”3ನೇ ಅವಧಿಯಲ್ಲಿ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆ”-‘ಭಾರತ ಮಂಡಪಂ’ ನಿಂದ ‘ಮೋದೀ ಕೀ ಗ್ಯಾರಂಟಿ’

(ಸಂಗ್ರಹ:ಕೆ.ವಿ.)

“ನನ್ನ ಮೂರನೇ ಅವಧಿಯಲ್ಲಿ, ಭಾರತ ಅತ್ಯುನ್ನತ ಮೂರು ಅರ್ಥವ್ಯವಸ್ಥೆಗಳಲ್ಲಿ ಇರುತ್ತದೆ. ಇದು ಮೋದಿಯ ಗ್ಯಾರಂಟಿ” ಎಂದು ಪ್ರಧಾನಿಗಳು ‘ಭಾರತ
ಮಂಡಪಂ’ಎಂದು ಮರುನಾಮಕರಣಗೊಂಡಿರುವ ದಿಲ್ಲಿಯ ಪ್ರಗತಿ ಮೈದಾನದ ಅಂತರ್ರಾಷ್ಟ್ರೀಯ ಪ್ರದರ್ಶನಾ ಮತ್ತು ಸಮಾವೇಶ ಕೇಂದ್ರದಿಂದ ಸಾರಿದ್ದಾರೆ (ಎನ್‌ಡಿಟಿವಿ, ಜುಲೈ 26).

“ನಮ್ಮ ಮೊದಲ ಅವಧಿಯಲ್ಲಿ ಅರ್ಥವ್ಯವಸ್ಥೆಯ ವಿಷಯದಲ್ಲಿ ಭಾರತ 10ನೇ ಸ್ಥಾನದಲ್ಲಿತ್ತು. ನನ್ನ ಎರಡನೇ ಅವಧಿಯಲ್ಲಿ ಜಗತ್ತಿನ ಐದನೇ ಅತಿ ದೊಡ್ಡ
ಅರ್ಥವ್ಯವಸ್ಥೆಯಾಯಿತು. ಈ  ಸಾಧನೆಯ ದಾಖಲೆಗಳ ಆಧಾರದಲ್ಲಿ, ಮೂರನೇ ಅವಧಿಯಲ್ಲಿ, ಅರ್ಥವ್ಯವಸ್ಥೆ ಜಗತ್ತಿನ ಅತ್ಯುನ್ನತ ಮೂರರಲ್ಲಿ ಇರುತ್ತದೆ ಎಂದು ದೇಶ ನಂಬುವಂತೆ ನಾನು ಮಾಡುತ್ತೇನೆ” ಎಂದ ಅವರು, ಇದು ‘ಮೋದೀಕೀ ಗ್ಯಾರಂಟಿ’ ಎಂದು ಹೇಳಿರುವುದಾಗಿ ವರದಿಯಾಗಿದೆ.

ಇದು ಮಣಿಪುರದ ಮುಜುಗರದ ಹೊರತಾಗಿಯೂ ಪ್ರಧಾನಿಗಳ ಅಗಾಧ ಆತ್ಮವಿಶ್ವಾಸದ ಸಂಕೇತ, ಪ್ರತಿಪಕ್ಷಗಳ ಅವಿಶ್ವಾಸ ಠರಾವಿಗೆ ತಕ್ಕ ಉತ್ತರ ಎಂದೆಲ್ಲ ವರ್ಣಿಸಲಾಗುತ್ತಿದೆ. ಇನ್ನೊಂದು ತುದಿಯಲ್ಲಿ ಬಹುಶಃ ಇದು ಅವರ ತೀವ್ರ ಅಧೀರತೆಯ ಅಭಿವ್ಯಕ್ತಿಯೂ ಆಗಿರಬಹುದು ಎಂದು ಹೇಳಲಾಗುತ್ತಿದೆ. ಪ್ರಖ್ಯಾತ
ಹಿರಿಯ ಪತ್ರಕರ್ತ ಹರೀಶ್ ಖರೆ, ಜುಲೈ 26ರ ಈ ‘ಭಾರತ ಮಂಡಪಂ’ ಉದ್ಘೋಷದಿಂದ ಈ ಮನುಷ್ಯ ಈಗ ಭ್ರಮಾಲೋಕಕ್ಕೆ ಮರಳಿ ಬಾರದಂತೆ
ಜಾರಿದ್ದಾರೆ ಎಂಬ ತೀರ್ಮಾನಕ್ಕೆ ಬರುವುದು ಕಷ್ಟವೇನಲ್ಲ ಎನ್ನುತ್ತಾರೆ  (A New ‘Black Market of Power’ in Naya Bharat, ದಿ ವೈರ್, ಜುಲೈ 28).

