ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ರಾಜ್ಯದಲ್ಲಿ ಇಂದಿನಿಂದ ನವೆಂಬರ್ 15ರವರೆಗೆ ಭಾರೀ ಮಳೆ ದಾಖಲಾಗಲಿದೆ. ವಿಶೇಷವಾಗಿ ದಕ್ಷಿಣ ಕರ್ನಾಟಕದ ಪೂರ್ವ ಭಾಗದ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು ಮತ್ತು ಕೋಲಾರಗಳಲ್ಲಿ ಭಾರೀ ಮಳೆಯಾಗಲಿದೆ. ಹೆಚ್ಚಿನ ಪ್ರಮಾಣದ ಮಳೆ ಅಥವಾ ಜಿಟಿಜಿಟಿ ಮಳೆಯಿಂದಾಗಿ ಮೋಡ ಕವಿದ ಮತ್ತು ಚಳಿಯ ವಾತಾವರಣ ಇರಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ನ.12 ರಂದು ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನ.13 ರಂದು ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹಾಗೂ ನವೆಂಬರ್ 14 ಮತ್ತು 15ರಂದು ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೋಲಾರ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ತಮಿಳಿನಾಡಿನಲ್ಲಿ ಧಾರಾಕಾರ ಮಳೆ – 500 ರಸ್ತೆಗಳು ಜಲಾವೃತ, 14 ಮಂದಿ ಸಾವು
ಬೆಂಗಳೂರು ನಗರದ ತಾಪಮಾನ 17 ರಿಂದ 18 ಡಿಗ್ರಿಗೆ ಕುಸಿದಿದೆ. ದಿನಪೂರ್ತಿ ತುಂತುರು ಮಳೆಯಾಗಿದ್ದು, ಜನರ ಸಂಚಾರ ಕಡಿಮೆಯಾಗಿತ್ತು. ದಿನಪೂರ್ತಿ ಮಳೆಯಾದರೂ ಯಾವುದೇ ಅನಾಹುತಗಳು ವರದಿಯಾಗಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ.
ವಾಯುಭಾರ ಕುಸಿತದ ಪರಿಣಾಮ ಸುರಿಯುತ್ತಿರುವ ಮಳೆ ರೈತರಿಗೆ ಸಂಕಷ್ಟ ತಂದೊಡ್ಡಿದೆ. ತರಕಾರಿ ಬೆಳೆಗಳಿಗೆ ಹಾನಿಯಾಗುತ್ತಿದೆ. ಟೊಮೆಟೋ, ಬೀನ್ಸ್ ಸೇರಿದಂತೆ ವಿವಿಧ ಬೆಳಗಳಿಗೆ ಹಾನಿಯಾಗಿದೆ. ರಾಗಿ, ಭತ್ತದ ಬೆಳೆಗೆ ಹಾನಿಯಾಗಲಿದ್ದು, ರೈತರು ಆತಂಕಗೊಂಡಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಇದು ಅಡಕೆ ಕಟಾವು ಸಮಯ. ಸರಿಯಾದ ಬಿಸಿಲಿಲ್ಲದೇ, ತುಂತುರು ಮಳೆಯಾಗುತ್ತಿದ್ದು ಅಡಕೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಡಕೆ ತೋಟಗಳಿಗೆ ಮತ್ತೆ ಕೊಳೆ ರೋಗ ಕಾಣಿಸಿಕೊಂಡಿದೆ.