ನವದೆಹಲಿ: ಅಸ್ಸಾಂ ಸರ್ಕಾರ ಹಾಗೂ ಪೊಲೀಸರ ಮೂಲಕ ತನ್ನನ್ನು ಬಂಧಿಸಿ ಈ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ನಿಲ್ಲುವುದನ್ನು ತಪ್ಪಿಸಲು ಹಾಗೂ ನನ್ನ ಮೇಲೆ ಅಪರಾಧಿಯ ಕಳಂಕ ಮೆತ್ತಲು ಪ್ರಧಾನಿ ನರೇಂದ್ರ ಮೋದಿ ಪಿತೂರಿ ಹೂಡಿದ್ದಾರೆ ಎಂದು ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.
“ಒಬ್ಬ ಮಹಿಳೆಯನ್ನು ಬಳಸಿಕೊಂಡು ನನ್ನನ್ನು ಅಪರಾಧಿಯನ್ನಾಗಿ ಮಾಡಲು ಯತ್ನಿಸಿದ್ದಾರೆ. ಇದನ್ನು ನಾನು ಪ್ರಧಾನಿ ನರೇಂದ್ರ ಮೋದಿಯ 56 ಇಂಚಿನ ಹೇಡಿತನ ಎನ್ನುತ್ತೇನೆ. ಈ ಪಿತೂರಿಯಲ್ಲಿ ಪ್ರಧಾನಿ ಕಾರ್ಯಾಲಯವು ಭಾಗಿಯಾಗಿದೆʼʼ ಎಂದು ಆರೋಪಿಸಿದರು.
ಇದನ್ನು ಓದಿ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು-ಆರೋಪ ಉಲ್ಲೇಖಿಸದೆ ಮತ್ತೆ ಬಂಧನ
ಮುದ್ರಾ ಬಂದರಿನಲ್ಲಿ ರೂ. 1,75,000 ಕೋಟಿ ಮೌಲ್ಯದ ಮಾದಕ ವಸ್ತು ಸರಬರಾಜಿನ ಪ್ರಕರಣ ವಿರುದ್ಧ ಇನ್ನು ಕ್ರಮಕೈಗೊಂಡಿಲ್ಲ. ವಡ್ಗಾವ್ ನಲ್ಲಿ ನಡೆದ ಊನಾ ಚಳುವಳಿಯ ಸಮಯದಲ್ಲಿ ದಲಿತ ಸಮುದಾಯದ ವಿರುದ್ಧ ದಾಖಲಾಗಿರುವ ದೂರನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. 22 ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಜೂನ್ 1ರಂದು ಗುಜರಾತ್ ನಲ್ಲಿ ತಾವೇ ರಸ್ತೆಗಿಳಿದು ಪ್ರತಿಭಟಿಸಿ ಬಂದ್ ಮಾಡುತ್ತೇನೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಏಪ್ರಿಲ್ 19ರಂದು ಎಫ್ಐಆರ್ ದಾಖಲಾಗಿದೆ. ಅಂದೇ ನನ್ನನ್ನು ಬಂಧಿಸಲು 2,500 ಕಿಲೋಮೀಟರ್ ವರೆಗೂ ಪೋಲಿಸರು ಬಂದಿದ್ದಾರೆ. ತನಗೆ ಜಾಮೀನು ನೀಡಿದ ಅಸ್ಸಾಂ ನ್ಯಾಯಲಯದ ತೀವ್ರ ಟೀಕೆಗಳಿಂದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಕಾರಕ್ಕೆ ನಾಚಿಕೆಯಾಗಿರಬೇಕು ಎಂದು ಟೀಕಿಸಿದರು.
ಇದನ್ನು ಓದಿ: ಜಿಗ್ನೇಶ್ ಮೆವಾನಿ ಬಂಧನ: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್
ನ್ಯಾಯಧೀಶರ ಮುಂದೆ ಮಹಿಳೆಯು ಪ್ರಥಮ ಎಫ್ಐಆರ್ ಮಾಹಿತಿಯಲ್ಲಿನ ವಿಭಿನ್ನ ಕತೆಗಳನ್ನು ಹೇಳಿದ್ದಾರೆ. ಮಹಿಳೆಯ ಸಾಕ್ಷ್ಯದ ದೃಷ್ಟಿಯಿಂದ ಆರೋಪಿ ಜಿಗ್ನೇಶ್ ಮೇವಾನಿಯನ್ನು ತ್ವರಿತ ಧೀರ್ಘಾವಧಿ ಬಂಧನದಲ್ಲಿಡಬೇಕಾಯಿತು. ಇಲ್ಲಿ ನ್ಯಾಯಲಯದ ಕಾನೂನು ಕ್ರಮವನ್ನು ದುರುಪಯೋಗಪಡಿಸಿಕೊಂಡಿರುವುದು ತಿಳಿದು ಬಂದಿದೆ ಎಂದು ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದರು.
ಗುಜರಾತ್ ರಾಜ್ಯದ ಪಾಲನ್‌ಪುರ ಪಟ್ಟಣದ ಪಕ್ಷೇತರ ಶಾಸಕರಾದ ಜಿಗ್ನೇಶ್ ಮೇವಾನಿ ಮೋದಿಯವರನ್ನು ಟೀಕಿಸಿ ರಚಿಸಿದ್ದ ಒಂದೆರಡು ಟ್ವೀಟ್ ಆಧಾರದಲ್ಲಿ ಬಿಜೆಪಿ ಮುಖಂಡರ ದೂರನ್ನು ದಾಖಲಿಸಿದರು. ತ್ವರಿತಗತಿಯಲ್ಲಿ ಅಸ್ಸಾಂ ಪೊಲೀಸ್ ತಂಡವು ಕಳೆದ ತಿಂಗಳು ಬಂಧಿಸಿತ್ತು. ನ್ಯಾಯಾಲಯದಿಂದ ಜಾಮೀನೂ ಸಿಕ್ಕ ಮರುಕ್ಷಣದಲ್ಲೇ ಪೋಲೀಸ್ ಮಹಿಳೆಯೊಬ್ಬರ ಮೇಲೆ ಹಲ್ಲೆ ಪ್ರಕರಣದಲ್ಲಿ ಪುನಃ ಬಂಧಿತರಾದ ಜಿಗ್ನೇಶ್ ಮೇವಾನಿ ಅವರಿಗೆ ಅಸ್ಸಾಂ ನ್ಯಾಯಲಯವೊಂದು ಶುಕ್ರವಾರ ಜಾಮೀನು ನೀಡಿತು. ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಆರೋಪಿಯನ್ನು ಬಂಧಿಸುವಾಗ ವಾಹನಗಳಲ್ಲಿ ಸಿಸಿಟಿವಿ ಅಳವಡಿಸಲು, ಪ್ರತಿ ಪೋಲಿಸ್ ಸಿಬ್ಬಂದಿಗೆ ಬಾಡಿ ಕ್ಯಾಮೆರಾ ಅಳವಡಿಸಲು ಅಸ್ಸಾಂ ನ್ಯಾಯಲಯವು ಪೊಲೀಸರನ್ನು ನಿರ್ದೇಶಿಸಲು ಮತ್ತು ಸುಧಾರಿಸಲು ಹೈಕೋರ್ಟ್ ಇದನ್ನು ಪರಿಗಣಿಸಬಹುದು. ಇಲ್ಲವಾದಲ್ಲಿ ನಾವು ಕಷ್ಟಪಟ್ಟು ಗಳಿಸಿದ ಪ್ರಜಾಪ್ರಭುತ್ವದ ರಾಜ್ಯ, ಪೋಲೀಸ್ ರಾಜ್ಯವಾಗುತ್ತದೆ. ಇದನ್ನು ಸಮಾಜ ನಿಭಾಯಿಸಲು ಸಾಧ್ಯವಿಲ್ಲ ಎಂದು ಸೆಷನ್ಸ್ ನ್ಯಾಯಲಯ ಜಿಗ್ನೇಶ್ ಮೇವಾನಿ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಉಲ್ಲೇಖಿಸಿದವು.