ನನ್ನ ಹೆಂಡತಿ ಟೊಮೆಟೊ ಬಗ್ಗೆ ಕೇಳಿದಾಗ ನಾನು ಇಂಡಿಯನ್ ಮುಜಾಹಿದೀನ್, ಪಾಪ್ಯುಲರ್‍ ಫ್ರಂಟ್ ಇತ್ಯಾದಿಗಳ ಬಗ್ಗೆ ಹೇಳಲಾರಂಭಿಸಿದೆ. ಆಗ…ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ

ಕೆಲವೇ ದಿನಗಳ ಹಿಂದೆ ಪ್ರತಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ‘ಇಂಡಿಯ’ ಎಂದು ನಾಮಕರಣ ಮಾಡಿದಾಗ ಅವರ ಪ್ರತಿಕ್ರಿಯೆಯನ್ನೂ ಇದೇ ತೆರನಲ್ಲಿ ವಿಧವಿಧವಾಗಿ ವ್ಯಾಖ್ಯಾನಿಸಲಾಗಿತ್ತುಪಿಎಫ್ ನಲ್ಲೂ ಇಂಡಿಯಾ ಇದೆಇಂಡಿಯನ್ ಮುಜಾಹಿದೀನ್ ನಲ್ಲೂ ಇಂಡಿಯಾ ಇದೆ ಎಂದು ಅವರು ವ್ಯಂಗ್ಯವಾಡಿದಾಗಇದು ಸ್ಟಾಂಡ್ ಅಪ್ ಇಂಡಿಯಾ ಅಂದಾಗಲೂ ಇತ್ತುಮೇಕ್ ಇನ್ ಇಂಡಿಯಾ ಎನ್ನುವಾಗಲೂ ಇತ್ತು ಎಂಬ ಪ್ರತಿವ್ಯಂಗ್ಯ ಬಂದಿದೆ.

ಆದರೆ ಪ್ರಧಾನಿಗಳ ಗ್ಯಾರಂಟಿ ಭಾರತದ ಅರ್ಥವ್ಯವಸ್ಥೆಯ ಸ್ಥಾನಕ್ಕಿಂತ ಹೆಚ್ಚಾಗಿ, ಅವರ ಮೂರನೇ ಅವಧಿಯ ಬಗ್ಗೆ ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ. ಕರ್ನಾಟಕದಲ್ಲಿ ಅವರ ಪಕ್ಷವನ್ನು 66ಕ್ಕೆ ಇಳಿಸಿದ ‘ಗ್ಯಾರಂಟಿ’ ಈಗ ಪ್ರಧಾನಿಗಳ ಪದಕೋಶದಲ್ಲೂ ಸ್ಥಾನ ಪಡೆದಿದೆ ಎಂಬುದು ಕೂಡ ಗಮನಿಸಬೇಕಾದ ಸಂಗತಿಯಲ್ಲವೇ ಎಂದು ಇನ್ನು ಕೆಲವು ವಿಶ್ಲೇಷಕರು ಹೇಳುತ್ತಾರೆ.

ಅಭಿವೃದ್ಧಿ ಸೂಚ್ಯಂಕಗಳಲ್ಲಿ 50-60ನೇ ಸ್ಥಾನಕ್ಕಾದರೂ ಏರುವ ಗ್ಯಾರಂಟಿ ಕೊಡಬಲ್ಲರೇ?

