ನಜೀಬ್‌ ಎಲ್ಲಿ? ಐದು ವರ್ಷ ಕಳೆದರು ಪತ್ತೆಯಾಗಲಿಲ್ಲ ನಜೀಬ್‌?!

ಗುರುರಾಜ ದೇಸಾಯಿ

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಗತಿಪರ, ಎಡ ಚಿಂತನೆಗಳನ್ನು ಹೊಂದಿರುವ ಮತ್ತು ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ವಿದ್ಯಾರ್ಥಿ ಸಂಘಟನೆಗಳು ಪ್ರಬಲವಿರುವ ವಿಶ್ವವಿದ್ಯಾಲಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಅದರಿಂದಾಗಿ ಪ್ರತಿಭಾವಂತ ರೋಹಿತ್ ವೆಮುಲಾ ಆತ್ಮಹತ್ಯೆ ಮಾಡಿಕೊಂಡ, ಶುಲ್ಕ ಹೆಚ್ಚಳ ಯಾಕೆ ಮಾಡಿದ್ಧೀರಿ ಎಂದು ಪ್ರಶ್ನಿಸಿದ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅಯಿಷಿ ಘೋಶ್‌ ಮೇಲೆ ಹಲ್ಲೆ ನಡೆಸಲಾಯಿತು. ವಿವಿಧೆಡೆ ಕೇಂದ್ರ ಸರಕಾರದ ನಿಲುವನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಯಿತು. ನಜೀಬ್ ಕಾಣೆಯಾಗಿ ಇಲ್ಲಿಯವರೆಗೂ ಆತನ ಸುಳಿವು ಸಿಗಲಿಲ್ಲ.  ಬೌದ್ಧಿಕತೆಯ ಮೇಲೆ ಫ್ಯಾಸಿಸ್ಟರ ಭಯೋತ್ಪಾದಕ ದಾಳಿ ಇನ್ನೂ ನಡೆಯುತ್ತಲೇ ಇದೆ.  

ನಜೀಬ್ ಅಹ್ಮದ್ ನಾಪತ್ತೆಯಾಗಿ ಸುಮಾರು ಐದು ವರ್ಷಳು ಕಳೆದಿದ್ದರೂ ಅವರ ತಾಯಿ ಫಾತಿಮಾ ನಫೀಸ್, ಆತನ ಒಡನಾಡಿಗಳು, ದೇಶದ ವಿದ್ಯಾರ್ಥಿ ಸಮೂಹ ಈಗಲೂ ನಜೀಬ್ ಮರಳುವಿಕೆಗಾಗಿ ಕಾಯುತ್ತಿದ್ದಾರೆ.‌ ಆದರೆ ನಜೀಬ್‌ ಇನ್ನೂ ಪತ್ತೆಯಾಗಿಲ್ಲ. ಕೇಂದ್ರ ಸರಕಾರ ನಜೀಬ್‌ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವುದನ್ನು ಇದು ತೋರಿಸುತ್ತದೆ.

