ಬೆಂಗಳೂರು: 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯದಲ್ಲಿರುವ 48 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಓಟ ಕಾರ್ಯಕ್ರಮವನ್ನು ಇಂದಿನಿಂದ ಅಕ್ಟೋಬರ್ 2 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದರು.
ಆಗಸ್ಟ್ 15 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಿಂದ ಚಿಕ್ಕಮಗಳೂರುವರೆಗೆ ಸೈಕಲ್ ಜಾಥಾ ನಡೆಯಲಿದ್ದು ಇದರಲ್ಲಿ 75 ಮಂದಿ ಭಾಗಿಯಾಗಲಿದ್ದಾರೆ. ಆಗಸ್ಟ್ 15ರಂದು ರಾಜ್ಯದ 75 ಶಾಲೆಗಳಲ್ಲಿ ಮ್ಯೂರಲ್ ಪೇಂಟಿಂಗ್ ಕಾರ್ಯಕ್ರಮ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಎಂಬ ವಿಷಯದ ಶೀರ್ಷಿಕೆಯಡಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ.25 ಸಾವಿರ ಮತ್ತು ದ್ವಿತೀಯ ಬಹುಮಾನ ರೂ.15 ಸಾವಿರ ಮತ್ತು ತೃತೀಯ ಬಹುಮಾನ ರೂ.10 ಸಾವಿರ ನೀಡಲು ತೀರ್ಮಾನಿಸಲಾಗಿದೆ ಎಂದರು.
ಸ್ವಾತಂತ್ರೋತ್ಸವದ ಅಮೃತೋತ್ಸವದ ಅಂಗವಾಗಿ ‘ಶಿಖರದಿಂದ ಸಾಗರ’ ಎಂಬ ಅಭಿಯಾನ ನಡೆಯಲಿದೆ. ರಾಜ್ಯ ಐವರು ಯುವತಿಯರು ಕಾಶ್ಮೀರದಲ್ಲಿ ಕೊಲ್ಹೋಯ್ ಪರ್ವತ ಏರಲಿದ್ದಾರೆ. ಬಳಿಕ 3 ಸಾವಿರ ಕಿಲೊ ಮೀಟರ್ ಸೈಕಲ್ ಯಾತ್ರೆಯ ಮೂಲಕ ಕಾರವಾರಕ್ಕೆ ಆಗಮಿಸಲಿದ್ದಾರೆ. ಕಾರವಾರದಿಂದ ರಾಜ್ಯದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ ಸಮುದ್ರದಲ್ಲಿ ಕಯಾಕಿಂಗ್ ಯಾನದ ಮೂಲಕ ಮಂಗಳೂರು ತಲುಪುತ್ತಾರೆ ಎಂದು ಸಚಿವ ನಾರಾಯಣಗೌಡ ಹೇಳಿದರು.
ಆಗಸ್ಟ್ 17 ರಿಂದ ಆರಂಭವಾಗುವ 45 ದಿನಗಳ ಸಾಹಸ ಯಾತ್ರೆಯಲ್ಲಿ ಮಡಿಕೇರಿಯ ಪುಷ್ಪ, ಶಿವಮೊಗ್ಗದ ಐಶ್ವರ್ಯ, ಧನಲಕ್ಷ್ಮಿ, ಬೆಂಗಳೂರಿನ ಆಶಾ ಮತ್ತು ಮೈಸೂರಿನ ಬಿಂದು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್–2021 ಅನ್ನು ಬೆಂಗಳೂರಿನಲ್ಲಿ 2022 ರ ಮಾರ್ಚ್ 5 ರಿಂದ 12 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಈ ವರ್ಷ ನಡೆಯಬೇಕಿದ್ದ ಈ ಪಂದ್ಯಾವನ್ನು ಕೋವಿಡ್ ಕಾರಣಗಳಿಂದಾಗಿ ನಡೆಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.