ಆದರೆ ನಿಜವಾಗಿ ಇದಕ್ಕೆ ಮೋದಿಯವರ ಗ್ಯಾರಂಟಿ ಬೇಕಾಗಿಯೇ ಇಲ್ಲ ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ಡಾ. ಥಾಮಸ್‍ ಐಸಾಕ್‍, ಕೇರಳದ ಹಿಂದಿನ ಹಣಕಾಸು
ಮಂತ್ರಿಗಳು. ಏಕೆಂದರೆ ಮೋದಿಯವರು ಗುಜರಾತದ ಮುಖ್ಯಮಂತ್ರಿಯಾಗಿ ಭಾರತದ ರಾಜಕಾರಣವನ್ನು ಪ್ರವೇಶಿಸುವ ಮೊದಲೇ ಭಾರತದ ಆರ್ಥಿಕ
ಬೆಳವಣಿಗೆ ಜಗತ್ತಿನ ಸರಾಸರಿ ಆರ್ಥಿಕ ಬೆಳವಣಿಗೆಯ ಎರಡು ಪಟ್ಟಿಗಿಂತಲೂ ಹೆಚ್ಚಿನ ವೇಗದಲ್ಲಿ ಸಾಗಿತ್ತು. ನೋಟುರದ್ಧತಿಯ ಕ್ರಮ ಕೈಗೊಳ್ಳದೇ ಇದ್ದಿದ್ದರೆ
ಅದು ಈಗಾಗಲೇ ಮೂರನೇ ಸ್ಥಾನದಲ್ಲಿರುತ್ತಿತ್ತು ಎಂದು ಇತರ ಕೆಲವು ವಿಶ್ಲೇಷಕರೂ ಹೇಳುತ್ತಾರೆ.  ಈಗಲೂ  ಇಂತಹ ಇನ್ನಷ್ಟು ಅನರ್ಥಗಳನ್ನು ಮಾಡದಿದ್ದರೆ, ಅದು ತಾನಾಗಿಯೇ ಆ ಸ್ಥಾನಕ್ಕೆ ಬರುತ್ತದೆ, ಅದಕ್ಕೆ ಯಾರ ಗ್ಯಾರಂಟಿಯೂ ಬೇಕಾಗಿಲ್ಲ, ವಾಸ್ತವವಾಗಿ ಮೋದಿಯವರು ಭಾರತೀಯ ಜನತೆಗೆ ಗ್ಯಾರಂಟಿ
ಕೊಡುವುದಿದ್ದರೆ, ಭಾರತದಕ್ಕಿಂತ ಎಷ್ಟೋ ನಿಧಾನವಾದ ಆರ್ಥಿಕ ಬೆಳವಣಿಗೆ ಕಾಣುತ್ತಿರುವ ದೇಶಗಳ ಜನರಿಗೆ ಲಭ್ಯವಿರುವ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಕ್ರಮಗಳ ಗ್ಯಾರಂಟಿಯನ್ನು ಅವರು ಕೊಡಬೇಕಾಗಿದೆ ಎಂದು ಥಾಮಸ್‍ ಐಸಾಕ್‍ ಹೇಳುತ್ತಾರೆ.

ಇದನ್ನೂ ಓದಿ:ಮಣಿಪುರ ಹಿಂಸಾಚಾರ ಭುಗಿಲೆದ್ದ ನಂತರ 10 ರಾಷ್ಟ್ರ, 10 ರಾಜ್ಯಗಳನ್ನು ಸುತ್ತಾಡಿದ್ದ ಪ್ರಧಾನಿ ಮೋದಿ!

  • ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 2014ರಲ್ಲಿ 130 ನೇ ಸ್ಥಾನದಲ್ಲಿದ್ದ ಭಾರತ  2022ರಲ್ಲಿ 132ನೇ ಸ್ಥಾನಕ್ಕೆ ಇಳಿದಿದೆ.
  • ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 2014ರಲ್ಲಿದ್ದ  120ರಲ್ಲಿ 55ನೆಯ ಸ್ಥಾನದಿಂದ, ಈಗ 2022ರಲ್ಲಿ 121ರಲ್ಲಿ 107ನೇ ಸ್ಥಾನಕ್ಕೆ ಇಳಿದಿದೆ .
  • ವಿಶ್ವಸಂಸ್ಥೆಯ ಜಾಗತಿಕ ನೆಮ್ಮದಿ ಸೂಚ್ಯಂಕದಲ್ಲಿ 2015ರಿಂದ 2022ರ ನಡುವೆ 117ನೇ ಸ್ಥಾನದಿಂದ 126ನೇ ಸ್ಥಾನಕ್ಕೆ ಜಾರಿದೆ.
  • ವಿಶ್ವ ಆರ್ಥಿಕ ವೇದಿಕೆಯ ಲಿಂಗ ದೂರ ಸೂಚ್ಯಂಕದಲ್ಲಿ 2014ರಲ್ಲಿ 114ನೇ ಸ್ಥಾನದಲ್ಲಿದ್ದದ್ದು ಈಗ 2022ರಲ್ಲಿ 135ಕ್ಕೆ ಕುಸಿದಿದೆ.
  • ಬ್ಲೂಮ್‍ಬರ್ಗ್ ನ  ಆರೋಗ್ಯ ಸೂಚ್ಯಂಕದಲ್ಲಿ 2015 ರಿಂದ 2022ರ ನಡುವೆ 103ನೇ ಸ್ಥಾನದಿಂದ 120ನೇ ಸ್ಥಾನಕ್ಕೆ ಕುಸಿದಿದೆ.
  • ಆದರೆ ರಾಯ್ಟರ್ ಫೌಂಡೇಷನ್ನಿನ ‘ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ’ದ ಪಟ್ಟಿಯಲ್ಲಿ 2011ರಲ್ಲಿ 4ನೇ ಸ್ಥಾನದಲ್ಲಿದ್ದದ್ದು 2018ರಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ!
  • ಜಾರ್ಜ್ ಟೌನ್ ಮಹಿಳಾ ಸುರಕ್ಷಿತತೆ ಸೂಚ್ಯಂಕದಲ್ಲಿ 2017ರಲ್ಲಿ 131ನೇ ಸ್ಥಾನದಲ್ಲಿದ್ದದ್ದು 2022ರಲ್ಲಿ 148ಕ್ಕೆ ಇಳಿದಿದೆ.
  • ಸುಸ್ಥಿರ ಬೆಳವಣಿಗೆ ಸೂಚ್ಯಂಕದಲ್ಲಿ 2016ರಿಂದ 2022ರ ನಡುವೆ 110ರಿಂದ 121ನೇ ಸ್ಥಾನಕ್ಕೆ ಕುಸಿದಿದೆ.

ಈ ಎಲ್ಲಅಭಿವೃದ್ಧಿ ಸೂಚ್ಯಂಕಗಳಲ್ಲಿ 3ನೇ ಅಥವ 5ನೇ ಸ್ಥಾನಕ್ಕೆ ಬರದಿದ್ದರೂ ಪರವಾಗಿಲ್ಲ, 50,60ರ ಸ್ಥಾನವನ್ನಾದರೂ ತಲುಪುವ ಗ್ಯಾರಂಟಿಯನ್ನು ಮೋದಿಯವರು ಕೊಡಬಲ್ಲರೇ ಎಂದು ಡಾ. ಥಾಮಸ್‍ ಐಸಾಕ್‍ ಕೇಳುತ್ತಾರೆ.

ಅಮೆರಿಕಾದಲ್ಲೂ ಹೇಳಿದ್ದರು

ಪ್ರಧಾನಿಗಳು ಜಗತ್ತಿನ ಅರ್ಥವ್ಯವಸ್ಥೆಯಲ್ಲಿ ಭಾರತದ 10-5-3 ಸ್ಥಾನದ ಬಗ್ಗೆ ಈ ಮೊದಲು ಅಮೆರಿಕನ್ ಸಂಸತ್ತನ್ನು ಉದ್ದೇಶಿಸಿ ಜೂನ್ 23ರಂದು ಮಾಡಿದ ಭಾಷಣದಲ್ಲೂ ಹೇಳಿದ್ದರಂತೆ- “ನಾನು ಪ್ರಧಾನ ಮಂತ್ರಿಯಾಗಿ ಅಮೆರಿಕಾಕ್ಕೆ ಮೊದಲು ಭೇಟಿ ನೀಡಿದಾಗ ಭಾರತ ಜಗತ್ತಿನಲ್ಲಿ 10ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿತ್ತು,. ಇಂದು ಭಾರತ 5ನೇಯ ದಾಗಿದೆ, ಬೇಗನೇ ನಾವು ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗುತ್ತೇವೆ” ಎಂದಿದ್ದರಂತೆ.

