ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಕೆ.ಚೌಡೇನಹಳ್ಳಿ ಗ್ರಾಮದ ಎಂಟು ಕುಟುಂಬಗಳ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸಿ, ಅವರುಗಳು ಕಳೆದ 40 ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಭೂಮಿಯನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿರುವುದು ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಿ ಆ ಎಲ್ಲಾ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ಕುಮಾರ್ ಅವರು ಕಳೆದ 40 ವರ್ಷಗಳಿಂದ ತಮ್ಮ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿರುವ ಎಂಟು ಕುಟುಂಬಗಳಿಗೆ ಕೆ.ಚೌಡೇನಹಳ್ಳಿಯಲ್ಲಿ ವಾಸವಾಗಿರದ, ಭೂಮಿಗೆ ಸಂಬಂಧವಿಲ್ಲದ, ಸಾಗುವಳಿಯನ್ನೇ ಮಾಡದ ನಾಗಮಣಿ ಕೋಂ ಜಗದೀಶ್ ದೀಕ್ಷಿತ್ ಎಂಬುವವರು ತಾವರೆಕೆರೆಯ ಜಯರಾಮ ಬಿನ್ ರಂಗೇಗೌಡ ಎಂಬುವವರ ಕುಮ್ಮಕ್ಕಿನಿಂದ ಕಳೆದ ಒಂದು ವರ್ಷಗಳಿಂದ ಕೆ.ಚೌಡೇನಹಳ್ಳಿ ಗ್ರಾಮಕ್ಕೆ ಬಂದು ಈ ಭೂಮಿ ನಮಗೆ ಸೇರಬೇಕಾದದ್ದು ಎಂದು ಗಲಾಟೆ ಮಾಡುತ್ತಿದ್ದಾರೆ. ಈ ನಡುವೆ ಜಯರಾಮ ಎಂಬುವವರು ಭೂಮಿಗೆ ಸಂಬಂದಪಟ್ಟ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ದೌರ್ಜನ್ಯ ನಡೆಸಿದ್ದಾರೆ. ಈಗಾಗಲೇ ಅವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಕೆ.ಚೌಡೇನಹಳ್ಳಿ ಗ್ರಾಮದ ವಾಸಗಳಾಗಿರುವ ತಿಮ್ಮಮ್ಮ ಕೋಂ ತಿಮ್ಮೇಗೌಡ, ರಮೇಶ ಬಿನ್ ಅಮಾಸೇಗೌಡ, ಸಿ.ಸಿ.ಮಂಜುನಾಥ ಬಿನ್ ಚುಂಚೇಗೌಡ, ಅಶೋಕ ಬಿನ್ ಚನ್ನೇಗೌಡ, ದೊರೆಸ್ವಾಮಿ ಬಿನ್ ಶಿವೇಗೌಡ, ರಂಗೇಗೌಡ ಬಿನ್ ರಂಗೇಗೌಡ, ಸಣ್ಣಮ್ಮ ಕೋಂ ರಂಗೇಗೌಡ, ಮಂಜೇಗೌಡ ಬಿನ್ ರಂಗೇಗೌಡ ಈ 8 ಕುಟುಂಬಗಳು ಗ್ರಾಮದಲ್ಲಿ ವಾಸವಾಗಿದ್ದು ಇವರುಗಳಿಗೆ 1994-95ನೇ ಸಾಲಿನಲ್ಲಿ ಸರ್ವೆ ನಂಬರ್ 30ರಲ್ಲಿ ತಲಾ ಎರಡು ಎಕರೆಯಷ್ಟು ಭೂಮಿ ಬಗರ್ಹುಕುಂ ಸಾಗುವಳಿಯ ಅಡಿಯಲ್ಲಿ ಮಂಜೂರಾಗಿದೆ. ಇವರುಗಳ ಹೆಸರಿಗೆ ಖಾತೆಯಾಗಿ ಪಹಣಿಯೂ ಕೂಡ ಇವರ ಹೆಸರಿನಲ್ಲಿಯೇ ಬರುತ್ತಿದೆ. ಮಾತ್ರವಲ್ಲ ಇದೇ ಭೂಮಿಯಲ್ಲಿ ನಿರಂತರವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ತೆಂಗಿನ ಮರಗಳನ್ನು ಬೆಳೆಸಿ ಕೆಲವರು ಮನೆಯನ್ನೂ ಕಟ್ಟಿಕೊಂಡು ಬೋರ್ವೆಲ್ಗಳ ಸಂಪರ್ಕವನ್ನು ಪಡೆದು ಬ್ಯಾಂಕ್ ಮೂಲಕ ಸಾಲವನ್ನೂ ಪಡೆದಿದ್ದಾರೆ ಎಂದು ಹೇಳಿದರು.
