ಕೋಲಾರ: ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಅಂಗವಾಗಿ ರೈತ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಬೃಹತ್ ಹೋರಾಟವು ಆಗಸ್ಟ್ 9 ರಂದು ದೇಶಾದ್ಯಂತ ನಡೆಯಲಿದ್ದು, ಅದರ ಪ್ರಚಾರಾಂದೋಲನದ ಭಾಗವಾಗಿ ಕೆಪಿಆರ್ ಎಸ್ ಹಾಗೂ ಸಿಐಟಿಯು ನೇತೃತ್ವದಲ್ಲಿ ತಾಲೂಕಿನ ಹುತ್ತೂರು ಹೋಬಳಿಯ ಹಳ್ಳಿಗಳಲ್ಲಿ ಶುಕ್ರವಾರ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರಕಾರ ಪ್ರತೀ ಹೆಜ್ಜೆಯಲ್ಲಿಯೂ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನು ಸರ್ವನಾಶಗೊಳಿಸುತ್ತಿದೆ. ಜನತೆಯ ಹಿತ ಕಾಪಾಡುವ ಬದಲು ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಆ ಮೂಲಕ ದೇಶದ ಅಮೂಲ್ಯ ಸಂಪತ್ತುಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಧಾರೆ ಎರೆದು ಕೊಡುತ್ತಿದೆ. ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರವು ದೇಶದ ಕೃಷಿರಂಗವನ್ನೇ ಬುಡಮೇಲುಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ಅಂದು ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ದೇಶದ ಸಂಪತ್ತನ್ನು ದೋಚಿದ ಬ್ರಿಟೀಷರ ವಿರುದ್ದ ದೇಶದ ಜನತೆ ಸಮರಧೀರ ಹೋರಾಟ ನಡೆಸಿದರೆ. ಇಂದು ನಮ್ಮ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ನೂರಾರು ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ದೇಶದ ರೈತ ಕಾರ್ಮಿಕರು ಒಂದಾಗಿ ಪ್ರಬಲ ಚಳುವಳಿ ರೂಪಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರಾದ ವಿ.ನಾರಾಯಣರೆಡ್ಡಿ, ಹೊಲ್ಲಂಬಳ್ಳಿ ವೆಂಕಟೇಶಪ್ಪ, ಭೀಮರಾಜ್, ಅಪ್ಪಯ್ಯಣ್ಣ, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಕಲ್ಪನಾ, ವೆಂಕಟಲಕ್ಷ್ಮಮ್ಮ, ರಾಜಮ್ಮ ಗ್ರಾಮ ಪಂಚಾಯಿತಿ ನೌಕರರ ಸಂಘದ ಮುನಿವೆಂಕಟಪ್ಪ, ಮುತಾಂದವರು ಇದ್ದರು