ಉಪ್ಪಿನಂಗಡಿ : ನಿವೃತ್ತ ಯೋಧರೊಬ್ಬರ ಮನೆಗೆ ತೆರಳುವ ದಾರಿಮಧ್ಯೆ ಐದು ಗ್ರೇನೆಡ್ ರೀತಿಯ ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದಲ್ಲಿ ನಡೆದಿದೆ.
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮ ನಿವಾಸಿ, ಭೂಸೇನಾ ರೆಜಿಮೆಂಟಿನಲ್ಲಿ ಎಸ್ ಸಿಒ ಆಗಿ ನಿವೃತ್ತರಾಗಿರುವ ಜಯಕುಮಾರ್ ಪೂಜಾರಿ ಈ ಬಗ್ಗೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಜಯಕುಮಾರ್ ಪೂಜಾರಿ ಶನಿವಾರ ಸಂಜೆ ವೇಳೆ ಉಪ್ಪಿನಂಗಡಿಯಿಂದ ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ದಾರಿಮಧ್ಯೆ ಇಳಿಜಾರಿನ ತಂತಿ ಬೇಲಿಯ ಎಡಭಾಗದಲ್ಲಿ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡುಬಂದಿದೆಯೆನ್ನಲಾಗಿದೆ.
ಅದರಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನಲ್ಲಿ ಒಂದು ಗ್ರೆನೇಡ್ ಇದ್ದು ಇತರ ನಾಲ್ಕು ಗ್ರೆನೇಡ್ ಗಳು ಸ್ಥಳದಲ್ಲೆ ಬಿದ್ದಿತ್ತು, ಜಯಕುಮಾರ್ ಆ ವಸ್ತುಗಳನ್ನು ನೋಡಿ ಗ್ರೆನೇಡ್ ಎಂಬುದನ್ನು ಕಂಡು ಕೊಂಡಿದ್ದಾರೆ.
ಸಾರ್ವಜನಿಕರಿಗೆ ಅಪಾಯ ಆಗುವುದನ್ನು ಅರಿತ ಜಯಕುಮಾರ್, ಅವುಗಳನ್ನು ತನ್ನ ಮನೆಯ ಅಂಗಳದ ಮೂಲೆಯಲ್ಲಿಟ್ಟು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಸುಮಾರು 40 ವರ್ಷ ಹಳೆಯ ಕಾಲದ ಗ್ರೆನೇಡ್ ಎಂಬ ಬಗ್ಗೆ ಮಾಹಿತಿ ಇದ್ದು, ಸೇನೆಯಲ್ಲಿ ಬಳಸುತ್ತಿದ್ದ ಗ್ರೆನೇಡ್ ಇಲ್ಲಿ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ 5 ಗ್ರೆನೇಡ್ ಗಳು ಪತ್ತೆಯಾಗಿರೋದು ಸ್ಥಳೀಯರನ್ನು ಭೀತಿಗೊಳಿಸಿದೆ. ಸುಳಿವೇ ಇಲ್ಲದ ಪ್ರಕರಣವನ್ನು ಪೊಲೀಸರು ಬೆನ್ನೆತ್ತಿದ್ದು, ಗ್ರೇನೆಡ್‌ನ ಮೂಲ ಪತ್ತೆ ಹಚ್ಚುವ ಸವಾಲು ಪೊಲೀಸರ ಹೆಗಲೇರಿದೆ.