ದೆಹಲಿ: ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಕಾಂಗ್ರೆಸ್ ನಲ್ಲಿ ಇರುವಾಗಲೆ ಡಿ.ಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯನವರನ್ನು ಮುಂದಿನ ವಾರ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಲಿದೆ. ಕೆಲ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು, ಇನ್ನು ಕೆಲ ಕೈ ಕಾರ್ಯಕರ್ತರು ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಕೂಗುತ್ತಿದ್ದಾರೆ. ವಿಧಾನ ಸಭೆ ಚುನಾವಣೆಗೆ ಹೆಚ್ಚು ಕಡಿಮೆ ಎರಡು ವರ್ಷವಿರುವಾಗಲೇ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ಜೋರಾಗಿದೆ. ಈ ಬಗ್ಗೆ ಚರ್ಚಿಸಲು ರಾಷ್ಟ್ರ ರಾಜಧಾನಿ ದೆಹಲಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರೆಸಿಕೊಂಡು ಚರ್ಚಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಸೋಮವಾರ ಇಬ್ಬರೂ ದೆಹಲಿಗೆ ತೆರಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗಳ ಬಗ್ಗೆ ರಾಹುಲ್ ಗಾಂಧಿ ಚರ್ಚೆ ನಡೆಸುತ್ತಾರೆ. ಪದಾಧಿಕಾರಿಗಳ ನೇಮಕ, ಸಿಎಂ ಹೇಳಿಕೆ ಗಲಾಟೆ ಸೇರಿದಂತೆ ಎಲ್ಲಾ ಬೆಳವಣಿಗೆಗಳ ಕುರಿತು ರಾಹುಲ್ ಚರ್ಚೆ ನಡೆಸಬಹುದು. ಆರಂಭದಲ್ಲಿ ಒಬ್ಬೊಬ್ಬರನ್ನೇ ಕರೆದು ಚರ್ಚೆ ನಡೆಸುವ ರಾಹುಲ್, ಬಳಿಕ ಇಬ್ಬರನ್ನೂ ಒಟ್ಟಿಗೆ ಕರೆದುಕೊಂಡು ಚರ್ಚೆ ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಸಿಎಂ ಖುರ್ಚಿಯ ಮೇಲೆ ಎಲ್ಲರ ಕಣ್ಣು?!
ಶೀತಲ ಸಮರಕ್ಕೆ ಬ್ರೇಕ್’ ಹಾಕಿದ ಡಿನ್ನರ್ ಪಾರ್ಟಿ : ನಿನ್ನೆ ನಡೆದ ಡಿನ್ನರ್ ಪಾರ್ಟಿ ಶೀತಲ ಸಮರಕ್ಕೆ ಬ್ರೇಕ್ ಹಾಕಿದ್ದು, ಮುಕ್ತವಾಗಿ ಮಾತಾಡಲು ವೇದಿಕೆಯನ್ನು ಸೃಷ್ಟಿಸಿತ್ತು. ಇನ್ನು ಮುಂದೆ ಯಾರೂ ಕೂಡ ಮುಂದಿನ ಸಿಎಂ ವಿಚಾರ ಬಹಿರಂಗವಾಗಿ ಹೇಳದಂತೆ ತೀರ್ಮಾನ ಮಾಡಲಾಗಿದೆ. ಕಾರ್ಯಕರ್ತರು ಕೂಡಾ ಘೋಷಣೆ ಕೂಗದಂತೆ ಜಾಗೃತೆ ವಹಿಸಬೇಕು ಎಂದು ಶಾಸಕರುಗಳಿಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ನಿನ್ನೆಯ ಡಿನ್ನರ್ ಪಾರ್ಟಿ ಉಭಯ ನಾಯಕರ ಮನಸ್ಸಿನ ಮಾತುಗಳಿಗೆ ಮುಕ್ತ ಅವಕಾಶವನ್ನು ಮಾಡಿಕೊಟ್ಟಿತ್ತು. ಮುಕ್ತ ಮಾತುಕತೆ ಬಳಿಕ ಒಬ್ಬರನ್ನೊಬ್ಬರು ಹೊಗಳಿಕೊಂಡಿದ್ದು, ಸಿದ್ದು ಡಿಕೆಶಿ ಈಗ ಬಾಯಿ- ಬಾಯಿ ಆಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅಧಿಕಾರ ಪಡೆಯುವುದು ಮುಖ್ಯ ಗುರಿ : ನಾಲ್ಕು ಘಂಟೆಗಳ ಸುದೀರ್ಘ ಮಾತುಕತೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ನನಗೂ ಮತ್ತು ಸಿದ್ದರಾಮಯ್ಯನಿಗೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಇಬ್ಬರು ಸೇರಿ ಸಂಘಟನೆ ಮಾಡ್ತೀವಿ. ನಮಗೆ ಯಾವುದೇ ವೈಯುಕ್ತಿಕ ದ್ವೇಷ ಇಲ್ಲ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಿ ಪಕ್ಷವನ್ನು ಬಲ ಪಡಿಸುತ್ತೇವೆ. ಅಧಿಕಾರಕ್ಕೆ ಬರುವುದು ನಮ್ಮ ಮುಖ್ಯ ಗುರಿ. ಆ ಕೆಲಸವನ್ನು ಬಿಬಿಎಂಪಿ ಮತ್ತು ಜಿ.ಪಂ, ತಾಪಂ ಚುನಾವಣೆಯಿಂದಲೆ ಆರಂಭಿಸುತ್ತೇವೆ. ಸಿಎಂ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಅಂತಿಮವಾಗಲಿದೆ. ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಕೆಲಸಗಳನ್ನು ಕೊಟ್ಟಿದ್ದರೆ. ಆ ಯೋಜನೆಗಳನ್ನು ಮುಂದೆ ಮಾಡಿ ಪ್ರಚಾರ ನಡೆಸುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.