ನವದೆಹಲಿ ಫೆ 16 : ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸರಕಾರೀ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ನಿರಾಂತಕವಾಗಿ ಸಾಗುತ್ತಿದೆ. ಇದರ ಜೊತೆಗೆ, ಬ್ಯಾಂಕುಗಳು ಕೂಡಾ ಇತರ ಬ್ಯಾಂಕ್ ಗಳೊಂದಿಗೆ ವಿಲೀನಗೊಳ್ಳುತ್ತಿದೆ.
ಈ ಪ್ರಕ್ರಿಯೆಯಲ್ಲಿ ಮೊದಲು ಕರ್ನಾಟಕದ ಹೆಮ್ಮೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನಗೊಂಡಿತ್ತು. ಇನ್ನು, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿತ್ತು.
ಇಷ್ಟೇ ಅಲ್ಲದೇ, ಕಾರ್ಪೋರೇಶನ್ ಬ್ಯಾಂಕ್ ಕೂಡಾ ಯೂನಿಯನ್ ಬ್ಯಾಂಕ್ ಜೊತೆ ವಿಲೀನಗೊಂಡಿತ್ತು.ವಿಜಯಾ ಬ್ಯಾಂಕ್ ಕೂಡಾ ಬ್ಯಾಂಕ್ ಆಫ್ ಬರೋಡ ಜೊತೆ ಮರ್ಜ್ ಆಗಿತ್ತು. ಅಲ್ಲಿಗೆ, ಕರ್ನಾಟಕ ಮೂಲದ ಬ್ಯಾಂಕ್ ಎಂದು ಉಳಿದುಕೊಂಡಿದ್ದು ಕೆನರಾ ಬ್ಯಾಂಕ್ ಮಾತ್ರ.
ಬ್ಯಾಂಕುಗಳ ವಿಲೀನ ಸದ್ಯಕ್ಕೆ ಮುಗಿಯಿತು ಎನ್ನುವಷ್ಟರಲ್ಲಿ ಈಗಿರುವ ಹನ್ನೆರಡು ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ ಮತ್ತೆ ನಾಲ್ಕನ್ನು ಖಾಸಗಿಯವರಿಗೆ ಒಪ್ಪಿಸಲು ಕೇಂದ್ರ ಸರಕಾರ ಮೊದಲ ಹೆಜ್ಜೆಯಿಟ್ಟಿದೆ ಎನ್ನುವ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ಖಾಸಗೀಕರಣದ ಪಟ್ಟಿಯಲ್ಲಿ ನಾಲ್ಕು ಸರಕಾರೀ ಸ್ವಾಮ್ಯದ ಬ್ಯಾಂಕ್ ಗಳು ಯಾವುವು? : ಖಾಸಗೀಕರಣದ ಪಟ್ಟಿಯಲ್ಲಿ ನಾಲ್ಕು ಸರಕಾರೀ ಸ್ವಾಮ್ಯದ ಬ್ಯಾಂಕುಗಳಿವೆ ಎನ್ನುವ ಮಾಹಿತಿಯಿದೆ. ಇದರ ಪೈಕಿ ಎರಡು ಬ್ಯಾಂಕುಗಳನ್ನು ಮುಂದಿನ ಹಣಕಾಸು ವರ್ಷ ಅಂದರೆ 2021-22ರಲ್ಲಿ ಖಾಸಗಿಯವರಿಗೆ ಒಪ್ಪಿಸಲು ಕೇಂದ್ರ ಮೊದಲ ಹೆಜ್ಜೆಯಿಟ್ಟಿದೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ದೇಶದ ದೊಡ್ಡ ಬ್ಯಾಂಕುಗಳೂ ಖಾಸಗೀಕರಣಗೊಳ್ಳುವ ಸಾಧ್ಯತೆಗಳಿವೆ ಎಂದು ಬ್ಯಾಂಕ್ ಅಧಿಕಾರಿಗಳು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಕೇಂದ್ರ ಸರಕಾರ ಖಾಸಗೀಕರಣ ಮಾಡಲು ಮುಂದಾಗಿರುವ ನಾಲ್ಕು ಬ್ಯಾಂಕುಗಳ ಸಪೂರ್ಣ ಮಾಹಿತಿ ಇಲ್ಲಿದೆ.
1) ಬ್ಯಾಂಕ್ ಆಫ್ ಮಹಾರಾಷ್ಟ್ರ : 16.09.1935ರಲ್ಲಿ ಸ್ಥಾಪನೆಗೊಂಡಿರುವ, ಮಹಾರಾಷ್ಟ್ರದ ಪುಣೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಖಾಸಗೀಕರಣಗೊಳ್ಳುವ ಬ್ಯಾಂಕುಗಳ ಪಟ್ಟಿಯಲ್ಲಿದೆ. ಈ ಬ್ಯಾಂಕ್ 13,048 ಉದ್ಯೋಗಿಗಳನ್ನು ಹೊಂದಿದ್ದು, 1,874 ಶಾಖೆಗಳನ್ನು ಹೊಂದಿದೆ.
2) ಇಂಡಿಯನ್ ಓವರ್ ಸೀಸ್ ಬ್ಯಾಂಕ್ : ಚೆನ್ನೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಕೂಡಾ ಈ ಪಟ್ಟಿಯಲ್ಲಿರುವ ಇನ್ನೊಂದು ಬ್ಯಾಂಕ್. 10.02.1937ರಲ್ಲಿ ಸ್ಥಾಪನೆಗೊಂಡಿರುವ ಈ ಬ್ಯಾಂಕ್ 3,557 ಶಾಖೆಯನ್ನು ಹೊಂದಿದ್ದು, 26,354 ಉದ್ಯೋಗಿಗಳು ಈ ಬ್ಯಾಂಕ್ ನಲ್ಲಿ ಕೆಲಸದಲ್ಲಿದ್ದಾರೆ.
3) ಬ್ಯಾಂಕ್ ಆಫ್ ಇಂಡಿಯಾ: ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬ್ಯಾಂಕ್ ಆಫ್ ಇಂಡಿಯಾ ಪಟ್ಟಿಯಲ್ಲಿರುವ ಇನ್ನೊಂದು ಬ್ಯಾಂಕ್. 07.09.1906ರಲ್ಲಿ ಈ ಬ್ಯಾಂಕ್ ಸ್ಥಾಪನೆಗೊಂಡಿತ್ತು ಮತ್ತು 5,107 ಶಾಖೆಗಳನ್ನು 49,767 ಉದ್ಯೋಗಿಗಳನ್ನು ಈ ಬ್ಯಾಂಕ್ ಹೊಂದಿದೆ.
4) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ : ಮುಂಬೈ ಮೂಲದ ಮತ್ತೊಂದು ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಈ ಪಟ್ಟಿಯಲ್ಲಿದೆ. 21.12.1911ರಲ್ಲಿ ಈ ಬ್ಯಾಂಕ್ ಸ್ಥಾಪನೆಗೊಂಡಿತ್ತು. 33,481 ಉದ್ಯೋಗಿಗಳನ್ನು ಈ ಬ್ಯಾಂಕ್ ಹೊಂದಿದ್ದು, 4,651 ಶಾಖೆಯನ್ನು ಈ ಬ್ಯಾಂಕ್ ಹೊಂದಿದೆ.
ಇದನ್ನೂ ಓದಿ :ವಿಪಕ್ಷಗಳ ವಿರೋಧದ ನಡುವೆಯೂ ಬಂದರು ಪ್ರಾಧಿಕಾರ ಮಸೂದೆ 2020 ಕ್ಕೆ ಅನುಮೋದನೆ
ಕಾರ್ಪೋರೇಟ್ ಗಳಿಗೆ ರತ್ನಗಂಭಳಿ ಹಾಸಿ ಕರೆಯುವ ವಮೂಲಕ ಸರಕಾರಿ ಸ್ವಾಮ್ಯದ ವಲಯಗಳನ್ನು ಖಾಸಗೀಯರ ಪಾಲಾಗಿಸುವ ಸರಕಾರದ ಕ್ರಮಕ್ಕೆ ಭಾರೀ ವಿರೋಧ ವಾಗುತ್ತಿದೆ. ಬ್ಯಾಂಕ್, ರೈಲ್ವೆ, ವಿಮಾನ, ದೂರ ಸಂಪರ್ಕ, ವಿಮೆ ಹೀಗೆ ಒಂದರ ಹಿಂದೆ ಒಂದರಂತೆ ಖಾಸಗೀಕರಣಗೊಳ್ಳುತ್ತಿರುವುದು ಅಪಾಯದ ಸಂಕೇತ ಎಂಬುದು ತಜ್ಞರ ವಾದವಾಗಿದೆ.