ಈಗ ಒಂದು ತಿಂಗಳ ನಂತರ ‘ಭಾರತಮಂಡಪಂನಲ್ಲಿ ಅದಕ್ಕೆ ಅವರ ಒಂದನೇ, ಎರಡನೇ ಮತ್ತು ಭಾವೀ ಮೂರನೇ ಅವಧಿ ಸೇರಿಕೊಂಡಿದೆ. ಜತೆಗೆ
‘ಗ್ಯಾರಂಟಿ’ ಕೂಡ.

ಇದಕ್ಕೆ ಕಾರಣ ಮಣಿಪುರದ ವಿಷಯದಲ್ಲಿ ‘ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿ’ ಬಂದಿರುವ ಪ್ರಸಂಗವೋ ಅಥವ ಪ್ರತಿಪಕ್ಷಗಳ ‘ಇಂಡಿಯ’ವೋ ಎಂಬುದು ಅವರವರ ಊಹೆಗೆ ಬಿಟ್ಟದ್ದು.

“ನನ್ನ ಕೈಗಾಡಿ ಖಾಲಿ-ವಿಪರೀತ ಬೆಲೆಗಳಿಂದಾಗಿ”

“ನನ್ನ 3ನೇ ಅವಧಿಯಲ್ಲಿ ಭಾರತ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗುತ್ತದೆ” ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್

ಹಣ ಮತ್ತು ಅಧಿಕಾರದ ‘ಜುಗಲ್‍ಬಂದಿ

ಆದರೆ ‘ಭಾರತಮಂಡಪಂ’ ಉದ್ಘೋಷ ಭ್ರಮಾಲೋಕಕ್ಕೆ ಜಾರಿರುವ ಲಕ್ಷಣ ಎಂದಿರುವ ಹರೀಶ ಖರೆಯವರು ತಮ್ಮ ವಿಶ್ಲೇಷಣೆಯಲ್ಲಿ ಇನ್ನೊಂದು ಸಂಗತಿಯತ್ತವೂ ಗಮನ ಸೆಳೆದಿದ್ದಾರೆ.

ಪ್ರಧಾನಿಗಳ ಈ ಉದ್ಘೋಷದ 8 ದಿನಗಳ ಹಿಂದೆಯೇ ಅವರ ಪರಮ ಆಪ್ತ ಕೈಗಾರಿಕೋದ್ಯಮಿ ಅದಾನಿ ಎಂಟರ್‌ಪ್ರೈಸಸ್‌ನ ಎಜಿಎಂ(ವಾರ್ಷಿಕ ಸರ್ವ ಸದಸ್ಯ) ಸಭೆಯಲ್ಲಿ ಹಿಂಡೆನ್ಬರ್ಗ್ ಮುಜುಗರದಿಂದ ಹೊರಬಂದು ಮಾತಾಡುತ್ತ “ ಅದಾಗಲೇ ಜಗತ್ತಿನ 5ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿರುವ ಭಾರತ 2030ಕ್ಕಿಂತ ಬಹಳ ಮುಂಚೆಯೇ ಜಗತ್ತಿನ ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದಿದ್ದರಂತೆ. ‘ಭಾರತಮಂಡಪಂ’ನಲ್ಲಿ
ಪ್ರಧಾನಿಗಳು ಅದೇ ಟೈಂ ಟೇಬಲನ್ನು ಅನಾವರಣ ಮಾಡಿದ್ದು ಕಾಕತಾಳೀಯವಿರಲೂ ಬಹುದು, ಆದರೂ ಮುಂದುವರೆದು ಅವರು ಹೇಳಿರುವ ಮಾತುಗಳು ಗಮನಾರ್ಹ ಎಂದು ಹರೀಶ್ ಖರೆಯವರು ಹೇಳುತ್ತಾರೆ.

