ಮೈಸೂರು: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ಜೊತೆಗಿನ ಜಟಾಪಟಿ ನಂತರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿದ್ದು, ಇದರ ಹಿಂದೆ ಕಣ್ಣಿಗೆ ಕಾಣುವುದಕ್ಕಿಂತ ಬಹುದೊಡ್ಡ ಪಿತೂರಿ ನಡೆದಿದೆ ಎಂಬ ಸುಳಿವು ನೀಡಿದ್ದಾರೆ.
‘ಜಿಲ್ಲಾಧಿಕಾರಿಯಾಗಿ ಬಂದ ಮೊದಲ ಏಳು ತಿಂಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಕಳೆದ ಒಂದು ತಿಂಗಳಲ್ಲಿ ಸಮಸ್ಯೆ ಶುರುವಾಯಿತು. ಜಮೀನು ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿದ್ದೇ ಇದಕ್ಕೆ ಕಾರಣ ಇರಬಹುದು’ ಎಂದು ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೋಮವಾರ ಇಲ್ಲಿ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಮೈಸೂರಿಗೆ ಬಂದ ಒಂದೇ ತಿಂಗಳಲ್ಲಿ ಕೆರೆ ಒತ್ತುವರಿ ತೆರವು ವಿಚಾರಕ್ಕೆ ಕೈಹಾಕಿದೆ. ಸರ್ಕಾರಿ ಭೂಮಿ ರಕ್ಷಣೆಗೆ ಮುಂದಾದೆ. ಕೇರ್ಗಳ್ಳಿ ಕೆರೆ ಒತ್ತುವರಿ ತೆರವು ಮಾಡಿ ನೀರು ತುಂಬಿಸಲು ಪ್ರಯತ್ನಿಸಿದೆ. ಅಯ್ಯಜನಹುಂಡಿ ಮತ್ತು ಕೀರ್ಗಳ್ಳಿ ಕೆರೆಗಳ ಸುತ್ತಲಿನ ಒತ್ತುವರಿಯನ್ನು ತೆರವುಗೊಳಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಕುರುಬರಹಳ್ಳಿಯಲ್ಲಿ ಸರ್ವೆ ಸಂಖ್ಯೆಯಲ್ಲಿ ಕೆಲವು ಸಮಸ್ಯೆಗಳಿದ್ದು ಅದು ಸುಪ್ರೀಂ ಕೋರ್ಟ್‌ಗೆ ಹೋಯಿತು. ಸರ್ವೇ ನಂ 4ರ 1,500 ಎಕರೆಗೂ ಹೆಚ್ಚಿನ ಜಾಗ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲೂ ಉತ್ತಮ ವಕೀಲರನ್ನು ಇಟ್ಟು ಹೋರಾಟ ಮಾಡುತ್ತಿದ್ದೇವೆ’ ಎಂದು ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ವರ್ಗಾವಣೆಯಾಗಿರುವ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
‘ಪ್ರವಾಸೋದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಿದ್ದೆ. ಕೆಲಸ ಮಾಡುವಾಗ ಪ್ರತಿ ದಿನ ಅಡ್ಡಿಪಡಿಸುವುದು ಸರಿಯಲ್ಲ. ಕೋವಿಡ್ ಸಮಯದಲ್ಲಿ ಕೈಗೊಂಡ ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲೂ ಕೆಲವರು ಹಸ್ತಕ್ಷೇಪ ಮಾಡಿದರು’ ಎಂದು ಆರೋಪಿಸಿದರು.
‘ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳ ವಿಚಾರದಲ್ಲಿ ನ್ಯಾಯಾಲಯ ನೇಮಿಸಿದ್ದ ತನಿಖಾ ತಂಡ ಈಗಾಗಲೇ ವರದಿ ನೀಡಿದೆ. ಹೀಗಿದ್ದೂ, ಕೆಲವರು ಮತ್ತೆ ಅದೇ ವಿಚಾರ ಮಾತನಾಡುತ್ತಿದ್ದಾರೆ’ ಎಂದರು. ಒಟ್ಟಿನಲ್ಲಿ ಸರಕಾರಿ ಭೂಮಿ ರಕ್ಷಿಸಲು ಮುಂದಾಗಿದ್ದಕ್ಕೆ ನನ್ನನ್ನು ವರ್ಗಾವಣೆ ಮಅಡಿದ್ದಾರೆ. ನಾನು ಎಲ್ಲೆ ಇದ್ದರೂ ಜನರ ಪರವಾಗಿ ಕೆಲಸ ಮಾಡುತ್ತೇನೆ. ಇನ್ಯಾರದೋ ಹಿತ ನನಗೆ ಮುಖ್ಯ ಅಲ್ಲ. ಸರಕಾರಿ ಭೂಮಿ ಉಳಿಸಲು ಇನ್ನಷ್ಟು ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.