ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಸದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ : ಪ್ರಿಯಾಂಕ್‌ ಖರ್ಗೆ ಆಗ್ರಹ

ಕಲಬುರ್ಗಿ: ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಆಯಾ ವರ್ಷದಲ್ಲಿಯೇ ಬಳಕೆ ಮಾಡದ ಅಧಿಕಾರಿಗಳನ್ನು ಜೈಲಿಗೆ ಕಳಿಸಿ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ‌ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ‌ ಕೆಡಿಪಿ ಸಭೆಯಲ್ಲಿ ಬುಧವಾರ ಅವರು ಮಾತನಾಡಿದರು.

ಮೂರು ವರ್ಷದ ಹಿಂದೆ ಅಂದಿನ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ಬಿಡುಗಡೆಯಾದ ಎಸ್ ಸಿ ಪಿ / ಟಿ ಎಸ್ ಪಿ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನ ಬಳಕೆ ಮಾಡದೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನೇ ಪೂರ್ಣಗೊಳಿಸದ ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನು ಪ್ರಕಾರ ಆಯಾ ವರ್ಷದ ಬಿಡುಗಡೆಯಾದ ಅನುದಾನ ಬಳಕೆ ಮಾಡದ ಅಧಿಕಾರಿಗಳನ್ನು ಜೈಲಿಗೆ ಕಳಿಸಲು ಅವಕಾಶವಿದೆ. ಒಂದಿಬ್ಬರು ಅಧಿಕಾರಿಗಳನ್ನು ಜೈಲಿಗೆ ಕಳಿಸಿ ಜಿಲ್ಲೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಎಂದು ಸಚಿವರನ್ನು ಆಗ್ರಹಿಸಿದರು.

ಇದನ್ನೂ ಓದಿ : ಅಬಕಾರಿ ಸಚಿವರಿಗೆ ತಿಂಗಳಿಗೆ 5 ಲಕ್ಷ ಮಾಮೂಲು – ಅಧಿಕಾರಿ ಹೇಳಿಕೆಯ ಆಡಿಯೋ ವೈರಲ್, ನಾಲ್ವರ ಅಮಾನತು

ಸಭೆಯಲ್ಲಿದ್ದ ಅಧಿಕಾರಿಗಳು ಟೆಂಡರ್ ತೆರೆದಿಲ್ಲ. ಕಾಮಗಾರಿಯ ಟೆಂಡರ್ ಬದಲಿಸಲು ಸಂಸದ ಡಾ. ಉಮೇಶ ಜಾಧವ ಅವರು ಮೌಖಿಕ ಸೂಚನೆ ನೀಡಿದ್ದರಿಂದ ಮುಂದಿನ ಪ್ರಕ್ರಿಯೆಗಾಗಿ ನಿರ್ದೇಶನ ನೀಡಲು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆಗ ಮಧ್ಯ ಪ್ರವೇಶಿಸಿದ ಸಚಿವರು ಈ ಕೂಡಲೇ, ಟೆಂಡರ್ ತೆರೆದು ಕಾಮಗಾರಿಗಳನ್ನು ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಲ್ಲಾಮಾರಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿದ್ದು ಈ ಹಿಂದಿನ‌ ಕೆಡಿಪಿ ಸಭೆ ನಡೆಸಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಈ ಕುರಿತು 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದರು. ಈ ಕುರಿತು ವರದಿ ಏನಾಯ್ತು? ಜೊತೆಗೆ ಈ ಮುನ್ನ ವಿಧಾನಸಭೆಯ ಅಧಿವೇಶನದಲ್ಲಿ ನಾನು ಹಾಗೂ ಚಿಂಚೋಳಿ ಶಾಸಕರಾದ ಅವಿನಾಶ್ ಜಾಧವ್ ಅವರು ಪ್ರಶ್ನಿಸಿದಾಗ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸಚಿವರು ಉತ್ತರಿಸಿದ್ದರು. ಆದರೂ ಸದರಿ ತನಿಖೆ ಏನಾಯಿತು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ನಿರಂತರ ಸುದ್ದಿಗಳಿಗಾಗಿ : ನಮ್ಮ ವಾಟ್ಸಪ್‌ ಗುಂಪಿಗೆ ಸೇರಿ ಕೊಳ್ಳಿ

Donate Janashakthi Media

Leave a Reply

Your email address will not be published. Required fields are marked *