ಮಂಡ್ಯ: ಅಕ್ರಮ ಗಣಿಗಾರಿಕೆ ಪರಿಶೀಲನೆ ಬಳಿಕ ಮಂಡ್ಯದಲ್ಲಿ ಸಂಸದೆ ಸುಮಲತಾ ಮಾತನಾಡಿ, ಈ ದಿನದ ಅಕ್ರಮ ಗಣಿಗಾರಿಕೆ ನೋಡಿ ನನಗೆ ಶಾಕ್ ಆಗಿದೆ. ಇಂತಹ ಸ್ಥಿತಿಯನ್ನ ನಾವು ಚಲನಚಿತ್ರಗಳಲ್ಲಿ ನೋಡಿರ್ತೀವಿ. ಸಂಸದರು, ಡಿಸಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಧ್ಯಮದ ಪ್ರತಿನಿಧಿಗಳು ಭೇಟಿ ನೀಡಿದಾಗ ಕಂಡಿದ್ದು ಭಯಾನಕ. ಪಾಕಿಸ್ತಾನ ಭಾರತದ ಗಡಿಯಲ್ಲೂ ಈ ರೀತಿ ತಡೆ ಇರಲ್ವೇನೋ.. ಸ್ಥಳೀಯರ ಮನವಿ ಮೇರೆಗೆ ನಾನು ಭೇಟಿ ನೀಡಿದ್ದೆ. ಚೆನ್ನೇನಕೆರೆ, ಹಂಗರಹಳ್ಳಿಯಲ್ಲಿನ ಜನರ ಗೋಳು ಕೇಳೋರಿಲ್ಲದಂತಾಗಿದೆ ಎಂದಿದ್ದಾರೆ.
ಸ್ಥಳೀಯರ ಕಷ್ಟ ಕೇಳಿ ನಾನು ಶಾಕ್ ಆಗೋದೆ. ಮನೆಗಳಲ್ಲಿ ಬಿರುಕು ಬಿಟ್ಟಿದೆ, ಚೆನ್ನೇನಹಳ್ಳಿಯಲ್ಲಿನ ಜನರಿಗೆ ಉಸಿರಾಟದ ಸಮಸ್ಯೆಯಾಗಿದೆ, ಹಾರ್ಟ್ ಆಟ್ಯಾಕ್ ಆಗಿದೆ. ಹಂಗರ ಹಳ್ಳಿಯಲ್ಲಿ ದಿನಕ್ಕೆ 500 ಲಾರಿ ಹೋಗ್ತಿದೆ.
ಇದರಿಂದ ಸರ್ಕಾರಕ್ಕೆ ರಾಜಧನವನ್ನೂ ಕಟ್ಟದೆ ಯಾರ್ ಏನ್ ಮಾಡ್ಕೊತ್ತಾರೆ ಅನ್ನೋ ಭಾವನೆ ಇದ್ದಂತೆ ಕಾಣುತ್ತಿದೆ ಎಂದು ಕಿಡಿ ಕಾರಿದರು.
ಸ್ಥಳೀಯ ಶಾಸಕರಿಗೆ ಪ್ರಶ್ನೆ ಮಾಡಿದ ಅವರು.. ನೀವು ರಾಜಕೀಯದಲ್ಲೇ ಸಿನಿಮಾ ತೋರಿಸ್ತಿದ್ದೀರಾ..? ಒಂದೇ ದಿನಕ್ಕೆ ಇಷ್ಟೊಂದು ಪ್ರಮಾಣದ ಅಕ್ರಮ ಕಂಡಿದೆ.. ಇದು ನಿಮಗೆ ಕಂಡಿಲ್ಲವೇ..? ಇಷ್ಟೊಂದು ಅಕ್ರಮ ನಡೀತಿದ್ರೂ ಯಾಕೆ ಸುಮ್ಮನಿದ್ದೀರಿ..? ಇದೆಲ್ಲಾ ನೀವು ಮಾಡಬೇಕಾದ ಕೆಲಸವಲ್ಲವಾ..? ದೊಡ್ಡ ದೊಡ್ಡವರೇ ಬೇನಾಮಿ ಹೆಸರಲ್ಲಿ ಅಕ್ರಮ ಗಣಿಗಾರಿಕೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ಅಕ್ರಮ ಗಣಿಗಾರಿಕೆ ಕುರಿತು ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಸಿಬಿಐ ತನಿಖೆಗೆ ಒತ್ತಾಯಿಸ್ತೇನೆ. ಡಿಸಿ ಸೇರಿದಂತೆ ಎಲ್ಲರನ್ನ ಪ್ರಶ್ನೆ ಮಾಡಬೇಕಿದೆ. ನೀವು ಸರಿಯಾಗಿ ಕೆಲಸ ನಿರ್ವಹಿಸಿ ದಂಡ ವಿಧಿಸಿದ್ದೇ ಆದರೆ ಸಾವಿರ ಕೋಟಿಯಷ್ಟು ದಂಡವನ್ನ ವಸೂಲಿ ಮಾಡಬಹುದು. ನಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಗೂಂಡಾಗಳು ಬಂದು ಅಡ್ಡಿ ಪಡಿಸಿದ್ರು. ಇದೆಲ್ಲಾ ನಿಮಗೆ ಕಾಣ್ತಿಲ್ವಾ..? ಅಥವಾ ಇದನ್ನೆಲ್ಲಾ ನೀವೇ ಮಾಡ್ತಿದ್ದೀರಾ.? ಇದಕ್ಕೆಲ್ಲಾ ಉತ್ತರ ನೀಡಬೇಕು. ಇಂದಿನ ಘಟನೆಗೆ ಸಂಬಂಧಿಸಿದಂತೆ ನೀವು ರಾಜೀನಾಮೆ ನೀಡಬೇಕು. ಇದು ನಿಮ್ಮ ಬೇಜವ್ದಾಬ್ದಾರಿ.. ಇದರಲ್ಲಿ ಅಧಿಕಾರಿಗಳದ್ದೂ ಪಾಲಿದೆ ಎಂದು ಸಂಸದೆ ಸುಮಲತಾ ಕಿಡಿಕಾರಿದ್ದಾರೆ.