ಬೆಂಗಳೂರು : ರಾಜ್ಯ ಸರಕಾರದ ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತ ಪಡಿಸಿ’ ತಮ್ಮ ಪಠ್ಯವನ್ನು ಕೈ ಬಿಡುವಂತೆ ಹಿರಿಯ ಸಾಹಿತಿ ದೇವನೂರು ಮಹದೇವರವರು ಬಹಿರಂಗ ಪತ್ರ ಬರೆದ ಬೆನ್ನಲ್ಲೆ ಇನ್ನೊಬ್ಬ ಹಿರಿಯ ಸಾಹಿತಿ ಜಿ. ರಾಮಕೃಷ್ಣ ತಮ್ಮ ಪಾಠವನ್ನು ಕೈ ಬಿಡುವಂತೆ ಆಗ್ರಹವನ್ನು ಮಾಡಿದ್ದಾರೆ.
ಈ ಕುರಿತು ಜನಶಕ್ತಿ ಮೀಡಿಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ವಿಷಯವನ್ನು ಖಚಿತ ಪಡಿಸಿದ್ದಾರೆ. ಇದರಲ್ಲಿ ನನ್ನ ಪಾಠ ಸೇರಿದೆಯೋ ಇಲ್ಲವೋ ಗೊತ್ತಿಲ್ಲ, ಅಕಸ್ಮಾತ್ ಸೇರಿಸಿದ್ದರೆ ನನ್ನ ಪಾಠವನ್ನು ಕೈ ಬಿಡಿ ಎಂದು ಆಗ್ರಹಿಸುತ್ತಿದ್ದೇನೆ ಎಂದರು.
ಮುಂದುವರಿದು ಮಾತನಾಡಿದ ಜಿ. ರಾಮಕೃಷ್ಣ ರವರು ‘ನಮ್ಮ ರಾಜ್ಯದ ಶಾಲೆಗಳ ಪಠ್ಯಪುಸ್ತಕಗಳ ತಥಾಕಥಿತ ಪರಿಷ್ಕರಣೆಯು ತೀರಾ ಅಪಾಮಾರ್ಗದಲ್ಲಿ ಸಾಗುತ್ತಿರುವುದು ಜಗಜ್ಜಾಹೀರಾಗಿದೆ. ಅದು ಕೇವಲ ಅಬದ್ಧ ಮತ್ತು ಅವೈಚಾರಿಕ ಪ್ರಕ್ರಿಯೆಯಾಗಿ ಉಳಿದಿಲ್ಲ. ಶಿಕ್ಷಣವನ್ನು ಕೆಟ್ಟ ರಾಜಕೀಯಕ್ಕೆ ಗುರಿಮಾಡಲಾಗುತ್ತಿರುವುದು ಸರ್ವಥಾ ಕ್ಷಮಾರ್ಹವಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿ ದುರಂತ. ಈ ಹಿನ್ನೆಲೆಯಲ್ಲಿ ನನ್ನ ಯಾವುದೇ ಬರಹವನ್ನು ಪಠ್ಯಪುಸ್ತಕದ ಪರಿಧಿಯಿಂದ ಹೊರಗಿಡುವುದು ಸೂಕ್ತವೆಂದು ಭಾವಿಸಿ ನನ್ನ ಯಾವುದಾದರು ಬರಹವನ್ನು ಆಯ್ಕೆ ಮಾಡಿಕೊಂಡಿದ್ದರು ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲವೆಂಬುದನ್ನು ಖಚಿತಪಡಿಸುತ್ತಿದ್ದೇನೆ ಎಂದು ಜಿ.ರಾಮಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.