ವಿಮಾನ ಲ್ಯಾಂಡಿಂಗ್‌ ವೇಳೆ ಅಪಘಾತ: ಡಿಸಿಎಂ ಅಜಿತ್‌ ಪವಾರ್‌ ಸೇರಿ 6 ಜನ ಸಾವು

ಮುಂಬೈ: ವಿಮಾನ ಲ್ಯಾಂಡಿಂಗ್‌ ವೇಳೆ ಅಪಘಾತಕ್ಕೀಡಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಆರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಜನವರಿ 28ರ ಬೆಳಗ್ಗೆ ನಡೆದಿದೆ.

ಬೆಳಗ್ಗೆ 8.10ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ 9.15ರ ಸಂದರ್ಭದಲ್ಲಿ ಪುಣೆ ಸಮೀಪದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಬೆಂಕಿ ಕಾಣಿಸಿಕೊಂಡು ವಿಮಾನ ಸಂಪೂರ್ಣ ಸುಟ್ಟುಹೋಗಿದೆ. ಅಪಘಾತ

ದುರಂತದಲ್ಲಿ ಅಜಿತ್‌ ಪವಾರ್‌ (66) ಅವರ ಇಬ್ಬರು ಆಪ್ತ ಸಹಾಯಕರು ಮತ್ತು ಪಕ್ಷದ ಹಿರಿಯ ಮುಖಂಡರು ಇದ್ದರು. ಅಪಘಾತದಲ್ಲಿ ಇಬ್ಬರು ಪೈಲೆಟ್‌ಗಳು ಕೂಡ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೊಡ್ಡವರೋ ಸಣ್ಣವರೋ !

ಸಣ್ಣ ಖಾಸಗಿ ಚಾರ್ಟರ್ಡ್‌ ವಿಮಾನದಲ್ಲಿ ಇದ್ದವರೆಲ್ಲರೂ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬಾರಾಮತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಜಿತ್‌ ಪವಾರ್‌ ಅವರು ಮುಂಬೈನಿಂದ 45 XR ಸಣ್ಣ ಚಾರ್ಟರ್ಡ್‌ ವಿಮಾನದಲ್ಲಿ ತೆರಳುತ್ತಿದ್ದರು.

ವರದಿಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಮುಂದಿನ ಮೇಯರ್‌ ಮತ್ತಿತರ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತ್ತು ಸಭೆಗಳಲ್ಲಿ ಪಾಲ್ಗೊಳ್ಳಲು ಅವರು ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ವಿಮಾನ ಇಳಿಯುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಎಟಿಎಫ್‌ಗೆ ಮಾಹಿತಿ ನೀಡಲಾಗಿತ್ತು. ನಂತರ ವಿಮಾನ ನಿಲ್ದಾಣ ಸಮೀಪದ ಹೊಲದಲ್ಲಿಯೇ ವಿಮಾನ ಪತನಗೊಂಡಿದೆ.

ವಿಮಾನವು ತಾಂತ್ರಿಕ ದೋಷದಿಂದ ಅಥವಾ ಇಳಿಯುವಾಗ ಉಂಟಾದ ಲೋಪದಿಂದ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.ಈ ದುರಂತ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಅಜಿತ್‌ ಪವಾರ್‌ ಅವರು ಮಹಾರಾಷ್ಟ್ರದ ಎನ್‌ಸಿಪಿ ಮುಖ್ಯಸ್ಥರಾಗಿ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ಇದಲ್ಲದೆ, ಮಹಾಯುತಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಈ ಘಟನೆ ಇಡೀ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.

ಅಜಿತ್‌ ಪವಾರ್‌ ಜತೆಗೆ ಅವರ ಭದ್ರತಾ ಸಿಬ್ಬಂದಿಯೂ ಇದ್ದರು ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿಮಾನ ನಿಲ್ದಾಣದ ವಿಕೋಪ ನಿಯಂತ್ರಣ ಪ್ರಾಧಿಕಾರದ ಸಿಬ್ಬಂದಿ ಸುಟ್ಟು ಕರಕಲಾಗಿರುವ ವಿಮಾನದ ಅವಶೇಷಗಳನ್ನು ಹೊರತೆಗೆಯುತ್ತಿದ್ದಾರೆ.

ಇದನ್ನೂ ನೋಡಿ: ಒಂದು ದೇಹ, ಒಂದು ಸಾಕ್ಷಿ | ಸಾಮ್ರಾಜ್ಯಶಾಹಿಯ ವಿರುದ್ಧ ಸುಮಿತೇರು ತಾನಿಗುಚಿJanashakthi Media

Donate Janashakthi Media

Leave a Reply

Your email address will not be published. Required fields are marked *