40% ಕಮಿಷನ್‌ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು: ಮೀನಾಕ್ಷಿ ಸುಂದರಂ

ಬೆಂಗಳೂರು: ಧರ್ಮವನ್ನು ತೋರಿಸಿ ದಾರಿ ತಪ್ಪಿಸಲಾಗುತ್ತಿದೆ. 40% ಕಮಿಷನ್‌ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ಸಂಪೂರ್ಣವಾಗಿ ಕಿತ್ತು ಬಿಸಾಕುವ ಕೆಲಸವಾಗಬೇಕು. 2023 ಇಡೀ ವರ್ಷ ಹೋರಾಟದ ವರ್ಷವಾಗಬೇಕು. ರೈತರು, ಕೃಷಿಕೂಲಿಕಾರರು, ಕಾರ್ಮಿಕರು ಬಲಿಷ್ಠ ಹೋರಾಟಕ್ಕೆ ಮುಂದಾಗಬೇಕು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಜನವರಿ 18ರಿಂದ 22ರವರೆಗೆ‌ ನಡೆದಿದ್ದು, ಸಮ್ಮೇಳನದ ಕೊನೆ ದಿನವಾದ ಇಂದು(ಜನವರಿ 22) ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಮೀನಾಕ್ಷಿ ಸುಂದರಂ ಅವರು, ಯಡಿಯೂರಪ್ಪ ಸರ್ಕಾರ ಆಪರೇಷನ್‌ ಕಮಲದ ಮೂಲಕ ಸರ್ಕಾರ ರಚಿಸಿದರು. ಇದೀಗ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಬಿಜೆಪಿ ಸರಕಾರದಿಂದ ಜನರಿಗಂತೂ ಲಾಭವಾಗಿಲ್ಲ. ಸರ್ಕಾರದ ಸಾಧನೆಗಳು ಶೂನ್ಯ. ಆಳುವ ಸರ್ಕಾರ ಮಂತ್ರಿಗಳ ಸಾಧನೆಯೂ ಶೂನ್ಯ ಎಂದು ವಿಮರ್ಶಿಸಿದರು.

ಇದನ್ನು ಓದಿ: ಆರ್ಥಿಕತೆ ಹೆಚ್ಚಿಸುವ ಕಾರ್ಮಿಕರ ಹಕ್ಕುಗಳನ್ನು ನಾಶಗೊಳಿಸಲಾಗುತ್ತಿದೆ: ಎಸ್.‌ ವರಲಕ್ಷ್ಮಿ

ಬಡತನಕ್ಕೆ ಯಾವುದೇ ಜಾತಿ ಇಲ್ಲ. ಸರಕಾರ ಜಾತಿಗಳ ಹೆಸರಿನಲ್ಲಿ ವರ್ಗಾವಣೆ ಮಾಡುತ್ತಿದೆ. ಮುಸಲ್ಮಾನರ ವಿರುದ್ಧ ಕೆಲಸ ಮಾಡುತ್ತಿರುವ ಸರ್ಕಾರ, ಧಾರ್ಮಿಕತೆಯ ಹೆಸರಿನಲ್ಲಿ ವಿಭಜಿಸುವ ಕೆಲಸ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ಕಿತ್ತೆಸೆಯಬೇಕು. ಕಾರ್ಮಿಕರ ಪರವಾದ-ರೈತ ಪರವಾದ ಸರ್ಕಾರವನ್ನು ನಾವು ಆಯ್ಕೆ ಮಾಡಬೇಕು. ಸರ್ಕಾರದ ಅರ್ಥವಾಗುವ ಭಾಷೆಯಲ್ಲೇ ನಾವು ಉತ್ತರಿಸಬೇಕು ಎಂದು ಹೇಳಿದರು.

ಸಂಸತ್ತಿನಲ್ಲಿ ಜಾರಿಗೊಳಿಸಲು 4 ಕಾಯ್ದೆಗಳು ಇವೆ. ಅವುಗಳನ್ನು ಜಾರಿಗೊಳಿಸದೇ ಇರಲು ಕಾರಣ ನಮ್ಮ ಹೋರಾಟದ ಫಲ. ನಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಲು ನಾವು ಬಿಡುವುದಿಲ್ಲ. ದೇಶದ ಆರ್ಥಿಕತೆ ಸೃಷ್ಟಿಸುವ ಸರ್ಕಾರಿ ಒಡೆತನದ ಸಂಸ್ಥೆಗಳನ್ನು ಖಾಸಗೀಕರಿಸಲಾಗುತ್ತಿದೆ. ಕೈಗಾರಿಕೆಗಳಲ್ಲಿ ಖಾಯಂ ನೌಕರರು ಇಲ್ಲದಂತೆ ಮಾಡಲಾಗುತ್ತಿದ್ದು, ಗುತ್ತಿಗೆ ಆಧಾರದಲ್ಲಿ ದುಡಿಮೆ ಮಾಡಿಸಿಕೊಂಡು ಮೂರು ವರ್ಷದ ನಂತರ ಕೆಲಸದಿಂದ ತೆಗೆದು ಹಾಕಿ ಮನೆಗೆ ಕಳುಹಿಸಲಾಗುತ್ತಿದೆ. ಬೆಂಗಳೂರಿನ ಬಹುತೇಕ ಕಾರ್ಖಾನೆಗಳಲ್ಲಿ ರೋಬೊಟಿಕ್‌ ಆಧಾರಿತ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಆದರೆ, ಸಿಐಟಿಯು ಮಾತ್ರ ಯಾವಾಗಲೂ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಇದನ್ನು ಓದಿ: ಸರ್ಕಾರ ನಿದ್ದೆ ಮಾಡುತ್ತಿದೆ-ಹೋರಾಟದಿಂದ ಎಚ್ಚರಿಸಬೇಕು: ತಪನ್‌ ಸೇನ್‌

