ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 4,435 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದೀಗ ದಾಖಲಾಗಿರುವ ಹೊಸ ಪ್ರಕರಣಗಳ ಸಂಖ್ಯೆ ಕಳೆದ ಆರು ತಿಂಗಳಲ್ಲೇ ಅಧಿಕವಾಗಿದೆ. 2022 ಸೆಪ್ಟೆಂಬರ್ 25ರಂದು ದಾಖಲಾದ 4,777 ಕೋವಿಡ್ ಪ್ರಕರಣಗಳು ಇಲ್ಲಿವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.47 ಕೋಟಿಗೆ (4,47,33,719) ಏರಿಕೆಯಾಗಿದೆ. ಆ ಪೈಕಿ 5,30,916 ಮಂದಿ ಸಾವಿಗೀಡಾಗಿದ್ದಾರೆ.
ಕೋವಿಡ್‌ನಿಂದಾಗಿ ಮಂಗಳವಾರ ಮಹಾರಾಷ್ಟ್ರದಲ್ಲಿ 4, ದೆಹಲಿ, ಗುಜರಾತ್, ಕರ್ನಾಟಕ, ಪುದುಚೇರಿ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 23,091ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ : ಕೋವಿಡ್ ಹೆಚ್ಚಳ: ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ
ಪಾಸಿಟಿವಿಟಿ ದರ ಶೇ 3.38 ರಷ್ಟಿದ್ದರೆ, ಚೇತರಿಕೆ ಪ್ರಮಾಣ ಶೇ 98.76 ರಷ್ಟಿದೆ. ಉಳಿದಂತೆ ಸಾವಿನ ಪ್ರಮಾಣ ಶೇ 1.19 ರಷ್ಟಿದೆ. ದೇಶದಾದ್ಯಂತ ಇದುವರೆಗೆ 220.66 ಕೋಟಿ ಕೋವಿಡ್ ಡೋಸ್ ಲಸಿಕೆ ವಿತರಿಸಲಾಗಿದೆ.