ಏನಾಯ್ತು ಆವತ್ತು : ನಜೀಬ್ ಅಹ್ಮದ್ ಎಂ.ಎಸ್‌ಸಿ ಮೂದಲನೇ ವರ್ಷದ ವಿದ್ಯಾರ್ಥಿ ಅಕ್ಟೋಬರ್ 14 ರಂದು ಎಬಿವಿಪಿ ಗೂಂಡಾಗಳಿಂದ ಥಳಿತಕ್ಕೆ ಒಳಗಾಗಿದ್ದ ಈತ ಮಾರನೇ ದಿನದಿಂದ ಕ್ಯಾಂಪಸ್‌ನಲ್ಲಿ ಕಾಣಿಸಲೇ ಇಲ್ಲ. ನಜೀಬ್ ಹಾಗೆಲ್ಲ ಹೆದರಿ ಓಡುವವನಲ್ಲ. ಆತನ ನಾಪತ್ತೆಯ ಹಿಂದೆ ಎಬಿವಿಪಿ ಕೈವಾಡವಿದೆ ಎಂದು ಜೆಎನ್‌ಯು ವಿದ್ಯಾರ್ಥಿಗಳು ನಿರಂತರ ಪ್ರತಿಭಟನೆ ನಡೆಸಿದರು. ಪ್ರಾಥಮಿಕ ತನಿಖೆಯಿಂದಲೂ ಅದು ಬಹಿರಂಗಗೊಂಡಿದೆ. ಎಬಿವಿಪಿಯ ವಿಕ್ರಾಂತ್ ಎಂಬಾತ ಕೇಸರಿ ಬ್ಯಾಂಡ್ ಕೈಗೆ ಕಟ್ಟಿಕೊಂಡಿದ್ದನ್ನು ನಜೀಬ್ ಗೇಲಿ ಮಾಡಿದ ಅನ್ನುವ ಕಾರಣ ಮುಂದಿಟ್ಟುಕೊಂಡು ಎಬಿವಿಪಿ ಗೂಂಡಾಗಳು ಆತನ ಮೇಲೆರಗಿದ್ದರು. ಈ ಸಂದರ್ಭದಲ್ಲಿ ಈತನಮನ್ನು 72 ಹೂರಿಯರು (ಕುರಾನನಲ್ಲಿ ಹೇಳಲಾಗಿರುವ ದೇವಲೋಕದ ಚಿರಕನ್ನಿಕೆಯರು) ಇರುವಲ್ಲಿಗೆ ಕಳುಹಿಸಬೇಕು ಅನ್ನುವ ಧಮಕಿಯನ್ನೂ ಹಾಕಿದ್ದರು. ಅವರು ಬಹುಷಃ ಅದರಂತೆ ನಡೆದುಕೊಂಡಿರಬಹುದು ಎಂದೆನಿಸುತ್ತದೆ?

ಆದರೆ ಎಬಿವಿಪಿ ಕಟ್ಟಿದ ಕಥೇಯೇ ಬೇರೆ, ಅದು ನಜೀಬ್‌ನನ್ನೇ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿ. ಆತ ವಿಕ್ರಾಂತ್‌ನಿಗೆ ಕೇಸರಿ ಬ್ಯಾಂಡ್ ಕಟ್ಟಿಕೊಂಡಿದ್ದಕ್ಕಾಗಿ ಹೊಡೆದ ಎಂದು ಅಪಪ್ರಚಾರ ಮಾಡಿದರು. ವಿಕ್ರಾಂತ್‌ನ ಸುತ್ತ ಹೆಣೆಯಲಾದ ಈ ಕಟ್ಟು ಕಥೆಗೆ ಎಬಿವಿಪಿಯ ಬೇವಿನಕಾಯಿಗಳದ್ದೆ ಸಾಕ್ಷಿ. ಪ್ರತ್ಯಕ್ಷ ಸಾಕ್ಷಿಗಳು ಹೇಳುವಂತೆ ಜೆಎನ್‌ಯು ಕ್ಯಾಂಪಸ್‌ನಲ್ಲಿರುವ ಮಾಹಿ ಮಾಂಡವಿ ವಸತಿ ನಿಲಯದ ರೂಂ ನಂಬರ್ 106 ರಲ್ಲಿ ವಾಸವಿದ್ದ ನಜೀಬ್ ಅಹ್ಮದ ಕೋಣೆಗೆ 10-15 ಜನರ ಗುಂಪು ನುಗ್ಗಿ ದಾಳಿ ಮಾಡಿತ್ತು.  ಮತ್ತು ಆತನ ಮೂಗು ಬಾಯಿಗಳಲ್ಲಿ ರಕ್ತ ಬರುವಂತೆ ಥಳಿಸಿದ್ದರು. ನಂತರದಲ್ಲಿ ಆತನನ್ನು ಕೋಣೆಯ ವಾಶ್ ರೂಂ ನಲ್ಲಿ ಬಿಸಾಕಿ ಹೊರಗಿನಿಂದ ಚಿಲಕ ಹಾಕಿ ಓಡಿ ಹೋಗಿದ್ದರು.  ರಕ್ತ ಸುರಿಯುತ್ತಿದ್ದ ನಜೀಬ್‌ ಕೆಲವು ಗೆಳೆಯರ ಸಹಾಯದಿಂದ ವಾರ್ಡನ್ ಕಚೇರಿಯತ್ತ ದೂರು ಕೊಡಲು ಹೋಗುತ್ತಾರೆ. ಬಹಳಷ್ಟು ಜನ ಇದನ್ನು ನೋಡಿದ್ದಾರೆ. ದೂರು ಪಡೆದು ಯಾರು ಎಂದು ಪತ್ತೆ ಮಾಡಬೇಕಿದ್ದ ವಾರ್ಡ್‌ನ್ ಯಾರ ಮೇಲೂ ಕ್ರಮ ಕೈಗೊಳ್ಳದೆ ನಜೀಬ್‌ನ್ನು ಸಮಾಧಾನ ಪಡಿಸಿ ವಾಪಾಸು ಕಳಿಸುತ್ತಾರೆ. ಮರುದಿನ ಅಂದರ ಅಕ್ಟೋಬರ್‌ 15, 2016 ರಂದು ಬೆಳಿಗ್ಗೆ  11  ಗಂಟೆ ಸುಮಾರಿನಿಂದ ನಜೀಬ್ ನಾಪತ್ತೆಯಾಗಿದ್ದವರು ಇಂದಿಗೂ ಪತ್ತೆ ಯಾಗಿಲ್ಲ. 2016.ಆಗಸ್ಟ್‌ 1 ರಂದು ಜೆಎನ್‌ಯು ನಲ್ಲಿ ಪ್ರವೇಶವನ್ನು ಪಡೆದಿದ್ದ ನಜೀಬ್ ಅದೇ ವರ್ಷದ ಅಕ್ಟೋಬರ್ 15ರಂದು ಕಣ್ಮರೆಯಾಗುತ್ತಾರೆ.

