ʻಬಿಜೆಪಿ ಅಂದ್ರೆ ಭ್ರಷ್ಟಾಚಾರʼ ಅಭಿಯಾನ ಆರಂಭಿಸಿದ ಕಾಂಗ್ರೆಸ್‌

ಬೆಂಗಳೂರು: ನಮ್ಮ ರಾಜ್ಯ ಹಾಗೂ ಬೆಂಗಳೂರು ನಗರ ಐಟಿ ಕ್ಯಾಪಿಟಲ್, ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಎಜುಕೇಶನ್ ಹಬ್ ಎಂದು ಖ್ಯಾತಿ ಪಡೆದಿದೆ. ಇದಕ್ಕೆ ಹಲವರ ಕೊಡುಗೆ ಇದೆ. ಆದರೆ ಈಗ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ‘ದೇಶದ ಭ್ರಷ್ಟಾಚಾರದ ರಾಜಧಾನಿ’ ಎಂದು ಕುಖ್ಯಾತಿ ಬಂದಿದೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೂ ನಾವು ಭ್ರಷ್ಟಾಚಾರದ ವಿಚಾರವನ್ನು ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಿರುದೇಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅಧಿವೇಶನ 10 ದಿನಗಳ ಕಾಲ ನಡೆಯಲಿದ್ದು, ಇಂದು ಪ್ರಕೃತಿ ವಿಕೋಪದ ಚರ್ಚೆ ಆಗುತ್ತಿದೆ. ಅಧಿವೇಶನದಲ್ಲಿ ಭ್ರಷ್ಟಾಚಾರದ ವಿಚಾರವನ್ನು ವ್ಯಾಪಕವಾಗಿ ಚರ್ಚೆ ಮಾಡಬೇಕಿದ್ದು, ಕಾಂಗ್ರೆಸ್ ಈ ಜವಾಬ್ದಾರಿ ವಹಿಸಿಕೊಂಡಿದೆ. ನಮ್ಮ ಶಾಸಕರುಗಳಿಗೆ ಜವಾಬ್ದಾರಿ ನೀಡಿದ್ದು, ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲು ತಿಳಿಸಿದ್ದೇವೆ. ಅಧಿವೇಶನದಲ್ಲಿ ಹಾಗೂ ಹೊರಗೆ ರಾಜ್ಯದ ಇತರೆ ಭಾಗಗಳಲ್ಲಿ ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆ ಆಗಬೇಕಿದೆ ಎಂದರು.

www.40percentsarkara.com ನಲ್ಲಿ  ಜನ ದೂರು ನೀಡಿದ ನಂತರ ಮುಂದಿನ ನಡೆ ಏನು ಎಂದು ಕೇಳಿದಾಗ, ‘ಸರ್ಕಾರದ ಭ್ರಷ್ಟಾಚಾರ ವಿಚಾರವನ್ನು ನಾವು ಜನರ ಮಧ್ಯ ತೆಗೆದುಕೊಂಡು ಹೋಗಬೇಕು. ನಮ್ಮ ಎಲ್ಲ ನಾಯಕರು ಜಿಲ್ಲಾ ಮಟ್ಟಕ್ಕೆ ಹೋಗಿ, ಜನರಲ್ಲಿ ಜಾಗೃತಿ ಮೂಡಿಸಬೇಕು. ಲಂಚ ಪಡೆಯುವುದರ ಜತೆ ಲಂಚ ನೀಡುವುದು ತಪ್ಪು ಎಂದು ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಕಾರ್ಯಕ್ರಮ ರೂಪಿಸುತ್ತೇವೆ. ನಮ್ಮ ಕಾಲದಲ್ಲಿ ತಪ್ಪು ಮಾಡಿದ್ದರೆ, ನಾನು ಇಂಧನ ಸಚಿವನಾಗಿದ್ದಾಗ ದುಬಾರಿ ಬೆಲೆಗೆ ವಿದ್ಯುತ್ ಖರೀದಿ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಮೊದಲು ನನ್ನ ವಿರುದ್ಧ ಪ್ರಕರಣ ದಾಖಲಿಸಲಿ. ಈ ವಿಚಾರದಲ್ಲಿ ತಡ ಬೇಡ. ನಾವೆಲ್ಲರೂ ರಾಜ್ಯದ ಜನರಿಗೆ ಉತ್ತರದಾಯಿಯಾಗಿರಬೇಕು. ಸಾರ್ವಜನಿಕರು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಸಹಾಯವಾಣಿ ನೀಡಿದ್ದು, ಅವರು ನೀಡುವ ದೂರಿನ ಪ್ರಕಾರ ನಾವು ಅವರ ಪರವಾಗಿ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡುತ್ತೇವೆ ಎಂದರು.

ವಿದ್ಯುತ್ ಖರೀದಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಾನು ಈ ವಿಚಾರದಲ್ಲಿ ಮೋಲ್ನೋಟಕ್ಕೆ ತಪ್ಪು ಮಾಡಿದ್ದೇನೆ ಎಂದು ಅನಿಸಿದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಲಿ. ಆ ನಂತರ ಕಾನೂನು ಅವಕಾಶಗಳ ಬಗ್ಗೆ ಆಲೋಚಿಸಲಿ. ನಾನು ತಪ್ಪು ಮಾಡಿದ್ದೇನೆ, ಲಂಚ ಪಡೆದಿದ್ದೇನೆ, ರಾಜ್ಯದ ಜನತೆಗೆ ನಾನು ದ್ರೋಹ ಮಾಡಿದ್ದರೆ ತಕ್ಷಣವೇ ಪ್ರಕರಣ ದಾಖಲಿಸಲಿ. ನಾನು ನನ್ನ ಜವಾಬ್ದಾರಿ ವಿಚಾರವಾಗಿ ಆತ್ಮವಿಶ್ವಾಸದಲ್ಲಿದ್ದೇನೆ. ನಾವು ರಾಜ್ಯದ ಜನರಿಗೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತೇವೆ ಎಂಬ ವಿಶ್ವಾಸದಲ್ಲಿ ಈ ವಿಚಾರ ಹೇಳುತ್ತಿದ್ದೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *