ಬೀದರ್: ಕಾಂಗ್ರೆಸ್ ಪಕ್ಷ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡಲಾಗಿರುವ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೂ ನೀಡಲಿದೆ ಎನ್ನುವ ಮೋದಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸ್ಸಿನಂತೆ ಮುಸ್ಲಿಂ ಸಮುದಾಯಕ್ಕೆ ಶೇ.4 ರಷ್ಟು ಮೀಸಲಾತಿ 1994 ರಿಂದ ಜಾರಿಗೆ ಬಂದಿತ್ತು. ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾಲದಲ್ಲಿ ಈ ಮೀಸಲಾತಿಯನ್ನು ಹಿಂಪಡೆದಿದ್ದಕ್ಕೆ ಈ ವರ್ಗ ಸುಪ್ರಿಂ ಕೋರ್ಟ್ನ ಮೊರೆ ಹೋಯಿತು. ಆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ನ ಮುಂದೆ 4%ಮೀಸಲಾತಿಯನ್ನು ಮುಂದುವರೆಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದು, ಈ ಮೀಸಲಾತಿ ಈಗಲೂ ಮುಂದುವರೆಯುತ್ತಿದೆ ಎಂದರು.
ಇದೇ ವೇಳೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ಒತ್ತಾಯ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸಿಎಂ ಸಿದ್ದರಾಮಯ್ಯ, ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ.ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ಯಾವುದಾದರೂ ಪ್ರಕರಣವನ್ನು ಸಿಬಿಐ ವಹಿಸಿದೆಯೇ? ಎಂದು ಸುದ್ದಿಗಾರರಿಗೆ ಮರು ಪ್ರಶ್ನಿಸಿದರು. ನಾನು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೇನೆ. ಅವರಿಗೆ ಕೇಳಲು ಯಾವ ನೈತಿಕ ಹಕ್ಕಿದೆ. ಇದರಲ್ಲಿ ರಾಜಕೀಯ ಮಾಡಬಾರದು. ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಿ ಅಭಿಯೋಜಕರೊಂದಿಗೆ ಮಾತನಾಡಿದ್ದು, ಸರ್ಕಾರ ಈಗಾಗಲೇ ಆರೋಪಿಯನ್ನು ಬಂಧಿಸಿದೆ., ಸಿಐಡಿ ತನಿಖೆ ನಡೆದಿದ್ದು ಆರೋಪಪಟ್ಟಿಯನ್ನು ತಯಾರಿಸಲಿದೆ ಎಂದರು.
ಇದನ್ನೂ ಓದಿ: ಸ್ವತಂತ್ರ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯವುದಕ್ಕೆ ಸೂಚಿಸಿರುವುದನ್ನು ಒಪ್ಪಿಕೊಂಡ ಬಿಜೆಪಿ
ನೇಹಾ ತಂದೆಯವರು ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವೇ ರಾಜಕೀಯ ಮಾಡುತ್ತಿದೆ ಹಾಗೂ ಬಿಜೆಪಿಯವರ ಇದೇ ಧೋರಣೆಯನ್ನು ಹೊಂದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನೇಹಾ ಕೊಲೆ ಅನ್ಯಾಯವಾದುದು. ಅದನ್ನು ನಾವು ಖಂಡಿಸಿದ್ದೇವೆ.ಇತರೆ ಪಕ್ಷಗಳು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಪ್ರಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನರ ಆಸ್ತಿ ಕಸಿದುಕೊಂಡು ಸಂಪತ್ತು ಹಂಚುವ ಬಗ್ಗೆ ಮೋದಿಯವರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೋದಿಯವರು ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. , 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಗಳನ್ನು ಈಡೇರಿಸಿದರೇ ? ಅಗತ್ಯವಸ್ತುಗಳ ಬೆಲೆಯನ್ನು ಮೋದಿಯವರು ಕಡಿಮೆ ಮಾಡಿದ್ದಾರೆಯೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ನೋಡಿ: ಪ್ರಧಾನಿ ಮೋದಿ ಭ್ರಷ್ಟಾಚಾರದ ಚಕ್ರವರ್ತಿ – ಕೆ. ವಿ.ನಾಗರಾಜ ಮೂರ್ತಿ Janashakthi Media