#WhereIsNajeeb ಹೆಸರಿನಲ್ಲಿ ದೇಶವ್ಯಾಪಿ ಪ್ರತಿಭಟನೆಗಳು ನಡೆದಿವೆ. ವಿವಿ ಕ್ಯಾಂಪಸ್‌ ಬಂದ್‌ ಗೆ ಕರೆ ನೀಡಿ ಪ್ರತಿಭಟನೆ ನಡೆಸಲಾಗಿದೆ. ಒತ್ತಡ ಹೆಚ್ಚಾದಾಗ ಒಂದು ತನಿಖಾ ತಂಡ ನೇಮಿಸಿ ಸರಕಾರ ಕೈ ತೊಳಿದುಕೊಂಡು ಬಿಟ್ಟಿದೆ. ಇಲ್ಲಿಯವರೆಗೆ ನೇಮಿಸಿದ್ದ ಸಮಿತಿ ಏನು ಕೆಲಸ ಮಾಡಿದೆ ಎಂಬ ವರದಿ ಕೂಡ ಬಹಿರಂಗಗೊಂಡಿಲ್ಲ.

ಆರಂಭದಲ್ಲಿ ಈ ಪ್ರಕರಣವನ್ನು ದೆಹಲಿ ಪೊಲೀಸರು ತನಿಖೆ ಮಾಡಿದರು, ಮತ್ತು ನಂತರ ಅದನ್ನು ಸಿಬಿಐಗೆ ವಹಿಸಲಾಯಿತು, ನಂತರ ಅದು ಮುಚ್ಚುವಿಕೆಯ ವರದಿಯನ್ನು ಸಲ್ಲಿಸಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ನಜೀಬ್‌ ನನ್ನು ಹುಡುಕಿಕೊಡಿ ಎಂದು ಮತ್ತೆ ಪ್ರತಿಭಟನೆಗಳು ನಡೆಯುತ್ತಿವೆ. ನಜೀಬ್‌ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಆತನ ತಾಯಿ ಇದ್ದಾಳೆ.  ಆದರೆ ಕಣ್ಣು,  ಕಿವಿ, ಮನಸ್ಸು, ಹೃದಯ ಇಲ್ಲದ ಕೇಂದ್ರ ಸರಕಾರದ ನಿರ್ಲಕ್ಷ್ಯ ಮುಂದುವರೆದಿದೆ. ಇದು ಸಿಬಿಐ ಮತ್ತು ಮೋದಿ ಸರ್ಕಾರದ ನಿರಾಸಕ್ತಿ ಮತ್ತು ಅಸಮರ್ಥತೆಯನ್ನು ಎತ್ತಿ ತೋರಿಸುತ್ತಿದೆ. 

Donate Janashakthi Media

Leave a Reply

Your email address will not be published. Required fields are marked *