ಐದು ವರ್ಷಗಳಲ್ಲಿ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೇರಿಸಲು ಪ್ರತಿ ಜಿಲ್ಲೆಗೆ ರೂ.125 ಕೋಟಿ: ಡಾ. ಸುಧಾಕರ್‌

ಬೆಳಗಾವಿ: ಮುಂದಿನ ಐದು ವರ್ಷದಲ್ಲಿ ರಾಜ್ಯದ ಎಲ್ಲಾ ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನು ವೆಲ್‍ನೆಸ್ ಸೆಂಟರ್‌ಗಳನ್ನಾಗಿ ಪರಿವರ್ತಿಸಲಾಗುವುದು. ಪ್ರಸಕ್ತ ಸಾಲಿನಿಂದಲೇ ಪ್ರತಿ ವರ್ಷ 550 ಕೋಟಿ ಅನುದಾನ ಬರಲಿದೆ, ಅದರಲ್ಲಿ ಪ್ರಯೋಗಾಲಯ, ಕಟ್ಟಡ ಸೇರಿ ಎಲ್ಲಾ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಮಹಂತೇಶ ಕವಡಗಿ ಮಠ ಅವರು ಪ್ರಶ್ನೆ ಕೇಳಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ಬಡವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗಿ ಬಂದಿದೆ. ಲಸಿಕೆ ನೀಡಲು ಅಗತ್ಯ ಸಿಬ್ಬಂದಿ ಇಲ್ಲ. ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು ವಾಸಿಸಲು ಗ್ರಾಮೀಣ ಭಾಗದಲ್ಲಿ ಸೂಕ್ತ ವಸತಿ ಸೌಲಭ್ಯ ಇಲ್ಲ ಎಂದು ಕೇಳಿದರು.

ಪ್ರಶ್ನೆಗೆ ಉತ್ತರ ನೀಡಿದ ಸಚಿವ ಡಾ. ಸುಧಾಕರ್ ʻʻರಾಜ್ಯದಲ್ಲಿ 9600 ಉಪ ಕೇಂದ್ರ, 2500 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿವೆ. ಅವುಗಳಲ್ಲಿ ಅಗತ್ಯ ಮೂಲಸೌಲಭ್ಯ ಉನ್ನತೀಕರಣಕ್ಕೆ ಸರ್ಕಾರ ಬದ್ಧವಾಗಿದೆ. ಪ್ರತಿ ಜಿಲ್ಲೆಯಲ್ಲಿ 25 ಪ್ರಾಥಮಿಕ ಕೇಂದ್ರಗಳನ್ನು ಮೇಲ್ದರ್ಜೆಗೆರಿಸಲು 125 ಕೋಟಿ ವಿನಿಯೋಗಿಸಲಾಗುವುದು. ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ನೆರವಿನಿಂದ ಮುಂದಿನ ಐದು ವರ್ಷಗಳಿಗೆ 2900 ಕೋಟಿ ಲಭ್ಯವಾಗಲಿದೆ. ಇದನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ವೈದ್ಯರ ಕೊರತೆ ನೀಗಿಸಲು ವಿಶೇಷ ನೇಮಕಾತಿ ಆದೇಶ ಹೊರಡಿಸಲಾಗಿದೆ, ಈಗಾಗಲೇ ಸಾವಿರಕ್ಕೂ ಹೆಚ್ಚು ವೈದ್ಯರು ನೇಮಕವಾಗಿದ್ದಾರೆ. ಬಾಕಿ ಇರುವ 150 ವೈದ್ಯರ ನೇಮಕಾತಿಗಾಗಿ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಕ್ರಮಕೈಗೊಳ್ಳಲಾಗುವುದು. 692 ತಜ್ಞ ವೈದ್ಯರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು, ಅವರಲ್ಲಿ 392 ಮಂದಿ ಕೆಲಸಕ್ಕೆ ಹಾಜರಾಗಿದ್ದಾರೆ ಎಂದರು. ವೈದ್ಯರ ಕೊರತೆ ನಿಭಾಯಿಸಲು ಒಂದು ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸಲಾಗಿದೆ. 2300 ವೈದ್ಯರನ್ನು ವಿವಿಧ ಕಾಲೇಜುಗಳಿಂದ ನೇಮಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಕೇಳಿದ ಉಪಪ್ರಶ್ನೆಗೆ ಉತ್ತರ ನೀಡಿದ ಸಚಿವ ಸುಧಾಕರ್‌,  ಬೆಳಗ್ಗೆ 9.30ರಿಂದ 4.30ರ ವರೆಗೆ ವೈದ್ಯರು ಗ್ರಾಮೀಣ ಭಾಗದ ಚಿಕಿತ್ಸಾ ಕೇಂದ್ರದದಲ್ಲಿ ಉಳಿದು ಚಿಕಿತ್ಸೆ ನೀಡಬೇಕು. ಕೆಲವರು ವಯಕ್ತಿಕವಾಗಿ ಕ್ಲಿನಿಕ್ ನಡೆಸುತ್ತಿರಬಹುದು, ಆದರೆ ಸರ್ಕಾರಿ ಕರ್ತವ್ಯದ ಅವಧಿಯಲ್ಲಿ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಇರುವುದನ್ನು ಖಚಿತಪಡಿಸಿಕೊಳ್ಳಲು ಜಿಯೋ ಟ್ರ್ಯಾಕ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.

ಈಗಾಗಲೇ ಸಿಸಿಟಿವಿ ಸೇರಿದಂತೆ ಇತರ ಉಪಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹಿಂದೆ ವೈದ್ಯರ ಕೊರತೆ ಇತ್ತು. ಅದಕ್ಕಾಗಿ ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಕಷ್ಟವಿತ್ತು. ಈಗ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಬರುತ್ತಿದ್ದಾರೆ. ಹಾಗಾಗಿ ಸರ್ಕಾರಿ ಸೇವೆಯ ಅವಧಿಯಲ್ಲಿ ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್‍ಗೆ ಹೋದರೆ ಕಠಿಣ ಕ್ರಮಜರುಗಿಸಲು ಮುಂದಿನ ದಿನಗಳಲ್ಲಿ ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *