25 ವರ್ಷದೊಳಗಿನ 42% ಪದವೀಧರರು ಕೊರೊನಾ ನಂತರ ಉದ್ಯೋಗವಿಲ್ಲದೆ ಇದ್ದಾರೆ: ವರದಿ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ನಂತರ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 42% ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು  ಕಾರ್ಮಿಕ ಮಾರುಕಟ್ಟೆಯ ವರದಿಯು ಬುಧವಾರ ಹೇಳಿದೆ. ಜಾಗತಿಕ ಆರ್ಥಿಕ ಕುಸಿತದ ನಂತರ ಉದ್ಯೋಗ ಸೃಷ್ಟಿಯ ವೇಗ ಕಡಿಮೆಯಾಗಿದೆ ಎಂದು ಅದು ಹೇಳಿದೆ.

ಬೆಂಗಳೂರು ಮೂಲದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ”ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2023: ಸಾಮಾಜಿಕ ಗುರುತುಗಳು ಮತ್ತು ಕಾರ್ಮಿಕ ಮಾರುಕಟ್ಟೆ ಫಲಿತಾಂಶಗಳು” ಎಂಬ ವರದಿಯು ಈ ಮಾಹಿತಿ ಬಹಿರಂಗ ಮಾಡಿದೆ. ಇದು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ನಡೆಸುತ್ತಿರುವ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (2021-22) ಯಿಂದ ಮಾಹಿತಿ ಪಡೆದಿದ್ದಾಗಿ ಉಲ್ಲೇಖಿಸಿದೆ.

ಇದನ್ನೂ ಓದಿ: Kolar| ವೇದಿಕೆ ಮೇಲೆಯೇ ಶಾಸಕ-ಸಂಸದರ ನಡುವೆ ಜಗಳ; ಅವಾಚ್ಯ ಪದಗಳಿಂದ ನಿಂದನೆ

“ನಿರುದ್ಯೋಗ ದರವು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾವಂತ ಯುವಕರಲ್ಲಿ 40% ರಷ್ಟಿದ್ದು, 35 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪದವೀಧರರಿಗೆ 5% ದಷ್ಟಿದೆ. ಭಾರತದ ಆರ್ಥಿಕ ಬೆಳವಣಿಗೆ ಮತ್ತು ಉತ್ತಮ ಉದ್ಯೋಗಗಳ ಹೆಚ್ಚಳದ ನಡುವಿನ ಸಂಬಂಧ ದುರ್ಬಲವಾಗಿದೆ” ಎಂದು ವರದಿ ಹೇಳಿದೆ.

“ಅಂತಿಮವಾಗಿ ಪದವೀಧರರು ಉದ್ಯೋಗಗಳನ್ನು ಕಂಡುಕೊಳ್ಳುತ್ತಾರೆ ಎಂದು ಅಧ್ಯಯನವು ಸೂಚಿಸುತ್ತದೆ. ಆದರೆ ಪ್ರಮುಖ ಪ್ರಶ್ನೆಗಳೆಂದರೆ, ಅವರು ಕಂಡುಕೊಳ್ಳುವ ಉದ್ಯೋಗಗಳ ಸ್ವರೂಪ ಏನಾಗಿರುತ್ತದೆ ಮತ್ತು ಅದು ಅವರ ಕೌಶಲ್ಯ ಮತ್ತು ಆಕಾಂಕ್ಷೆಗಳಿಗೆ ಅದು ಹೊಂದಿಕೆಯಾಗುತ್ತದೆಯೆ ಎಂದಾಗಿದೆ” ಎಂದು ವರದಿಯು ಹೇಳಿದೆ.

ಇದನ್ನೂ ಓದಿ: ‘ಅವಕಾಶ ಸಿಕ್ಕಾಗೆಲ್ಲಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಬಗ್ಗೆ ದೆಹಲಿ ಪೊಲೀಸ್‌

“1990 ರ ದಶಕದಿಂದ ವರ್ಷದಿಂದ ವರ್ಷಕ್ಕೆ ಕೃಷಿಯೇತರ ಜಿಡಿಪಿ ಬೆಳವಣಿಗೆ ಮತ್ತು ಕೃಷಿಯೇತರ ಉದ್ಯೋಗದ ಬೆಳವಣಿಗೆಯು ಪರಸ್ಪರ ಸಂಬಂಧ ಹೊಂದಿಕೆಯಾಗುತ್ತಿಲ್ಲ. ವೇಗದ ಬೆಳವಣಿಗೆಯನ್ನು ಉತ್ತೇಜಿಸುವ ನೀತಿಗಳು ವೇಗವಾಗಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತದೆ ಎಂದೇನಿಲ್ಲ” ಎಂದು ವರದಿ ಹೇಳಿದೆ.

“ಆದಾಗ್ಯೂ, 2004 ಮತ್ತು 2019 ರ ನಡುವೆ, ಆರ್ಥಿಕತೆಯ ಸರಾಸರಿ ಬೆಳವಣಿಗೆಗೆ ಸರಿಯಾಗಿ ಯೋಗ್ಯ ಉದ್ಯೋಗ ಸರಿಸಮವಾಗಿತ್ತು. ಆದರೆ ಕೊರೊನಾ ಸಾಂಕ್ರಾಮಿಕದ ನಂತರ ಇದಕ್ಕೆ ಅಡಚಣೆಯಾಯಿತು, ಉದ್ಯೋಗದ ಲಭ್ಯತೆಗೆ ಕೊರೊನಾ ದೊಡ್ಡ ಅಡಚನೆಯಾಯಿತು” ಎಂದು ಅದು ಹೇಳಿದೆ.

ದೇಶದ ಹಲವು ರಾಜ್ಯಗಳ ಚುನಾವಣೆಗಳು ಈ ವರ್ಷದ ಅಂತ್ಯದ ವೇಳೆ ನಡೆಯಲಿದೆ. ಅಲ್ಲದೆ, ಮೇ 2024 ರಲ್ಲಿ ಲೋಕಸಭಾ ಚುನಾವಣೆ ಕೂಡಾ ನಡೆಯಲಿದೆ. ನಿರುದ್ಯೋಗದ ವಿಚಾರವಾಗಿ ಕೇಂದ್ರವನ್ನು ದೂರಿ ವಿಪಕ್ಷಗಳು ಈಗಾಗಲೆ ಪ್ರತಿಭಟನೆಗಳನ್ನು ನಡೆಸುತ್ತಿವೆ. ಈ ನಡುವೆ ವರದಿ ಬಿಡುಗಡೆಯಾಗಿದೆ. 2016-2018ರ ಅವಧಿಯಲ್ಲಿ 50 ಲಕ್ಷ ಉದ್ಯೋಗಳು ಇಲ್ಲದಾಗಿವೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯವು 2019 ರ ಚುನಾವಣೆಗೆ ಮುನ್ನ ವರದಿ ಮಾಡಿತ್ತು.

ವಿಡಿಯೊ ನೋಡಿ: ಬಳ್ಳಿ ಮಾತ್ರವಲ್ಲ ಬೇರುಗಳನ್ನು ಕೂಡಾ ನಾಶ ಪಡಿಸಬೇಕು: ಚೈತ್ರ ಕುಂದಾಪುರ ವಂಚನೆ ಹಗರಣದ ಬಗ್ಗೆ ಹೋರಾಟಗಾರರ ಆಗ್ರಹ

Donate Janashakthi Media

Leave a Reply

Your email address will not be published. Required fields are marked *