ಜೈಪುರ: ಮದುವೆ ಮನೆಯಲ್ಲಿ ಸಂಭ್ರಮಾಚರಣೆ ವೇಳೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು 5 ಮಂದಿ ಸಾವನ್ನಪ್ಪಿದ್ದು, 49 ಜನರು ಗಾಯಗೊಂಡಿದ್ದಾರೆ. ಈ ಘಟನೆಯು ರಾಜಸ್ಥಾನದ ಜೋಧಪುರದಲ್ಲಿ ಬಳಿ ನಡೆದಿದ್ದು, ವರನ ಮನೆಯಿಂದ ಮದುವೆ ಮಂಟಪದೆಡೆಗೆ ಮೆರವಣಿಗೆ ಹೊರಡಬೇಕಿದ್ದ ಸ್ವಲ್ಪ ಹೊತ್ತಿಗೂ ಮೊದಲು ದುರ್ಘಟನೆ ನಡೆದಿದೆ.
ಜೋಧ್‌ಪುರದಿಂದ 60 ಕಿ.ಮೀ ದೂರದಲ್ಲಿರುವ ಭೂಂಗಾರ ಗ್ರಾಮದಲ್ಲಿ ಗುರುವಾರ ಈ ದುರಂತ ಸಂಭವಿಸಿದ್ದು, ಐವರು ಅತಿಥಿಗಳು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಕೆಲವರಿಗೆ ಶೇ 80ರಿಂದ 100ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 12 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಸ್ಪೋಟ ತೀವ್ರಯಿಂದ ಕಂಗಾಲಾದ ಅತಿಥಿಗಳು ಮತ್ತು ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಇಬ್ಬರು ಮಕ್ಕಳಾದ ರತನ್ ಸಿಂಗ್ (5) ಮತ್ತು ಖುಷ್ಬೂ (4) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಫೋಟದ ಪ್ರಭಾವದಿಂದ ಭುಂಗ್ರಾ ಗ್ರಾಮದ ಮನೆಯ ಒಂದು ಭಾಗ ಕುಸಿದಿದೆ. ಮದುಮಗ ಸುರೇಂದ್ರ ಸಿಂಗ್ ಅವರ ಮನೆಯಲ್ಲಿ ಅತಿಥಿಗಳು ಜಮಾಯಿಸಿದ್ದರು ಮತ್ತು ಅವರಿಗೆ ಆಹಾರವನ್ನು ಸಿದ್ಧಪಡಿಸಲಾಗುತ್ತಿತ್ತು. ಮನೆಯ ಆಹಾರ ಪದಾರ್ಥಗಳ ಶೇಖರಣೆ ಮಾಡುವ ಕೋನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಇರಿಸಲಾಗಿತ್ತು. ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ ಎಂದು ಜೋಧ್‌ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅನಿಲ್ ಕಯಾಲ್ ಹೇಳಿದ್ದಾರೆ.
ಗಾಯಾಳುಗಳನ್ನು ಎಂಜಿಹೆಚ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ಮತ್ತು ಜೋಧ್‌ಪುರ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಅವರು ಘಟನೆಯಲ್ಲಿ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.