- ಕುಸಿದ ಈರುಳ್ಳಿ ಬೆಲೆ : 1 ರೂ ಕೆಜೆ
- ಈರುಳ್ಳಿ ಬೆಳೆದ ತೋಟಕ್ಕೆ ಟ್ರ್ಯಾಕ್ಟರ್ ಹೊಡೆಸಿದ ರೈತ
ಬೆಂಗಳೂರು : ಸಾಲ ಮಾಡಿ ಬೆಳೆದ ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ, ಮಾರುಕಟ್ಟೆಗೆ ಬಂದ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 1 ರೂಪಾಯಿಯಿಂದ 50 ರೂಪಾಯಿ ವರೆಗೆ ಮಾತ್ರ ಮಾರಾಟವಾಗುತ್ತಿದೆ.
ಕಳೆದ ವರ್ಷ ಕೊರೊನಾ ಸೋಂಕಿನ ನಡುವೆಯೂ ರೈತರು ಈರುಳ್ಳಿ ಬೆಳೆದಿದ್ದರು. ಉತ್ತಮ ಇಳುವರಿ ಬಂದಿತ್ತಾದರೂ, ಹೊರ ರಾಜ್ಯದ ಸಂಪರ್ಕ ನಿಷೇಧ ಮಾಡಿದ್ದರಿಂದ ಉತ್ತಮ ಬೆಲೆ ಸಿಗದೆ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ ಈ ಬಾರಿ ಬೆಲೆ ಕುಸಿತ ಆಗಿರುವುದು ರೈತರಿಗೆ ಮತ್ತೊಂದು ತೊಂದರೆಯಾಗಿದೆ.
1ರೂ ಗೆ ಕೆಜಿ ಈರುಳ್ಳಿ : ಜಗಳೂರು ತಾಲ್ಲೂಕಿನ ಕೆಲ ಭಾಗಗಳಲ್ಲಿ ರೈತರು ಬಿತ್ತಿದ್ದ ಈರುಳ್ಳಿ ಬೆಳೆಗೆ ದರ ಸಿಗದ ಕಾರಣ ರೈತರು ಸಿಕ್ಕಷ್ಟು ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ತಿಪ್ಪೆಗೆ ಎಸೆಯುತ್ತಿದ್ದಾರೆ. ಜಗಳೂರು ಗಡಿ ಭಾಗದ ರೈತ ಉದಯಕುಮಾರ್ ಅವರು ಮಂಗಳವಾರ ₹ 1 ಕ್ಕೆ ಕೆ.ಜಿ.ಯಂತೆ ಮನೆಮನೆಗೆ ಬಂದು ಈರುಳ್ಳಿ ಮಾರಾಟ ಮಾಡಿದರು.
ವಾಹನದಲ್ಲಿ 50 ಚೀಲಗಳನ್ನು ಹೇರಿಕೊಂಡು ಬಂದಿದ್ದ ಅವರು ಮನೆಗಳ ಮುಂದೆ ತಂದು ಒಂದು ಚೀಲಕ್ಕೆ ₹ 60ರಿಂದ ₹ 100ರಂತೆ ನೀಡಿದರು. ಮಹಿಳೆಯರು ಮುಗಿ ಬಿದ್ದು ಖರೀದಿಸಿದರು.
