋ ಕಾದು ನೋಡಬೇಕು.

 

Donate Janashakthi Media

Leave a Reply

Your email address will not be published. Required fields are marked *