ಎಂಆರ್‌ಪಿಎಲ್‌ ನೇಮಕಾತಿ ವಿವಾದ- ಕರಾವಳಿಗರಿಗೆ ಆದ್ಯತೆ ನೀಡಿ

 

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್  (ಎಂಆರ್ ಪಿಎಲ್ )  ನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ ಐ) ಮುಂದಿಟ್ಟ ಆಗ್ರಹ, ಜಿಲ್ಲೆಯಾದ್ಯಂತ ಭಾರೀ ಚರ್ಚೆಯ ವಿಚಾರವಾಗಿದೆ.

ಈಗ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತುಳುನಾಡ್ ದ ಅಭಿವೃದ್ದಿಡ್ ತುಳುವಪ್ಪೆ ಜೋಕುಲೆಗ್ ಮಲ್ಲ ಪಾಲ್ (ತುಳುನಾಡಿನ ಅಭಿವೃದ್ದಿಯಲ್ಲಿ ತುಳುನಾಡಿನ ಮಕ್ಕಳ ಪಾಲು) ಎಂಬ ಘೋಷ ವಾಕ್ಯದೊಂದಿಗೆ, ಉದ್ಯೋಗದ ವಿಚಾರದಲ್ಲಿ ಸ್ಥಳೀಯರಿಗೆ ಜಿಲ್ಲೆಯ ಸಂಸ್ಥೆಗಳು, ಕಾರ್ಖಾನೆಗಳು ಆದ್ಯತೆ ನೀಡಬೇಕು ಎಂಬ ಕೂಗು ಜಿಲ್ಲೆಯ ಯುವಜನರ ಕೂಗಾಗಿ ಮಾರ್ಪಟ್ಟಿದೆ.

ಎಂಆರ್ ಪಿಎಲ್ ನಲ್ಲಿ 2019 ರ ಸೆಪ್ಟೆಂಬರ್ ನಲ್ಲಿ 223 ಹುದ್ದೆಗಳ ಉದ್ಯೋಗ ನೇಮಕಾತಿಗೆ ಸಂಬಂಧಿಸಿ ರಾಷ್ಟ್ರಮಟ್ಟದಲ್ಲಿ ಅರ್ಜಿ ಆಹ್ವಾನ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಈ ಕ್ರಮವನ್ನು ಖಂಡಿಸಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಡಿವೈಎಫ್ ಐ ಸಂಘಟನೆಯು ಸರಣಿ ಪ್ರತಿಭಟನೆ ನಡೆಸಿತ್ತು. ಆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲೂ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಆಗ್ರಹ ಭಾರೀ ಸದ್ದು ಮಾಡಿತ್ತು.

ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಭರಣ ಎಂಆರ್ ಪಿಎಲ್ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿ, ಸ್ಥಳೀಯರಿಗೆ ಆದ್ಯತೆ ನೀಡಿ ಹೊಸದಾಗಿ ಪ್ರಕ್ರಿಯೆ ನಡೆಸುವಂತೆ ನೋಟಿಸ್ ಜಾರಿ ಮಾಡಿತ್ತು. ಆ ಸಂದರ್ಭದಲ್ಲಿ ನೇಮಕಾತಿ ತಾತ್ಕಾಲಿಕವಾಗಿ ರದ್ದಾಗಿತ್ತು. ಆದರೆ ಈ ಕೊರೊನಾ ಸಂದರ್ಭದಲ್ಲಿ 184 ಮಂದಿಯ ನೇಮಕಾತಿ ಮಾಡಲಾಗಿದೆ. ಹೊಸದಾಗಿ ನೇಮಕಾತಿಯಾದ 184 ಮಂದಿಯಲ್ಲಿ ಕರ್ನಾಟಕ 11 ಮಂದಿ ಇದ್ದು ಕರಾವಳಿಯ ಇಬ್ಬರಿಗೆ ಮಾತ್ರ ಅವಕಾಶ ದೊರೆತಿದೆ. ಉಳಿದಂತೆ ನೇಮಕಾತಿಯಲ್ಲಿ ಉತ್ತರ ಪ್ರದೇಶ, ಬಿಹಾರದ ಜನರು ಹೆಚ್ಚಾಗಿದ್ದಾರೆ. ಈ ಕೊರೊನಾ ಲಾಕ್ ಡೌನ್ ನಡುವೆ ಸದ್ದಿಲ್ಲದೇ ನೇಮಕಾತಿ ನಡೆಸಿ ಕರಾವಳಿಗರಿಗೆ ಅನ್ಯಾಯ ಎಸಗಿದ್ದಾರೆ ಎಂದು ಈಗ ಮತ್ತೆ ಡಿವೈಎಫ್ ಐ ಆರೋಪಿಸಿದ್ದು, ನಮ್ಮ ಕರಾವಳಿಗರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕರಾವಳಿ ಭಾಗದ ಯುವಕರು ಕೂಡಾ ಈ ಅಭಿಯಾನಕ್ಕೆ ಜೊತೆಯಾಗಿದ್ದಾರೆ.

ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಎಂಆರ್ ಪಿಎಲ್ ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು ಮತ್ತು ಎಂಆರ್ ಪಿಎಲ್ ಅಧಿಕಾರಿಗಳು ಸಭೆ ನಡೆಸಿದ್ದರು. ಈ ಸಭೆಯ ಬಳಿಕ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಎಂಆರ್ ಪಿಎಲ್ ಕಂಪೆನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೇಮಕಾತಿಯಲ್ಲಿ ಅನ್ಯಾಯವಾಗಿದೆ. ಈ ಹಿನ್ನೆಲೆ ಸಭೆ ನಡೆಸಿ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಹೇಳಿದ್ದರು.  ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕಿದ್ದ ಎಂಆರ್ ಪಿಎಲ್ ಅಧಿಕಾರಿಗಳ ಮೌನವನ್ನು ಪ್ರಶ್ನಿಸಿದ್ದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ನೇಮಕಾತಿ ಪತ್ರ ಪಡೆದಿರುವ 184 ಮಂದಿ ಈಗಾಗಾಲೇ ಕಂಪೆನಿಗೆ ಆಗಮಿಸಿ ಕ್ವಾಟ್ರಸ್ ನಲ್ಲಿದ್ದಾರೆ. ಹಾಗಿರುವಾಗ ಸಂಸದ, ಶಾಸಕರ ಈ ತಡೆ ಎಂಬ ಹೇಳಿಕೆ ಎಷ್ಟು ನಂಬಲಾರ್ಹವಾದದ್ದು ಎಂದು ಕೇಳಿದ್ದರು. ಹಾಗೆಯೇ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಬೇಕು. ನೇಮಕಾತಿಯಲ್ಲಿ ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯ ಸರಿ ಪಡಿಸಲು ಸರೋಜಿನಿ ಮಹಿಷಿ ವರದಿ ಸಹಿತ ಶೇ.80 ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ಕಾಯ್ದೆ ರೂಪಿಸಿ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದರು.

ಈ ಬೆನ್ನಲ್ಲೇ ಕಾಂಗ್ರೆಸ್ , ಮುಸ್ಮಿಂ ಒಕ್ಕೂಟ, ಸೇರಿದಂತೆ ಬಿಜೆಪಿಯ ನಾಯಕರಾದ ಸುನಿಲ್ ಬಜಿಲಕೇರಿ ಹಾಗೂ ಪ್ರವೀಣ್ ವಾಲ್ಕೆ ಪಕ್ಷದ ವಿರುದ್ದವೇ ಆಕ್ರೋಶ ವ್ಯಕ್ತಪಡಿಸಿ, ಡಿವೈಎಫ್ ನೇತೃತ್ವದ ಹೋರಾಟ ಸಮಿತಿಯ ಜೊತೆಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಎಂಆರ್ ಪಿಎಲ್ ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದೆ. ಮುಖ್ಯ ಜಾಗ್ರತ ಅಧಿಕಾರಿ ತನಿಖೆಯನ್ನು ನಡೆಸುತ್ತಿದ್ದಾರೆ. ಕೇಂದ್ರ ಜಾಗ್ರತ ಆಯೋಗಕ್ಕೆ ವರದಿಯನ್ನು ಸಲ್ಲಿಸಲಿದ್ದಾರೆ. ಹಾಗೆಯೇ ಸಿವಿಸಿ (ವಿಜಿಲೆನ್ಸ್ ಕಮಿಟಿ) ತನಿಖೆ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.ಆದರೆ ಈ ತನಿಖೆಯಿಂದ ಪೂರ್ಣ ಸತ್ಯ ಹೊರಬರಲಾರದು. ಕೇಂದ್ರ ಸರ್ಕಾರ ತನಿಖಾ ಏಜನ್ಸಿಗಳಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಮುನೀರ್ ಕಾಟಿಪಳ್ಳ, ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿರುವ ಬಗ್ಗೆ ಶಾಸಕರು ಹೇಳಿಕೊಂಡಿದ್ದರೂ, ಈ ಬಗ್ಗೆ ಚಕಾರ ಎತ್ತರ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ.

