ಬೆಂಗಳೂರು : ನಾಡಿನ ಹಿರಿಯ ಚೇತನ, ಸಾಹಿತಿ, ಪ್ರಖರ ಚಿಂತಕ, ವಿಚಾರವಾದಿ, ಹೋರಾಟಗಾರ ಚಂದ್ರಶೇಖರ ಪಾಟೀಲರ ನಿಧನಕ್ಕೆ ಸಮುದಾಯ ಕರ್ನಾಟಕವು ತೀವ್ರ ಸಂತಾಪವನ್ನು ವ್ಯಕ್ತ ಪಡಿಸಿದೆ.
ಸಂಕ್ರಮಣ ಪತ್ರಿಕೆಯನ್ನು ಆರಂಭಿಸುವ ಮೂಲಕ ಸಾಹಿತಿ ಚಂದ್ರಶೇಖರ ಪಾಟೀಲರು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಗತಿಪರ ಚಳುವಳಿಗೆ ಮತ್ತೆ ಚಾಲನೆ ನೀಡಿದವರು. ಸಾಹಿತಿಗಳ ಒಕ್ಕೂಟ, ತುರ್ತುಪರಿಸ್ಥಿತಿಯ ವಿರುದ್ಧ ರಾಜಕೀಯ ಪ್ರತಿಭಟನೆ, ವಿಚಾರವಾದಿ ಚಳುವಳಿ,ಬಾಬಾಗಳ ಬಣ್ಣ ಬಯಲುಗೊಳಿಸುವುದು, ಬಂಡಾಯ ಸಾಹಿತ್ಯ ಸಂಘಟನೆ, ಗೋಕಾಕ ಕನ್ನಡ ಚಳುವಳಿ, ಸಮುದಾಯ ಸಂಘಟನೆ-ಹೀಗೆ ಅವರು ಪ್ರೋತ್ಸಾಹಿಸಿದ ಇಲ್ಲವೇ ನೇತೃತ್ವ ನೀಡಿದ ಚಳುವಳಿಗಳು ಇಂದಿನ ಪ್ರಗತಿಪರ ಸಾಂಸ್ಕೃತಿಕ ಚಲನಶೀಲತೆಗೆ ತಳಹದಿ ಹಾಕಿದೆ ಎಂದರೂ ತಪ್ಪಾಗಲಾರದು.
ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಅವರು ಸಾರಥ್ಯ ವಹಿಸಿದ ಸರ್ಕಾರದ ವಿವಿಧ ಪ್ರಾಧಿಕಾರಗಳ ಮೂಲಕವೂ ಅವರು ಕಟ್ಟಿದ್ದು ಜನಪರವಾದ ಸಾಂಸ್ಕೃತಿಕ ಪರ್ಯಾಯವನ್ನು ಎಂಬುದು ಅವರ ಬದ್ಧತೆಗೆ ಸಾಕ್ಷಿ. ‘ಚಂಪಾ’ ಎಂದೇ ಖ್ಯಾತರಾದ ಅವರು. ತುರ್ತು ಪರಿಸ್ಥಿತಿಯನ್ನು ಎದುರಿಸಿ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ ಒಬ್ಬ ಕವಿ. ಅವರು ನಮ್ಮೆಲ್ಲರ ನಾಯಕರು. ಅವರಿಗೆ ನಮ್ಮ ಪ್ರೀತಿಯ ವಿದಾಯವನ್ನು ಕಂಬನಿ ತುಂಬಿದ ಶ್ರದ್ದಾಂಜಲಿಯ ಮೂಲಕ ಸಮುದಾಯ ಕರ್ನಾಟಕ ಅರ್ಪಿಸುತ್ತದೆ ಎಂದು ರಾಜ್ಯಾಧ್ಯಕ್ಷ ಅಚ್ಯುತ, ರಾಜ್ಯ ಪ್ರಧಾನಕಾರ್ಯದರ್ಶಿ ಎಸ್.ದೇವೇಂದ್ರಗೌಡ ತಿಳಿಸಿದ್ದಾರೆ.