ಬೆಂಗಳೂರು : ಕಾಂಗ್ರೆಸ್‍ನಲ್ಲಿ ಜಾತಿಗೊಬ್ಬರಂತೆ ಐವರು ಮುಖ್ಯಮಂತ್ರಿಗಳನ್ನು ಘೋಷಣೆ ಮಾಡಿಕೊಂಡಿದ್ದರೂ ಈ ಜನ್ಮದಲ್ಲಿ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಮುಖ್ಯಮಂತ್ರಿ ಸ್ಥಾನ ಕನಸಾಗಿಯೇ ಉಳಿಯಲಿದೆ, ಸಾಯುತ್ತಿರುವ ಕಾಂಗ್ರೆಸನ್ನು ಉಳಿಸಲಾಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕುರುಬ ಸಮುದಾಯದಿಂದ ಮಾಜಿ ಸಿಎಂ ಸಿದ್ದರಾಮಯ್ಯ , ಒಕ್ಕಲಿಗ ಸಮುದಾಯದಿಂದ ಡಿ.ಕೆ.ಶಿವಕುಮಾರ್ ಪರಿಶಿಷ್ಟ ಜಾತಿ ಸಮುದಾಯದಿಂದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್, ಮುಸ್ಲಿಂ ಸಮುದಾಯದಿಂದ ಮಾಜಿ ಸಚಿವ ತನ್ವೀರ್ ಸೇಠ್ ಅವರನ್ನು ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದರು.
ಬಿಜೆಪಿಯಲ್ಲಿ ಕೆಲವರು ನಾಯಕತ್ವದ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿರುವುದು ನಿಜ. ಅದನ್ನು ನೆಪ ಮಾಡಿಕೊಂಡು ಬಿಜೆಪಿ ಸರ್ಕಾರ ಬಿದ್ದು ಹೋಗುತ್ತದೆ. ಚುನಾವಣೆ ಬರುತ್ತದೆ ಎಂದು ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗುವವರ ಹೆಸರನ್ನು ಮುನ್ನಲೆಗೆ ತಂದರು. ಸಾಮಾಜಿಕ ನ್ಯಾಯ ಹೇಳುವ ಕಾಂಗ್ರೆಸ್ ಜಾತಿಗೊಂದು ಮುಖ್ಯಮಂತ್ರಿ ಹೆಸರನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಿ ದೇಶದಲ್ಲಿ ಎಲ್ಲಿದೆ ಎಂದು ಕಾಂಗ್ರೆಸ್‍ನ್ನು ಹುಡುಕುವ ಪರಿಸ್ಥಿತಿ ಇದೆ. ಆದರೂ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗಲು ಬಡಿದಾಟ ನಡೆಯುತ್ತಿದೆ , ಯುವ ಕಾಂಗ್ರೆಸ್‍ನಲ್ಲೂ ಬಡಿದಾಟ ನಡೆದಿದೆ. ಡಿ.ಕೆ.ಶಿವಕುಮಾರ್ ಅವರ ಕಾಲನ್ನು ಎಳೆಯಲಾಗುತ್ತಿದೆ ಎಂದು ಟೀಕಾ ಪ್ರಹಾರ ಮಾಡಿದರು.
ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬಂದು ಅಭಿಪ್ರಾಯಪಡೆದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮನಸಿನ ಭಾವನೆ ಹೇಳಿದ್ದಾರೆ. ಬಿಜೆಪಿಯಲ್ಲಿ ಹೇಳುವವರು , ಕೇಳುವವರು ಇದ್ದಾರೆ. ಇಬ್ಬರು, ಮೂವರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮಕ್ಕೆ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿದೆ.