ಬೆಂಗಳೂರು : ಬೇಸಿಗೆಯ ಆರಂಭಕ್ಕೂ ಮುನ್ನವೇ ಜಲಮಂಡಳಿ ಎಚ್ಚೆತ್ತುಕೊಂಡಿದೆ. ಕಳೆದ ಬಾರಿ ಉಂಟಾದ ನೀರಿನ ಅಭಾವ, ಈ ಭಾರಿ ಆಗದಂತೆ ಜಲಮಂಡಳಿ ನೀರು ಉಳಿತಾಯಕ್ಕೆ ಮುಂದಾಗಿದೆ.
ಈ ಬಾರಿಯೂ ನೀರು ಪೋಲು ಮಾಡಿದ್ರೆ ದಂಡಾಸ್ತ್ರಕ್ಕೆ ಮುಂದಾಗಿದೆ. ಕಾರು, ಬೈಕ್, ಮನೆಯಂಗಳ, ಇತರೆ ಕೆಲಸಗಳಿಗೆ ನೀರು ವ್ಯರ್ಥ ಮಾಡಿದ್ರೆ ಆಯಾ ವಲಯದ ಜಲಮಂಡಳಿ ಇಂಜಿನಿಯರ್ ಗಳು 5 ಸಾವಿರ ದಂಡ ವಿಧಿಸಲಿದ್ದಾರೆ.
ಈ ಆದೇಶ ಇಂದಿನಿಂದಲೇ ಜಾರಿಯಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಚತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಹಾಗೂ ಸಿನಿಮಾ ಮಂದಿರ ಮತ್ತು ಮಾಲ್‌ಗಳಲ್ಲಿನ ಕುಡಿಯುವ ನೀರಿಗೆ ಹೊರತು ಇನ್ನಿತರೆ ಬಳಕೆಗೆ ನಿಷೇದಿಸಲಾಗಿದೆ. ಇದರ ಜೊತೆಗೆ ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ ಕುಡಿಯುವ ನೀರನ್ನ ಬಳಸಿದ್ರೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಇದನ್ನೂ ಓದಿ:‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’: ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ
ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಅಭಾವ ಆಗದಂತೆ ಬಿಬಿಎಂಪಿ ಕೂಡ ಅಲರ್ಟ್ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಮೀಕ್ಷೆ ನಡೆಸಿ ವರದಿ ನೀಡಲು ಬಿಬಿಎಂಪಿ ಕಮಿಷನರ್ ಸೂಚನೆ ನೀಡಿದ್ದಾರೆ.
ಪಾಲಿಕೆಯ 8 ವಲಯಗಳಲ್ಲಿ ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ, ಎಷ್ಟು ಸುಸ್ಥಿತಿಯಲ್ಲಿವೆ, ಎಷ್ಟು ಸ್ಥಗಿತವಾಗಿವೆ ಎಂಬುದರ ಕುರಿತು ಸಮೀಕ್ಷೆ ನಡೆಸಿ ವಾರದೊಳಗಾಗಿ ವರದಿ ನೀಡಲು ಸೂಚಿಸಲಾಗಿದೆ.
ನಗರದಲ್ಲಿ ಬೋರ್‌ವೆಲ್‌ಗಳು ಬತ್ತಿಹೋಗ್ತಿದ್ದು, ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ನೀರಿನ ಅಭಾವ ಆಗದಂತೆ ಜಲಮಂಡಳಿ-ಬಿಬಿಎಂಪಿ ಇಗಿನಿಂದಲೇ ಸಿದ್ಧತೆ ಮಾಡಿಕೊಳ್ತಿದೆ.
ಇದನ್ನೂ ಓದಿ:‘ಉಚಿತ ಪಡಿತರ’, ‘ಉಚಿತ ಕೊಡುಗೆ’ ಇತ್ಯಾದಿ ಟಿಪ್ಪಣಿಗಳಿಂದ ಬಡವರ ಘನತೆಯನ್ನು ಕಳಚಿ ಹಾಕಬಾರದು-ಬೃಂದಾ ಕಾರಟ್