ದೇಶದ ರಕ್ಷಣೆ ವಿಚಾರದಲ್ಲಿ ಸೈನಿಕರನ್ನು ಖಾಯಂ ಆಗಿ ಇರಿಸಿಕೊಳ್ಳಬೇಕು. ಆದರೆ, ಇದೀಗ ಅಗ್ನಿಪಥ್‌ ಹೆಸರಿನಲ್ಲಿ ದೇಶದ ರಕ್ಷಣಾ ಕೆಲಸದಲ್ಲಿಯೂ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಈ ದೇಶದಲ್ಲಿ ಸೈನಿಕರಿಗೂ ರಕ್ಷಣೆ ಇಲ್ಲವಾಗಿದೆ. ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲದೆ ರೈತರ ಸ್ಥಿತಿ ಚಿಂತಾಜನವಾಗಿದೆ, ಆದರೆ ಇತ್ತ ಅಗತ್ಯವ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.

ಫೆಬ್ರವರಿ 5ರಂದು ಮೂರು ಲಕ್ಷ ಜನರ ಬೃಹತ್‌ ಪ್ರತಿಭಟನಾ ಪ್ರದರ್ಶನ ಏರ್ಪಡಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಜನಪರ ನೀತಿ ಅನುಸರಿಸದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ನಮ್ಮ ಹಕ್ಕುಗಳ ಬಗ್ಗೆ ಪ್ರಶ್ನಿಸುವ ಮೂಲಕ ಎಚ್ಚರಿಕೆ ನೀಡಬೇಕು. ವಿಮೆಯನ್ನು ಮಾರಾಟಕ್ಕೆ ಇಡಲಾಗಿದೆ. ಗಣಿಗಾರಿಕೆಯನ್ನು ಸಂಪೂರ್ಣ ಖಾಸಗೀಕರಿಸಲು ಮುಂದಾಗಿದ್ದಾರೆ. ನಮ್ಮ ದುಡಿಮೆಯ ಮೂಲಕ ದೊಡ್ಡ ಮೊತ್ತದ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದರೂ, ಸರ್ಕಾರ ಶ್ರೀಮಂತರ ಪರ ಕೆಲಸ ಮಾಡುತ್ತಿದೆ ಎಂದರು.

ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ. ಕೆ. ಹೇಮಲತಾ ಮಾತನಾಡಿ, ಅಖಿಲ ಭಾರತ ಸಮ್ಮೇಳನದ ಯಶಸ್ಸಿಗಾಗಿ ಪಂಚಾಯತಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡಿದ್ದಾರೆ. ಅಲ್ಲದೆ ವಿವಿಧ ವಿಭಾಗದ ಕಾರ್ಮಿಕರು ಸಹ ದೇಣಿಗೆ ನೀಡಿದ್ದಾರೆ. ದೇಶದ ಎಲ್ಲಾ ವಿಭಾಗದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಗಳು ಆಗಿವೆ. ಕಾರ್ಮಿಕರ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆಗಳು ತೀವ್ರಗೊಳ್ಳಬೇಕೆಂದು ಕರೆ ನೀಡಿದರು.

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರ್ಕಾರವೇ ಆಡಳಿತವಿದ್ದರೂ ಜನಪರವಾದ ನೀತಿಗಳು ಜಾರಿಯಾಗುತ್ತಿಲ್ಲ. ಅಲ್ಲೆಲ್ಲಾ ಹೋರಾಟಗಳು ನಡೆಯುತ್ತಿವೆ. ನೀತಿಗಳನ್ನು ಬದಲಿಸುವಂತೆ ಆಗ್ರಹಿಸಲಾಗುತ್ತಿದೆ. ಕೇರಳದಲ್ಲಿ ಜನಪರವಾದ ಎಡರಂಗ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಆ ರಾಜ್ಯದಲ್ಲಿ ಕಾರ್ಮಿಕರ ಪರ, ರೈತ ಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈ ಸಂದರ್ಭದಲ್ಲೂ ಯೋಜನೆಗಳ ಜಾರಿಗೊಳ್ಳಲು ಅಡೆತಡೆಗಳನ್ನು ಒಡ್ಡಲಾಗುತ್ತಿದೆ. ತಡೆಯೊಡ್ಡುವವರ ಕೆಲಸವನ್ನು ಹಿಮ್ಮೆಟ್ಟಿಸಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಿರುಚಿತ್ರ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಚಿತ್ರತಂಡದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಚಿತ್ರ ನಿರ್ದೇಶಕ ಕೇಸರಿ ಹರವೂ ಅವರು ವಿಜೇತರ ಪಟ್ಟಿಯನ್ನು ಬಹಿರಂಗ ಸಭೆಯ ವೇದಿಕೆಯಲ್ಲಿ ಘೋಷಣೆ ಮಾಡಿದರು.

ಬಹಿರಂಗ ಸಭೆ ಗೋಷ್ಠಿಯ ಆರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಎಚ್‌ ಜನಾರ್ಧನ್‌(ಜನ್ನಿ), ಚಿಂತನ್‌ ವಿಕಾಸ್‌ ಮತ್ತು ತಂಡದಿಂದ ಹೋರಾಟದ ಹಾಡುಗಳನ್ನು ಪ್ರಸ್ತುಪಡಿಸಿದರು. ಕೊಪ್ಪಳ ಅಂಗನವಾಡಿ ನೌಕರರ ಮಹಿಳಾ ಡೊಳ್ಳು ಕುಣಿತ. ಬಸವಕಲ್ಯಾಣದವರ ಮಹಿಳಾ ಕೋಲಾಟ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.

 

Donate Janashakthi Media

Leave a Reply

Your email address will not be published. Required fields are marked *