“ಯಾವುದೇ ಅರ್ಥವ್ಯವಸ್ಥೆಗೆ ನೀತಿಗಳ ಅನುಷ್ಠಾನಕ್ಕೆ ಮತ್ತು ಬೆಳವಣಿಗೆಯ ಅಡಿಪಾಯ ಹಾಕಲು ಒಂದು ಸ್ಥಿರ ಸರ್ಕಾರ ಬೇಕೇ ಬೇಕು.. ನಮ್ಮ ಮಾತೃಭೂಮಿಯ ಬೆಳವಣಿಗೆಯ ಕತೆಯಲ್ಲಿ ನನ್ನ ನಂಬಿಕೆ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ” ಎಂದು ಅದಾನಿ ಹೇಳಿದರಂತೆ. ಈ ತರ್ಕ ಮತ್ತು ‘ಭಾರತಮಂಡಪಂ’ ಉದ್ಘೋಷದಲ್ಲಿನ ‘ಜುಗಲ್‌ಬಂದಿ’ ಊಹಾಪೋಹಕ್ಕೆ ಹೆಚ್ಚೇನೂ ಅವಕಾಶ ಉಳಿಸಿಲ್ಲ ಎಂದು ಹರೀಶ್ ಖರೆಯವರು ವ್ಯಂಗ್ಯವಾಗಿ ಹೇಳುತ್ತಾರೆ.

ಅಂದರೆ ‘ಅಧಿಕಾರದ ಕಾಳಸಂತೆ’(Black Market of Power) ಎಂಬ ಪರಿಕಲ್ಪನೆಯನ್ನು 1930ರ ದಶಕದಲ್ಲಿ ಪರಿಚಯಿಸಿದ ನಾಝಿ ಜರ್ಮನಿಯ ಭಿನ್ನ ಮತೀಯ ವಾಲ್ಟರ್‍ ಬೆಂಜಮಿನ್  ಹಣ ಮತ್ತು ಅಧಿಕಾರದ ಸಹಸಂಬಂಧ ಈ ಕಾಳಸಂತೆಯ ವಿಶಿಷ್ಟ ಲಕ್ಷಣ ಎಂದಿದ್ದರು, ಜರ್ಮನಿಯಲ್ಲಿ ನಾಝಿಗಳ ಆಳ್ವಿಕೆಯಲ್ಲಿ  ದೊಡ್ಡ ಕೈಗಾರಿಕೋದ್ಯಮಿಗಳೆಲ್ಲ ಹಿಟ್ಲರ್   ಹಿಂದೆ ಸಾಲುಗಟ್ಟಿದ್ದರು ಎಂಬ ಸಂಗತಿಯತ್ತ ಹರೀಶ್‍ ಖರೆ ಗಮನ ಸೆಳೆಯುತ್ತಾರೆ.

ಈ ಶತಮಾನದಲ್ಲೂ ಈ ಪ್ರವೃತ್ತಿ ‘ಬಲಿಷ್ಟ’ರಾಜಕೀಯ ವ್ಯಕ್ತಿಗಳು ಮತ್ತು  ಹಿಡಿಯಷ್ಟು ದೊಡ್ಡ ಉದ್ಯಮಿಗಳ ಶಾಮೀಲು ಇರುವ ದೇಶಗಳಲ್ಲಿ  ಕಂಡುಬಂದಿದೆ. ಭಾರತದಲ್ಲಿ ಇನ್ನೂ ಸಂವಿಧಾನಿಕ ಪ್ರಜಾಪ್ರಭುತ್ವ ವೆಂಬ ‘ತೊಂದರೆ’ ಇರುವುದರಿಂದ ಇದೀಗ ತುಸು ಹೆಚ್ಚು ನಯಗೊಳಿಸಿರುವ ಸ್ವರೂಪದಲ್ಲಿದೆ. ಮೂರನೇ ಅವಧಿಯಲ್ಲಿ ಮೂರನೇ ಸ್ಥಾನದ ಗ್ಯಾರಂಟಿಯ ಘೋಷಣೆ  ಈ ದಿಕ್ಕಿನಲ್ಲಿ ಉನ್ನತ ನ್ಯಾಯಾಂಗ ಮತ್ತು ಚುನಾವಣಾ ಆಯೋಗ ಮುಂತಾದ ಸಂವಿಧಾನಿಕ ಕತ್ಯವ್ಯಗಳಿರುವ ಎಲ್ಲರಿಗೂ ನೀಡಿರುವ ಎಚ್ಚರಿಕೆ ಎನ್ನುತ್ತಾರೆ ಹರೀಶ್‍ ಖರೆ.

Donate Janashakthi Media

Leave a Reply

Your email address will not be published. Required fields are marked *