ಈ ಪ್ರಕರಣವನ್ನು ಗ್ರಾಮದ ಎಂಟು ಕುಟುಂಬಗಳು ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಮೂಲಕ ಧಾವೆ ಹೂಡಿದ್ದಾರೆ. ಇದರ ತೀರ್ಪ ಇನ್ನೂ ಬರಬೇಕೆದೆ. ಅಷ್ಟರೊಳಗಾಗಿ ಚನ್ನರಾಯಪಟ್ಟಣದ ತಹಸಿಲ್ದಾರ್, ರಾಜಸ್ವನಿರೀಕ್ಷಕರು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಜಯರಾಮ ಎಂಬುವವನೊಂದಿಗೆ ಸೇರಿಕೊಂಡು ಪೊಲೀಸ್ ಬಲದೊಂದಿಗೆ ಈ ಜಾಗವನ್ನು ಸರ್ವೆ ಮಾಡಿ ತೆರವುಗೊಳಿಸಲು ಮುಂದಾಗುತ್ತಾರೆ. ಇದರ ವಿರುದ್ದ ಪ್ರತಿಭಟಿಸಿದ 8 ಕುಟುಂಬಗಳು ಮತ್ತು ಗ್ರಾಮಸ್ಥರು ಸರ್ವೆ ಮತ್ತು ತೆರವು ಕಾರ್ಯಾಚರಣೆಯನ್ನು ತಡೆಯಲು ಮುಂದಾದಾಗ ಪೊಲೀಸ್ ಮತ್ತು ತಹಸಿಲ್ದಾರರ ದೌರ್ಜನ್ಯ ಹೆಚ್ಚಾದಾಗ ದಾರಿ ಕಾಣದಾಗದೆ ಇಬ್ಬರು ಮಹಿಳೆಯರು ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಎಂದು ತಿಳಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಚನ್ನರಾಯಪಟ್ಟಣ ತಾಲ್ಲೂಕು ಸಂಚಾಲಕ ಎಚ್.ಎಸ್. ಮಂಜುನಾಥ್ ಮಾತನಾಡಿ, ಇಡೀ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿ ಸೂಕ್ಷ್ಮವಾಗಿ ಗಮನಿಸಿದರೆ ಜಯರಾಮ ಎಂಬ ವ್ಯಕ್ತಿಯು ಬಡವರ ಈ ಭೂಮಿಯನ್ನು ಲಪಟಾಯಿಸಲು ತನ್ನ ಹಣಬಲವನ್ನು ಉಪಯೋಗಿಸಿಕೊಂಡು ದೌರ್ಜನ್ಯ ನಡೆಸುತ್ತಿರುವುದು ಸ್ಪಷ್ಟವಾಗುತ್ತದೆ. ಮಾತ್ರವಲ್ಲ ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಈ ಭೂಮಿ ಅಲ್ಲಿನ ಎಂಟು ಕುಟುಂಬಗಳಿಗೆ ಸೇರಿದ್ದು ಎಂದು ಹೇಳುತ್ತಿರುವಾಗ ಅವರುಗಳು ಕಳೆದ 40 ವರ್ಷಗಳಿಂದ ಇದೇ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಅನುಭವದಲ್ಲಿರುವಾಗ, ನ್ಯಾಯ ಮತ್ತು ಸಂಕಷ್ಟದಲ್ಲಿರುವ ರೈತರ ಪರವಾಗಿ ನಿಲ್ಲಬೇಕಾದ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂದೆ ಮಾಡುವವರ ಪರವಾಗಿ ನಿಂತಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಹೇಳಿದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಹಾಗೂ ಕಲ್ಕೆರೆ ಗ್ರಾಮ ಪಂಚಾಯಿತಿ ಸದಸ್ಯ ವಾಸುದೇವ ಕಲ್ಕೆರೆ ಮಾತನಾಡಿ, ಈ ಪ್ರಕರಣದ ಹಿಂದೆ ಭ್ರಷ್ಟಾಚಾರ ನಡೆದಿರುವ ಅನುಮಾನವಿದೆ. ತಹಸಿಲ್ದಾರ್ ಬಿ.ಮಾರುತಿ, ನುಗ್ಗೇಹಳ್ಳಿ ಹೋಬಳಿ ಕಲ್ಕೆರೆ ವೃತ್ತದ ರಾಜಸ್ವ ನಿರೀಕ್ಷಕ ಲೋಕೇಶ್, ಕಲ್ಕೆರೆ ವೃತ್ತದ ಗ್ರಾಮಲೆಕ್ಕಾಧಿಕಾರಿಗಳು ಕಾನೂನುಬಾಹಿರವಾಗಿ ಕೆಲಸ ನಿರ್ವಹಿಸಿರುವುದು ಕಂಡುಬಂದಿದ್ದು, ಪ್ರಕರಣವನ್ನು ಜಿಲ್ಲಾಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಾಸನ ಜಿಲ್ಲೆ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ವಸಂತ್ ಕುಮಾರ್ ಮಾತನಾಡಿ, ಕಳೆದ 40 ವರ್ಷಗಳಿಂದ ಸ್ವಾಧೀನದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಎಲ್ಲಾ ರೀತಿಯ ಭೂಮಿ ದಾಖಲೆಗಳನ್ನು ಹೊಂದಿರುವ 8 ಕುಟುಂಬಕ್ಕೆ ಜಿಲ್ಲಾಡಳಿತವು ಸೂಕ್ತ ರಕ್ಷಣೆ ನೀಡಬೇಕೆಂದು ನೊಂದವರ ಪರವಾಗಿ ಕೆಪಿಆರ್ಎಸ್ ಹಾಸನ ಜಿಲ್ಲಾ ಸಮಿತಿಯು ಮನವಿ ಮಾಡುತ್ತದೆ ಎಂದರು.
ಈ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೆ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಎದುರು ಮಹಿಳೆಯರು ಮಕ್ಕಳು ಸಮೇತ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನೊಂದ ರೈತ ಕುಟುಂಬಗಳು, ಕೆ.ಚೌಡೇನಹಳ್ಳಿ ಹಾಗೂ ರಮೇಶ್, ರಂಗೇಗೌಡ, ಧರ್ಮೇಶ್, ರಮೇಶ್, ದೇವರಾಜು, ಗಿರೀಶ್ ಇದ್ದರು.