‘ಹೋಬಳಿಯಾದ್ಯಂತ ಈರುಳ್ಳಿ ದರ ಕುಸಿದಿರುವುದರಿಂದ ಖರೀದಿದಾರರು ಈರುಳ್ಳಿ ಖರೀದಿಸಲು ಮುಂದೆ ಬರುತ್ತಿಲ್ಲ. ಈ ಬಾರಿ ಉತ್ತಮ ದರ ಸಿಗಬಹುದೆಂದು ಬಿತ್ತನೆ ಮಾಡಿದ್ದೆವು. ಆದರೆ ಬೆಳೆ ಬೆಳೆಯಲು ಮಾಡಿದ ಖರ್ಚು ಸಹ ಬರುತ್ತಿಲ್ಲ. ಕಾರಣ ಬೇಸತ್ತು ನಾವೇ ವಾಹನ ಮಾಡಿಕೊಂಡು ಬಂದಷ್ಟು ಬರಲಿ ಎಂದು ಬೀದಿ ಬೀದಿ ತಿರುಗಿ ಮಾರಾಟ ಮಾಡುತ್ತಿದ್ದೇವೆ. ಒಂದು ಚೀಲಕ್ಕೆ ₹ 60ರಿಂದ ₹ 100ರವರೆಗೆ ಮಾರಾಟ ಮಾಡುತ್ತಿದ್ದೇವೆ. ಇಷ್ಟು ಕಡಿಮೆ ಕೊಟ್ಟರೂ ಜನ ಇನ್ನೂ ಚೌಕಾಸಿ ಮಾಡುತ್ತಿದ್ದಾರೆ. ಈರುಳ್ಳಿಗೆ ವೆಚ್ಚ ಮಾಡಿದ ಖರ್ಚು ನೆನೆಸಿಕೊಂಡರೆ ಕಣ್ಣೀರು ಬರುತ್ತದೆ. ಏಕಾದರೂ ಬಿತ್ತಿದೆವೋ ಎನ್ನಿಸುತ್ತದೆ. ಎಷ್ಟು ಸಾಧ್ಯವೋ ಅಷ್ಟನ್ನು ಮಾರಾಟ ಮಾಡಿ ಉಳಿದಿದ್ದನ್ನು ತಿಪ್ಪೆಗೆ ಹಾಕುತ್ತಿದ್ದೇವೆ. ಒಂದಿಷ್ಟು ಜಮೀನಿನಲ್ಲಿಯೇ ಕೊಳೆಯಲು ಬಿಟ್ಟಿದ್ದೇವೆ’ ಎಂದು ಉದಯಕುಮಾರ್ ಬೇಸರಿಸಿದರು.
ಜಮೀನಿಗೆ ಟ್ರ್ಯಾಕ್ಟರ್ ಹೊಡೆಸಿದ ರೈತ : ಹಿರಿಯೂರು ತಾಲೂಕಿನ ದಿಂಡಾವರ ಪಂಚಾಯ್ತಿ V N ಹಳ್ಳಿ ರೈತರಾದ ಹರೀಶ್ ರವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ಕೊಳೆ ರೋಗದಿಂದ ನೆಲ ಕಚ್ಚಿರುವುದು ಒಂದು ಕಡೆಯಾದರೆ ಈರುಳ್ಳಿ ಬೆಲೆಯು ತೀರಾ ತಳಮಟ್ಟಕ್ಕೆ ಕುಸಿದಿರುವುದರಿಂದ ಈರುಳ್ಳಿ ಕೀಳುವ ಕೂಲಿ ಖರ್ಚು ಬರುವುದಿಲ್ಲ ಎನ್ನುವುದನ್ನು ಅರಿತ ರೈತ ಹರೀಶ್ ರವರು ಜಮೀನಿನಲ್ಲಿರುವ ಈರುಳ್ಳಿ ಕೀಳದ ಹಾಗೆಯೇ ಟ್ರ್ಯಾಕ್ಟರ್ ಹೊಡೆಸಿದ್ದಾರೆ.
ತಾಲ್ಲೂಕಿನ ಬಹುತೇಕ ಕಡೆ ಇದೇ ರೀತಿ ಈರುಳ್ಳಿ ಕೊಳೆ ರೋಗದಿಂದ ಬಹುತೇಕ ರೈತರು ಹಾಕಿದ ಬಂಡವಾಳ ವಾಪಸ್ಸು ಬರದೇ ಇರುವುದು ರೈತರಿಗೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟವಾಗಿದ್ದು ರೈತರು ಸಾಲದ ಸುಳಿಯಲ್ಲಿ ತತ್ತರಿಸಿ ಹೋಗಿದ್ದಾರೆ. ಆದುದರಿಂದ ಸರ್ಕಾರ ಹಾಗೂ ಸಂಭಂದಪಟ್ಟ ಇಲಾಖೆ ರೈತರಿಗೆ ಸೂಕ್ತ ಈರುಳ್ಳಿ ಬೆಳೆ ಪರಿಹಾರ ನೀಡಬೇಕೆಂದು ಹರೀಶ್ ಒತ್ತಾಯಿಸಿದ್ದಾರೆ.
ಈರುಳ್ಳಿಯನ್ನು ರಸ್ತೆಗೆ ಸುರಿದ ಬೆಳಗಾರ : ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾದ ರೈತರೊಬ್ಬರುಈರುಳ್ಳಿಯನ್ನು ರಸ್ತೆಗೆ ಸುರಿದ ಘಟನೆ ತಾಲೂಕಿನ ಕ್ಯಾತಗೊಂಡನಹಳ್ಳಿಯ ಯಲಗಟ್ಟೆ ಗೊಲ್ಲರ ಹಟ್ಟಿಯಲ್ಲಿ ನಡೆದಿದೆ.
ಗ್ರಾಮದ ರೈತ ಶ್ರೀನಿವಾಸ್, ಆರು ಎಕರೆ ಪ್ರದೇಶದಲ್ಲಿಈರುಳ್ಳಿಯನ್ನು ಬೆಳೆದಿದ್ದರು. ಇದಕ್ಕಾಗಿ 3.20 ಲಕ್ಷ ರೂ.ವೆಚ್ಚ ಮಾಡಿದ್ದರು. ಬೆಂಗಳೂರಿನ ಮಾರುಕಟ್ಟೆಯಲ್ಲಿ ಈರುಳ್ಳಿಮಾರಲು ಹೋದಾಗ ಕ್ವಿಂಟಲ್‌ಗೆ ಕೇವಲ 230 ರೂ. ದರಇತ್ತು. ಈರುಳ್ಳಿ ಮಾರಾಟ ಮಾಡಿದಾಗ ಕೇವಲ 34 ಸಾವಿರರೂ. ಮಾತ್ರ ದೊರೆಯಿತು.
ಬೆಂಗಳೂರಿಗೆ ಈರುಳ್ಳಿಯನ್ನು ಲಾರಿ ಮೂಲಕ ತೆಗೆದುಕೊಂಡು ಹೋಗಿದ್ದ ಬಾಡಿಗೆಯೇ 40ಸಾವಿರ ರೂ. ಆಗಿದೆ. ಬೆಲೆ ಕುಸಿತದಿಂದ ಬೇಸತ್ತು ಗ್ರಾಮದ ಪ್ರಮುಖ ರಸ್ತೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ತಂದು ರಸ್ತೆಗೆ ಸುರಿದರು. ಕಳೆದ ಎರಡು ವರ್ಷಗಳಿಂದ ನನ್ನ ಜಮೀನಿನಲ್ಲಿಯಾವುದೇ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗುಲ್ಲ. ಜೂನ್‌ತಿಂಗಳಲ್ಲಿ ಬಂದ ಉತ್ತಮ ಮಳೆಯಿಂದ ಉತ್ತೇಜಿತನಾಗಿಲಕ್ಷಾಂತರ ರೂ. ಸಾಲ ಮಾಡಿ ಈರುಳ್ಳಿ ಬೆಳೆದೆ. ಆದರೆಮಾರುಕಟ್ಟೆಯ ಅವ್ಯವಸ್ಥೆಯಿಂದ ಹೆಚ್ಚಿನ ಬೆಲೆ ದೊರೆಯದೆನಷ್ಟ ಅನುಭವಿಸುತ್ತಿದ್ದೇನೆ. ಸರ್ಕಾರ ರೈತರಿಗೆ ನೆರವಾಗಬೇಕು.ಕಡೇ ಪಕ್ಷ ಬೆಳೆ ಬೆಳೆಯಲು ಮಾಡಿದ ಸಾಲವನ್ನಾದರೂ ಮನ್ನಾಮಾಡಬೇಕು ಎಂದು ಶ್ರೀನಿವಾಸ್ ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಕಲ್ಯಾಣವನ್ನು ಕಾಪಾಡುವುದಾಗಿ ಹೇಳುತ್ತಿವೆ. ಆದರೆ ಅವರಿಗೆ ಸಿಗಬೇಕಾದ ಬೆಂಬಲ ಬೆಲೆ, ಪರಿಹಾರ ನೀಡದೆ ರೈತರನ್ನು ಸಂಕಷ್ಟಕ್ಕೆ ತಳುತ್ತಿದೆ. ಈಗಾಗಲೆ ಕೋವಿಡ್‌ನಿಂದ ತತ್ತರಿಸುವ ರೈತ ಸಮುದಾಯಕ್ಕೆ ಬೆಲೆ ಕುಸಿತ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ, ಲಕ್ಷಾಂತರ ರೂ ಖರ್ಚು ಮಾಡಿ ಬೆಳೆ ಬೆಳೆದ ರೈತ ತಲೆ ಮೇಲೆ ಕೈ ಹೊತ್ತು ಕೂಡುವಂತಾಗಿದೆ.