ನವದೆಹಲಿ: ” ಅಲೋಪಥಿ ಎನ್ನುವುದು ಮೂರ್ಖ ವಿಜ್ಞಾನ” ಎಂದು ಅವಹೇಳನ ಮಾಡಿದ್ದ ಬಾಬಾ ರಾಮ್‌ದೇವ್ ಗೆ ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಕರೊನಾ, ಮಧುಮೇಹ ಸೇರಿದಂತೆ ಹಲವಾರು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಅಲೋಪಥಿಯಲ್ಲಿ ಸೂಕ್ತ ಔಷಧವಿಲ್ಲ, ಆದರೆ ತಲೆತಲಾಂತರಗಳಿಂದ ಬಳಕೆ ಮಾಡುತ್ತಿರುವ ಆಯುರ್ವೇದದಲ್ಲಿ ಸಾಕಷ್ಟು ಪರಿಹಾರಗಳು ಇವೆ ಎಂಬುದನ್ನು ಹೇಳುತ್ತಾ, ಅಲೋಪಥಿ ಎನ್ನುವುದು ಮೂರ್ಖ ವಿಜ್ಞಾನ ಎಂದು ಬಾಬಾ ರಾಮ್‌ದೇವ್ ಹೇಳಿದ್ದರಿಂದ ಗರಂ ಆಗಿದ್ದ ಅಲೋಪಥಿ ವೈದ್ಯರು ಅವರ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಹರಿಶಂಕರ್, ಅಲ್ಲಾರೀ… ಹೋಮಿಯೋಪಥಿ, ಆಯುರ್ವೇದ ಸರಿಯಿಲ್ಲ ಎಂದು ಅದರ ವಿರುದ್ಧ ಅಲೋಪಥಿ ವೈದ್ಯರು ಮಾತನಾಡುವುದಿಲ್ವಾ? ಹಾಗಿದ್ದ ಮೇಲೆ ಆ ವೈದ್ಯರೂ ಇವರ ವಿರುದ್ಧ ಕೇಸ್ ಹಾಕ್ತಾರಾ ಎಂದು ಪ್ರಶ್ನಿಸುವ ಮೂಲಕ ಕೋರ್ಟ್ ಬಾಗಿಲಿಗೆ ಹೋದವರಿಗೆ ಮಾತಿನ ಚಾಟಿ ಬೀಸಿದ್ದಾರೆ.
ಕರೊನಾ ಗುಣಪಡಿಸುವ ಔಷಧವನ್ನು ತಾವು ಕಂಡುಹಿಡಿದುದ್ದಾಗಿ ಬಾಬಾ ರಾಮ್‌ದೇವ್ ಹೇಳಿದ್ದರು. ವಿವಿಧ ದೇಶಗಳಿಂದ ಬಳಕೆ ಮಾಡುತ್ತಿರುವ ಲಸಿಕೆಗಳ ವ್ಯಾಲಿಡಿಟಿ ಇರುವುದು ಕೆಲವೇ ತಿಂಗಳು ಎಂಬ ಬಗ್ಗೆ ಖುದ್ದು ಅಧ್ಯಯನವೇ ಹೇಳಿದ್ದರಿಂದ, ಜತೆಗೆ ಜನರಿಗೆ ನೀಡಿರುವ ಕೆಲವು ಲಸಿಕೆಗಳಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಖುದ್ದು ತಜ್ಞ ವೈದ್ಯರೇ ಹೇಳಿರುವುದನ್ನೇ ಆಧಾರವಾಗಿಟ್ಟುಕೊಂಡಿದ್ದ ಬಾಬಾ ರಾಮ್‌ದೇವ್, ತಾವು ಕರೊನಾಕ್ಕೆ ಸೂಕ್ತ ಔಷಧ ಕಂಡುಹಿಡಿದಿರುವುದಾಗಿ ಹೇಳಿದ್ದರು. ಮೊದಲಿಗೆ ವೈಜ್ಞಾನಿಕವಾಗಿ ಲಸಿಕೆ ಕಂಡುಹಿಡಿಯಲಾಗಿದೆ ಎಂದು ಹೇಳಿ ನಂತರ ಅದು ಅಷ್ಟು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಜ್ಞರು ಹೇಳಿರುವುದನ್ನೇ ಪುನರುಚ್ಚರಿಸಿದ್ದ ಬಾಬಾ ರಾಮ್‌ದೇವ್ ಈ ಮಾತನ್ನು ಹೇಳಿದ್ದರು. ವೈದ್ಯರು ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ವೈಜ್ಞಾನಿಕವಾದ ಆಧಾರವಿಲ್ಲದೇ ಜನರ ಜೀವನದ ಮೇಲೆ ಬಾಬಾ ರಾಮ್‌ದೇವ್ ಆಟವಾಡುತ್ತಿದ್ದಾರೆ. ಅವರ ಔಷಧ ಯಾವುದೇ ರೀತಿಯಲ್ಲಿ ಸೂಕ್ತ ಪರಿಣಾಮ ಬೀರುತ್ತದೆ ಎಂಬುದಕ್ಕೆ ಆಧಾರವೇ ಇಲ್ಲ ಎಂದು ಕೋರ್ಟ್‌ನಲ್ಲಿ ಈ ವೈದ್ಯರು ವಾದಿಸಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿಗಳು, ಬಾಬಾ ರಾಮ್‌ದೇವ್ ಅವರು ತಮ್ಮ ಔಷಧವನ್ನು ಪ್ರಚಾರ ಮಾಡಿದ್ದಾರಷ್ಟೇ. ತಮ್ಮ ಪ್ರಾಡಕ್ಟ್‌ಗಳ ಪ್ರಚಾರ ಮಾಡುವ ಅಧಿಕಾರ ಎಲ್ಲರಿಗೂ ಇದೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಜತೆಗೆ ಅಲೋಪಥಿ ವಿರುದ್ಧ ಅವರು ನೀಡಿರುವ ಹೇಳಿಕೆಯ ಬಗ್ಗೆಯೂ ನ್ಯಾಯಮೂರ್ತಿಗಳು ವೈದ್ಯರನ್ನು ಪ್ರಶ್ನಿಸಿ ವಿಚಾರಣೆಯನ್ನು ಮುಂದೂಡಿದರು.