ಕೋಲಾರ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿ ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿ ಸರ್ಕಾರದ ಘನತೆ ಕಾಪಾಡಿದ ಫಲವಾಗಿ ನಮ್ಮನ್ನು ಕಾರಣ ನೀಡದೆ ಕೆಲಸದಿಂದ ವಜಾ ಮಾಡಿದ್ದಾರೆ ಎಂದು 7ಮಂದಿ ಶುಶ್ರೂಷಕಿಯರು ತಮ್ಮ ಅಳಲು ತೋಡಿಕೊಂಡರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಶ್ರೂಷಕಿಯರು ಈಗಾಗಲೇ ಸೇವೆ ಸಲ್ಲಿಸುತ್ತಿರುವ ನಾವು ಪಾರದರ್ಶಕವಾಗಿ ನಡೆದಿರುವ ಸಂದರ್ಶನದಲ್ಲಿ ಆಯ್ಕೆಯಾಗಿದ್ದು, ನಮ್ಮನ್ನು ಸೇವೆಯಿಂದ ವಜಾ ಮಾಡುವುದು ಸರಿಯಲ್ಲ. ನಮಗೂ ಕುಟುಂಬವಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.
ಶುಶ್ರೂಷಕಿ ಶಶಿಕಲಾ ಮಾತನಾಡಿ, ಕೋವಿಡ್ ಡ್ಯೂಟಿಯಲ್ಲಿ ನನ್ನ ಸೇವೆಯನ್ನು ಗುರುತಿಸಿ ಡಿಎಚ್ಒ ಡಾ.ಜಗದೀಶ್ ಅವರು ಜಿಲ್ಲಾ ಶಸ್ತ್ರಚಿಕಿತ್ಸಕರಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೋವಿಡ್ ಸಂಬಂಧ ಜಿಲ್ಲಾವಾರು ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಿದ್ದರು. ನಾನು ಸಿಎಂ ಕೇಳಿದ ಪ್ರಶ್ನೆಗೆಲ್ಲ ಉತ್ತರಿಸಿ, ಕೋವಿಡ್ ಸಮಯದಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ವಿವರಿಸಿ, ಅವರು ಶಬ್ಬಾಸ್ ಗಿರಿ ನೀಡಿದ್ದರು. ನನಗೂ ಕೋವಿಡ್ ಪಾಸಿಟಿವ್ ಬಂದಿದ್ದು, ನನ್ನಿಂದ ಮನೆಯವರಿಗೆಲ್ಲ ಒಕ್ಕರಿಸಿತ್ತು. ಇಂತಹ ಸಮಯದಲ್ಲೂ ಧೃತಿಗೆಡದೆ ಕೊರೊನ ವಿರುದ್ಧ ಕೆಲಸ ಮಾಡಿದ ನಮಗೆ ಈ ಗತಿ ತಂದೊಡ್ಡಿದ್ದಾರೆ ಎಂದು ಮರುಕಪಟ್ಟರು.
ಶುಶ್ರೂಷಕಿ ರೇಖಾ ಮಾತನಾಡಿ, ಕೋವಿಡ್ ಡ್ಯೂಟಿಯಲ್ಲಿ 25 ಸಾವಿರ ವೇತನ ಪಡೆದುಕೊಳ್ಳುತ್ತಿದ್ದ ನಾವು. ಎನ್.ಎಚ್.ಎಂ ಹುದ್ದೆಯಾಗಿದ್ದರಿಂದಾಗಿ ಹೆಚ್ಚಿನ ಸಂಬಳ ಬಿಟ್ಟು 11,200 ರೂ. ಸಂಬಳಕ್ಕೆ ಬಂದಿದ್ದೇವೆ. ಕೆಲವೊಬ್ಬರು ಡಿ ಗ್ರೂಪ್ ಸಿಬ್ಬಂದಿಯಾಗಿ ಉದ್ಯೋಗ ಪಡೆದುಕೊಂಡು ಶುಶ್ರೂಷಕಿ ಸೇವೆ ಮಾಡುವ ಮೂಲಕ ಕೋವಿಡ್ ಸಂದರ್ಭದಲ್ಲಿ ಜನರಿಗೆ ಸೇವೆ ಸಲ್ಲಿಸಿದ್ದೇವೆ. ವಿನಾಕಾರಣ ನಮ್ಮನ್ನು ಕೆಲಸದಿಂದ ವಜಾ ಮಾಡಿರುವುದು ಸರಿಯಲ್ಲ. ನಾವು ಬದುಕಬೇಕು, ಕೆಲಸ ಕೊಡಿ ಇಲ್ಲದಿದ್ದರೆ ವಿಷ ಕೊಡಿ ಎಂದು ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿ ಶುಶ್ರೂಷಕಿಯರಾದ ಶಾರದಾಬಾಯಿ, ಸುಪ್ರಿಯಾ, ಚೈತ್ರ, ಸುಮಾ, ಚಂದ್ರಕಲಾ ಹಾಜರಿದ್ದರು.