ನವದೆಹಲಿ : 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಸಂಬಂಧ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಈ ಮೂಲಕ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ.ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ ಕುಸ್ಮಾ ವಾದವನ್ನು ತಿರಸ್ಕರಿಸಿತು. ಕುಸ್ಮಾ ಪರ ವಾದ ಮಂಡಿಸಿದ ವಕೀಲರು, ಬೋರ್ಡ್ ಪರೀಕ್ಷೆ ಅತಿ ಕಡಿಮೆ ಸಮಯದಲ್ಲಿ ಜಾರಿ ಮಾಡಲು ಹೊರಟಿದೆ. ಈ ಬಗ್ಗೆ ಪೊಷಕರಿಗೂ ಮಾಹಿತಿ ಇಲ್ಲ. ಮತ್ತು ಶಾಲೆಗಳ ಜೊತೆಗೂ ಇಲಾಖೆ ಚರ್ಚೆ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವಾದಿಸಿದರು. ಈ ವಾದವನ್ನು ಒಪ್ಪದ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ಅರ್ಜಿ ವಜಾಮಾಡಿತು.
ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದು ಬೇಡ. ರಾಜ್ಯದಲ್ಲಿ ಯಾವುದು ಉತ್ತಮವೆಂದು ಹೈಕೋರ್ಟ್ ಗೆ ಗೊತ್ತಿದೆ. ನಾವು 4,000 ಶಾಲೆಗಳನ್ನು ಪ್ರತಿನಿಧಿಸುತ್ತೇವೆ. ನಮ್ಮ ವಾದ ಆಲಿಸಬೇಕೆಂದು ಸಿಜಿಐ ಚಂದ್ರಚೂಡ್ ಅವರಿಗೆ ಖಾಸಗಿ ಶಾಲೆಗಳ ಪರ ವಕೀಲರು ಮನವಿ ಮಾಡಿದರು.ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲರು, ಕಲಿಕಾ ಚೇತರಿಕೆ ಕೇವಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರವೇ ಅನ್ವಯ ಆಗುತ್ತದೆ. ಇದು ಪಠ್ಯಕ್ರಮದ ಭಾಗವಲ್ಲ. ಇದರನ್ವಯ ಪ್ರಶ್ನೆಗಳನ್ನು ಉತ್ತರಿಸಲು ಮಕ್ಕಳಿಗೆ ಕಷ್ಟವಾಗುತ್ತದೆ ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು. ಆದರೆ,ಇದನ್ನು ಪರಿಗಣಿಸದ ನ್ಯಾಯಾಲಯ ಪರೀಕ್ಷೆ ಇಂದು ನಡೆಯುತ್ತಿರುವ ಕಾರಣ, ಈ ಹಂತದಲ್ಲಿ ಮಧ್ಯ ಪ್ರವೇಶ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಖಾಸಗಿ ಶಾಲೆಗಳ ಪರವಾಗಿ ವಾದ ಮಂಡನೆ ಮಾಡಿದ್ದ ವಕೀಲರು ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದರಿಂದ ಮೌಲ್ಯ ಮಾಪನ ವಿಧಾನವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮೌಲ್ಯಾಂಕನ ಪರೀಕ್ಷೆ ನಡೆಸುವ ಕುರಿತು ಸರ್ಕಾರವು ಪೋಷಕರು, ಶಾಲೆಗಳ ಜೊತೆ ಯಾವುದೇ ಸಭೆ ನಡೆಸಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಇದನ್ನೂ ಓದಿ : 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ : ಸುಪ್ರೀಂಗೆ ಮೇಲ್ಮನವಿ
ಏನಿದು ಪ್ರಕರಣ? :
ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿ ಕರ್ನಾಟಕ ಸರ್ಕಾರ 2022ರ ಡಿಸೆಂಬರ್ 12, 13 ಮತ್ತು 2023ರ ಜನವರಿ 4ರಂದು ಸುತ್ತೋಲೆ ಹೊರಡಿಸಿತ್ತು. ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಹಾಗೂ ಇತರರು ಇದನ್ನು ರದ್ದುಪಡಿಸುವಂತೆ ಕೋರಿ ಕರ್ನಾಟಕ ಹೈ ಕೋರ್ಟ್ ಅರ್ಜಿ ಸಲ್ಲಿಕೆ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ಪುರಸ್ಕರಿಸಿ, ಬೋರ್ಡ್ ಪರೀಕ್ಷೆ ನಡೆಸುವ ಆದೇಶವನ್ನು ರದ್ದುಗೊಳಿಸಿತ್ತು. ಕರ್ನಾಟಕ ಸರ್ಕಾರ ಈ ಆದೇಶವನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನೆ ಮಾಡಿತ್ತು. ಏಕಸದಸ್ಯ ಪೀಠದ ಆದೇಶಕ್ಕೆ ನ್ಯಾಯಮೂರ್ತಿ ನರೇಂದರ್ ಹಾಗೂ ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿತ್ತು. ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಷರತ್ತು ಬದ್ಧ ಅನುಮತಿಯನ್ನು ನೀಡಿತ್ತು. ಮಾರ್ಚ್ 27ರಿಂದ ಪರೀಕ್ಷೆಗಳನ್ನು ನಡೆಸಬೇಕು. ಆದರೆ ಯಾವುದೇ ವಿದ್ಯಾರ್ಥಿಗಳನ್ನು ಫೇಲ್ ಮಾಡುವಂತಿಲ್ಲ ಎಂದು ಹೇಳಿತ್ತು. ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಈ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು.
ಇದನ್ನೂ ಓದಿ : 5, 8ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಒಪ್ಪಿಗೆ
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಕೆ ಮಾಡಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ಪೀಠ ಸದ್ಯ ಬೋರ್ಡ್ ಪರೀಕ್ಷೆಗೆ ಸಿದ್ಧಪಡಿಸಿರುವ ಪ್ರಶ್ನೆಪತ್ರಿಕೆಗಳಲ್ಲಿ ಪಠ್ಯಕ್ರಮದಿಂದ ಹೊರತಾದ ಯಾವುದಾದರೂ ಪ್ರಶ್ನೆಗಳು ಇವೆಯೇ?. ಇಲ್ಲವೇ? ಎಂಬುದನ್ನು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಿತ್ತು.