ಗುವಾಹಟಿ: ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂದು 11 ಮಂದಿ ಮೃತಪಟ್ಟಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. ಮೃತರ ಸಂಖ್ಯೆ 82ಕ್ಕೆ ಏರಿದ್ದು, ಒಟ್ಟಾರೆ 47 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಈಶಾನ್ಯ ರಾಜ್ಯವಾದ ಅಸ್ಸಾಂನ 36 ಜಿಲ್ಲೆಗಳ ಪೈಕಿ 32ರಲ್ಲಿ ಕಳೆದೊಂದು ವಾರದಿಂದ ಪ್ರವಾಹ ಸ್ಥಿತಿ ಇದೆ. ನದಿಗಳು ಉಕ್ಕಿಹರಿದಿದ್ದು ರಾಜ್ಯದ ಒಟ್ಟು 5,424 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. ಸಂತ್ರಸ್ತರಿಗಾಗಿ ವಿವಿಧೆಡೆ 810 ಪರಿಹಾರ ಶಿಬಿರ ಸ್ಥಾಪಿಸಿದ್ದು, ಸುಮಾರು 2.31 ಲಕ್ಷ ಜನರು ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಕೊಪಿಲಿ, ಬ್ರಹ್ಮಪುತ್ರ, ಪುಥಿಮರಿ, ಪಾಗ್ಲಡಿಯ, ಬೆಕಿ ಬರಾಕ್, ಕುಶಿಯಾರ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ವಿವಿಧ ಜಿಲ್ಲೆಗಳ ನಗರ ಪ್ರದೇಶಗಳಲ್ಲಿಯೂ ಪ್ರತಿಕೂಲ ಪರಿಣಾಮ ವ್ಯಕ್ತವಾಗಿದೆ.
ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಜ್ಯದ ಎಲ್ಲಾ 32 ಜಿಲ್ಲೆಗಳು ಪ್ರವಾಹದ ಬಿಕ್ಕಟ್ಟಿಗೆ ಸಿಲುಕಿವೆ. ಕೊಪಿಲಿ ನದಿಯ ಪ್ರವಾಹದಲ್ಲಿ ಸಿಲುಕಿ ನಲುಗಿದ ಜನರನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಒಬ್ಬ ಪೊಲೀಸ್ ಅಧಿಕಾರಿ ಮತ್ತು ಒಬ್ಬ ಕಾನ್‌ಸ್ಟೆಬಲ್ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 82 ದಾಟಿದೆ ಎಂದು ಪ್ರಕಟಣೆ ನೀಡಿದೆ.
ಅಸ್ಸಾಂನಲ್ಲಿ ಒಟ್ಟು 1,13,485.37 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, 5,000ಕ್ಕೂ ಹೆಚ್ಚು ಹೆಕ್ಟೇರ್ ಜಮೀನು ಮುಳುಗಡೆಯಾಗಿವೆ. 5,232 ಜಾನುವಾರುಗಳು ಕೊಚ್ಚಿಹೋಗಿವೆ. ಪ್ರವಾಹದಿಂದ ತೊಂದರೆಗೀಡಾಗಿರುವ 47 ಲಕ್ಷ ಜನರಲ್ಲಿ ಅರ್ಧದಷ್ಟು ಜನರು ನಾಲ್ಕು ಪಶ್ಚಿಮ ಜಿಲ್ಲೆಗಳಾದ ಬಾರ್ಪೇಟಾ, ಬಕ್ಸಾ, ಗೋಲ್ಪಾರಾ ಮತ್ತು ಕಾಮ್ರೂಪ್‌ಗೆ ಸೇರಿದವರು. ಬಾರ್ಪೇಟಾದ ಶೇ. 21ರಷ್ಟು ಪ್ರದೇಶ ಪ್ರವಾಹದಲ್ಲಿ ಮುಳುಗಡೆಯಾಗಿದೆ.
ಮೇಘಾಲಯದಲ್ಲಿ ಕಳೆದ ಎರಡು ತಿಂಗಳಲ್ಲಿ ಎದುರಾದ ಭಾರೀ ಪ್ರವಾಹ ಮತ್ತು ಭೂಕುಸಿತದಿಂದ 30 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಗೃಹ ಸಚಿವ ಅಮಿತ್ ಶಾ ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮ ಅವರನ್ನು ಸಂಪರ್ಕಿಸಿ ಪ್ರವಾಹದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ‘ಕೇಂದ್ರ ಗೃಹ ಸಚಿವರು ಎರಡು ಬಾರಿ ಕರೆ ಮಾಡಿದ್ದರು. ಶೀಘ್ರವೇ ನಷ್ಟ ಅಂದಾಜು ಮಾಡಲು ಕೇಂದ್ರ ತಂಡ ಕಳುಹಿಸುವ ಭರವಸೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಟ್ವೀಟ್ ಮಾಡಿದ್ದು, ‘ಬಾಧಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಚುರುಕುಗೊಳಿಸಲಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪರಿಹಾರ ಕಾರ್ಯಗಳಿಗೆ ದಲೈಲಾಮ ನೆರವು
ಮುಖ್ಯಮಂತ್ರಿ ಹಿಮಂತ್ ಬಿಸ್ವಶರ್ಮಾ ಅವರಿಗೆ ಪತ್ರ ಬರೆದಿರುವ ಟಿಬೆಟ್ ಧಾರ್ಮಿಕ ನಾಯಕ ದಲೈಲಾಮ, ನಿರೀಕ್ಷೆ ಮೀರಿದ ಮಳೆ, ಪ್ರವಾಹದ ಕಾರಣ ಆಗಿರುವ ಅವಘಡಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ‘ಇದು, ದುರದೃಷ್ಟಕರ. ಜನರಿಗೆ ತೀರಾ ಸಂಕಷ್ಟವಾಗಿದೆ. ಆಪ್ತರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪಗಳು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪರಿಹಾರ ಕಾರ್ಯಗಳಿಗೆ ದೇಣಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.