ಬೆಂಗಳೂರು : ಓದಿನಲ್ಲಿ ಆಸಕ್ತಿ ಇಲ್ಲವೆಂದು, ಕ್ರೀಡಾ ಸಾಧನೆಗೆ ಓದು ಅಡ್ಡಿಯಾಗೆದೆ ಎಂದು ಪತ್ರ ಬರೆದು 7 ಮಕ್ಕಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಮೂರು ಮಕ್ಕಳು, ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮಕ್ಕಳು ಕಾಣೆಯಾಗಿರುವ ಘಟನೆ ನಡೆದಿದೆ.
ಬಾಗಲಗುಂಟೆ ಠಾಣಾ ವ್ಯಾಪ್ತಿಯ 15 ವರ್ಷದ ಕಿರಣ್, ಪರೀಕ್ಷಿತ್, ನಂದನ್ ನಾಪತ್ತೆಯಾಗಿರುವ ಮಕ್ಕಳು. ಇವರು ಸೌಂದರ್ ಸ್ಕೂಲ್ನಲ್ಲಿ 10 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳು. ನಿನ್ನೆ ಬೆಳಗ್ಗೆ ವಾಕಿಂಗ್ ತೆರಳಿದ್ದ ವೇಳೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಪೋಷಕರು ಶಾಲೆಗೆ ಹೋಗಿ ವಿಚಾರಿಸಿದಾಗ ಅಲ್ಲೂ ಕೂಡ ಮಕ್ಕಳ ಸುಳಿವು ಸಿಕ್ಕಿಲ್ಲ. ಇನ್ನು ಅವರ ಮೊಬೈಲ್ ಫೋನ್ಗಳೂ ಕೂಡ ಸ್ವಿಚ್ ಆಫ್ ಆಗಿವೆ ಎನ್ನಲಾಗಿದೆ. ಬಾಗಲಗಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇತ್ತ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಸಹ ಓರ್ವ ಯುವತಿ ಸೇರಿ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ. ಎಜಿಬಿ ಲೇಔಟ್ನಲ್ಲಿರುವ ಕ್ರಿಸ್ಟಲ್ ಅಪಾರ್ಟ್ಮೆಂಟ್ನಲ್ಲಿ ಈ ಮಕ್ಕಳು ವಾಸವಿದ್ದರು ಎನ್ನಲಾಗಿದೆ. ರಾಯನ್ ಸಿದ್ದಾಂತ (12), ಅಮೃತ ವರ್ಷಿಣಿ (21) ಭೂಮಿ (12) ಚಿಂತನ್ (12) ನಾಪತ್ತೆಯಾದ ಮಕ್ಕಳು.
ಎಲ್ಲರು ಒಂದೇ ರೀತಿ ಪತ್ರ ಬರೆದು ಪತ್ರದಲ್ಲಿ ಸ್ಪೋರ್ಟ್ಸ್ ಐಟಂ ಜೊತೆಗೆ ಸ್ಲಿಪ್ಪರ್, ಬ್ರಶ್, ಟೂತ್ ಪೇಸ್ಟ್, ವಾಟರ್ ಬಾಟಲ್, ಕ್ಯಾಶ್ ತರಬೇಕೆಂದು ಪತ್ರ ಬರೆದು ಇಂದು ಬೆಳಗ್ಗೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾದ ಮಕ್ಕಳ ಪೋಷಕರಿಂದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಗುಂಟೆ ಹಾಗೂ ಸೋಲದೇವನಹಳ್ಳಿ ಪೊಲೀಸ್ ಠಾಣೆ ಸೇರಿ ಒಟ್ಟು 7 ಮಕ್ಕಳು ನಾಪತ್ತೆಯಾಗಿದ್ದಾರೆ. ಪ್ರಕರಣ ಸಂಬಂಧ ಪ್ರತ್ಯೇಕವಾಗಿ ಎರಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ನಾಪತ್ತೆಯಾದ ಮಕ್ಕಳಿಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ.
ಮಕ್ಕಳ ಆಸಕ್ತಿ, ಅಭಿರುಚಿಗಳನ್ನು ಗುರುತಿಸಬೇಕು. ಓದಿನ ಜೊತೆಗೆ ಅವರಿಗೆ ಆಟವು ಮುಖ್ಯ, ಆದರೆ ಬಹಳಷ್ಟು ಜನ ಪೋಷಕರು ಆಟ ಆಡಿದರೆ ಸಮಯ ವ್ಯರ್ಥ ಎಂದು ಮಕ್ಕಳ ಮೇಲೆ ಓದಿನ ಒತ್ತಡ ಹೇರುತ್ತಾರೆ. ಹಾಗಾಗಿ ಮಕ್ಕಳು ಈ ನಿರ್ಧಾರಕ್ಕೆ ಮಾನಸಿಕ ಒತ್ತಡವೇ ಕಾರಣ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.