ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುವುದಾಗಿ 4.10 ಕೋಟಿ ವಂಚಿಸಿದ್ದ ನಾಲ್ವರ ಬಂಧನ

ಬೆಂಗಳೂರು:ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ 4.10 ಕೋಟಿ ರೂ. ಪಡೆದುಕೊಂಡು ಸಿಎಂ, ರಾಜ್ಯಪಾಲರ ನಕಲಿ ಸಹಿ ಇರುವ ನಡಾವಳಿ ಪತ್ರವನ್ನು ನೀಡಿ ವಂಚಿಸಿದ್ದ ಏಳು ಮಂದಿಯ ಪೈಕಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತಾವರೆಕೆರೆಯ ರಿಯಾಜ್ ಅಹಮ್ಮದ್ (41),  ಚಿಕ್ಕಮಗಳೂರಿನ ಮೂಡಿಗೆರೆಯ ನಿರ್ದೇಶಕರ ಕಚೇರಿಯಲ್ಲಿನ ತೋಟಗಾರಿಕಾ ಸಹಾಯಕ ಅಧಿಕಾರಿ ಚಂದ್ರಪ್ಪ(44), ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ರುದ್ರೇಶ್(35) ಹಾಗೂ ಯೂಸೂಫ್ ಸುಬ್ಬೇಕಟ್ಟೆ(47) ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿಹೆಚ್ಚುತ್ತಿರುವ ತಾಪಮಾನ:ವಹಿಸಬೇಕಾದ ಎಚ್ಚರಿಕೆ: ಹವಾಮಾನ ಇಲಾಖೆ ನೀಡಿದ‌ ಸೂಚನೆಗಳೇನು?

ಪ್ರಮುಖ ಆರೋಪಿ ರಿಯಾಜ್ ಎಂಬಾತ ತಮ್ಮ ಸ್ನೇಹಿತರಾದ ಯುಸೂಫ್, ಚೇತನ್ ಶಂಕರ್, ಚಂದ್ರಪ್ಪ, ಮಹೇಶ್, ರುದ್ರೇಶ ಮತ್ತು ಹರ್ಷವರ್ಧನ ರೊಂದಿಗೆ ಸೇರಿಕೊಂಡು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸದಸ್ಯತ್ವ ಕೊಡಿಸುವುದಾಗಿ ನೀಲಮ್ಮ ಎಂ ಬೆಳಮಗಿ(54) ಎಂಬುವವರಿಗೆ ನಂಬಿಸಿ ಅದಕ್ಕೆ 5ಕೋಟಿ ಕೊಡಬೇಕಾಗುವುದು ಎಂದು ಹೇಳಿದ್ದಾರೆ.

ಇವರ ಮಾತನ್ನು ನಂಬಿದ ನೀಲಮ್ಮ ಅವರು ಹಂತ ಹಂತವಾಗಿ ಒಟ್ಟು 4.10 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಹಾಗೂ ಬ್ಯಾಂಕ್ ಖಾತೆಯ ಮೂಲಕ ವರ್ಗಾವಣೆ ಮಾಡಿದ್ದಾರೆ.ಈ ವಂಚಕರು ಹಣವನ್ನು ಪಡೆದುಕೊಂಡು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಸಂಬಂಧ ಮುಖ್ಯಮಂತ್ರಿ ಟಿಪ್ಪಣಿ, ನಡಾವಳಿ, ನಕಲಿ ಸಹಿಗಳನ್ನು ಮಾಡಿ, ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯಪತ್ರವನ್ನು ಸೃಷ್ಟಿಸಿ ಮೋಸ ಮಾಡಿರುವುದು ನೀಲಮ್ಮ ಅವರಿಗೆ ಗೊತ್ತಾಗಿದೆ.

ತಕ್ಷಣ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಂಚಕರ ಜಾಲದ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ ಪ್ರಮುಖ ಆರೋಪಿ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ಉಳಿತ ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *