ಬಾಳೆಹೊನ್ನೂರು: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆಯ ಮತ್ತೊಬ್ಬ ಗುತ್ತಿಗೆದಾರ ಬಾಳೆಹೊನ್ನೂರು ಪಟ್ಟಣದ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಾವಿ ಮೂಲದ ಬಸವರಾಜ್(47) ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ. ಮೂರು ದಿನಗಳ ಹಿಂದೆ ಕೊಠಡಿ ಪಡೆದಿದ್ದ ಬಸವರಾಜ್ ಬುಧವಾರ ಬೆಳಗ್ಗೆ ಕೊಠಡಿಯಿಂದ ಹೊರಬಂದಿದ್ದರು. ಬಳಿಕ ಕೊಠಡಿ ಒಳಗೆ ತೆರಳಿದವರು ಹೊರಗೆ ಬಂದಿರಲಿಲ್ಲ. ಬುಧವಾರ ಮಧ್ಯಾಹ್ನದವರೆಗೂ ಕೊಠಡಿ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ಕೊಠಡಿಯ ಫ್ಯಾನ್ಗೆ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಬಸವರಾಜ್ ಅವರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳಗಾವಿಯಿಂದ ಕುಟುಂಬಸ್ಥರು ಬಂದ ಬಳಿಕ ಆತ್ಮಹತ್ಯೆಯ ಕಾರಣ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
40% ಕಮೀಷನ್ ಆರೋಪ ಮಾಡಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ವಿಪಕ್ಷ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದು ಕೆಎಸ್ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಬಸವರಾಜ್ ಆತ್ಮಹತ್ಯೆ 40% ಕಮೀಷನ್ ಆರೋಪದ ಗಂಭೀರತೆಯನ್ನು ಹೆಚ್ಚಿಸಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಗುತಿಗೆದಾರರಿಗೆ ಬಿಲ್ ಬಿಡುಗಡೆ ಮಾಡದೆ ಇದ್ದರೆ ಬಹಳಷ್ಟು ಜನ ಗುತ್ತಿಗೆದಾರರು ಸಂತೋಷ್ ಮತ್ತು ಬಸವರಾಜ ಮಾರ್ಗವನ್ನು ತುಳಿಯುವ ಅಪಾಯವಿದೆ. ಹಾಗಾಗಿ ಮುಂಬರುವ ಅನಾಹುತವನ್ನು ತಪ್ಪಿಸಲು ಗುತ್ತಿಗೆದಾರರ ಕಾಮಗಾರಿ ಹಣ. ಹಾಗೂ 40% ಕಮೀಷನ್ ಆರೋಪವನ್ನು ಶೀಘ್ರವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಮುಂದಾಗಬೇಕಿದೆ.