223 ಹುದ್ದೆಗಳ ನೇಮಕಾತಿಯಲ್ಲಿರುವ ಭ್ರಷ್ಟಾಚಾರದ, ಹಗರಣದ ಆರೋಪಗಳನ್ನು ನೋಡಿದಾಗ ದೊಡ್ಡ ಶಕ್ತಿಗಳ ಕೈ ಇರವಂತಿದೆ. ಹಾಗಿರುವಾಗ ಈ ವಿಜಿಲೆನ್ಸ್ ಕಮಿಟಿಗೆ ಬಹಳ ದೊಡ್ಡ ಮಟ್ಟದಲ್ಲಿ ಹಗರಣವನ್ನು ಬಯಳಿಗೆಳೆಯಲು ಸಾಧ್ಯವಾಗದು. ಮುಕ್ತ ತನಿಖೆ ಸಾಧ್ಯವಾಗದು. ಆ ಹಿನ್ನೆಲೆ ಈ ವಿಜಿಲೆನ್ಸ್ ಕಮಿಟಿ ತನಿಖೆಯೊಂದಿಗೆ ಕೇಂದ್ರದ ತನಿಖೆ ಸಂಸ್ಥೆಯಿಂದ ತನಿಖೆ ನಡೆಯಬೇಕು. ಸ್ವಜನ ಪಕ್ಷಪಾತದ ಆರೋಪಗಳು, ಕೆಲವೇ ಭಾಗದಿಂದ ಹೆಚ್ಚಿನ ಜನರು ಆಯ್ಕೆಯಾಗಿರುವ ಬಗ್ಗೆ ನಿಜಾಂಶ ಬಯಲಿಗೆ ಬರಲಿದೆ ಎಂದು ಡಿವೈಎಫ್ ಐ ರಾಜ್ಯಧ್ಯಕ್ಷರು ಹೇಳಿದ್ದಾರೆ.

ಹಾಗೆಯೇ ಎಂಆರ್ ಪಿಎಲ್ ನಲ್ಲಿ ಇರುವ ಹಲವು ಉದ್ಯೋಗದ ಸಮಸ್ಯೆಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ.ಇನ್ನು ಈ ನಡುವೆ ದಕ್ಷಿಣ ಕನ್ನಡ ಬಿಜೆಪಿ ವಕ್ತಾರ ರಾಧಾಕೃಷ್ಣ, ಎಂಆರ್ ಪಿಎಲ್ ಸುಪ್ರೀಂ ಕೋರ್ಟ್ ನ ತೀರ್ಪನ್ನು ಪಾಲಿಸಿದೆ. ಯೋಗ್ಯತೆಗೆ ತಕ್ಕ ಎಂಆರ್ ಪಿಎಲ್ ಉದ್ಯೋಗವಕಾಶ ನೀಡಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ಬರಬಾರದು ಎಂದು ಹೇಳಿದ್ದಾರೆ. ಬಿಜೆಪಿ ನಾಯಕರ ಈ ಹೇಳಿಕೆಯು ಈಗ ಚರ್ಚೆಗೆ ಕಾರಣವಾಗಿದೆ. ಯೋಗ್ಯತೆಗೆ ತಕ್ಕ ಎಂಆರ್ ಪಿಎಲ್ ಉದ್ಯೋಗವಕಾಶ ನೀಡಿದೆ ಎಂಬುದನ್ನು ಬಿಜೆಪಿ ವಕ್ತಾರರು ಯಾವ ಆಧಾರದಲ್ಲಿ ಹೇಳಿದ್ದಾರೆ? ಇದು ಕರಾವಳಿಗರಿಗೆ ಮಾಡಿದ ಅವಮಾನವಲ್ಲವೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.ಈ ಎಲ್ಲಾ ಬೆಳವಣಿಗೆಯ ನಡುವೆ ಸಮಾನ ಮನಸ್ಕರು ಜೊತೆಯಾಗಿ ತುಳುನಾಡ್ ದ ಅಭಿವೃದ್ದಿಡ್ ತುಳುವಪ್ಪೆ ಜೋಕುಲೆಗ್ ಮಲ್ಲ ಪಾಲ್ ಎಂಬ ಘೋಷವಾಕ್ಯದಡಿ ಪ್ರತಿಭಟನೆ ಆರಂಭಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *