3ನೇ ಅಲೆ ಎದುರಿಸಲು ಜನತೆಗೆ ಪೌಷ್ಟಿಕ ಆಹಾರ ಕಡಿಮೆ ದರದಲ್ಲಿ ನೀಡಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹ

ಬೆಂಗಳೂರು: ‘ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಎದುರಿಸಲು ಜನರಿಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕಾಗಿದೆ. ಯಾರನ್ನೂ ಹಸಿವಿನಿಂದ ನರಳದಂತೆ ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿ ಸರಕಾರದ್ದಾಗಿದೆ. ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಜನರಿಗೆ ಕೈಗೆಟುಕುವ ದರಗಳಲ್ಲಿ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ʻʻಉತ್ತಮ ಆಹಾರವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಇದ್ದರೆ ಕೊರೊನಾದಂಥ ಮಾರಣಾಂತಿಕ ಸಾಂಕ್ರಾಮಿಕವನ್ನುವನ್ನು ಎದುರಿಸಲು ಸಾಧ್ಯವಾಗುತ್ತದೆ. ಆರೋಗ್ಯ ವ್ಯವಸ್ಥೆಯನ್ನು ಸಮರ್ಪಕವಾಗಿ ಉತ್ತಮವಾಗಿ ಇಟ್ಟುಕೊಳ್ಳುವ ಜೊತೆಯಲ್ಲಿಯೇ ಜನರಿಗೆ ರೋಗ ನಿರೋಧಕ ಶಕ್ತಿಯನ್ನು ಉತ್ತಮ ಪಡಿಸುವ ಜವಾಬ್ದಾರಿ ಇದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯೋನ್ಮುಖರಾಗಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನು ಓದಿ: ಅಂಗನವಾಡಿಗಳಿಗೆ ಕೂಡಲೇ ವಿದ್ಯುತ್, ಶೌಚಾಲಯ ಒದಗಿಸಲು ಕರ್ನಾಟಕ ಹೈಕೋರ್ಟ್‌ ನಿರ್ದೇಶನ

‘ಕೋವಿಡ್‌ ಮೊದಲನೇ ಹಾಗೂ ಎರಡನೆ ಅಲೆಗಳು ರಾಷ್ಟ್ರ ಮತ್ತು ರಾಜ್ಯದ ಜನರ ಮೇಲೆ ಗಂಭೀರವಾದ ಪರಿಣಾಮ ಬೀರಿದ್ದವು. ಇಡೀ ದೇಶದಲ್ಲಿ ಒಂದು ರೀತಿಯಲ್ಲಿ ಸೂತಕದ ವಾತಾವರಣ ಮುಗಿಯುವುದು ಎಂಬ ನಿರೀಕ್ಷೆಯಲ್ಲಿರುವಾಗಲೇ ವೈರಾಣು ಮತ್ತು ಸಾಂಕ್ರಾಮಿಕ ರೋಗಗಳ ಹಿರಿಯ ತಜ್ಞರು ಹಾಗೂ ಆರೋಗ್ಯ ಕ್ಷೇತ್ರದ ಪರಿಣತರು ಮೂರನೇ ಅಲೆಯ ಕುರಿತು ಆತಂಕದ ಮಾತುಗಳನ್ನಾಡುತ್ತಿದ್ದಾರೆ. ಬರಲಿರುವ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರಲಿದೆ ಎಂಬ ಸಾಧ್ಯತೆಗಳ ಬಗ್ಗೆ ಅಂದಾಜಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ.

ʻರಾಜ್ಯದ ಮಕ್ಕಳು, ಮಹಿಳೆಯರು ಹಾಗೂ ಯುವಜನರಲ್ಲಿನ ಅಪೌಷ್ಟಿಕತೆಯ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ. ಒಕ್ಕೂಟ ಸರ್ಕಾರದ ಆರೋಗ್ಯ ಇಲಾಖೆಯ ವತಿಯಿಂದ ನಡೆಸಿರುವ ಸಮೀಕ್ಷೆ-5 (2019-20) ರ ಪ್ರಕಾರ ರಾಜ್ಯದಲ್ಲಿರುವ ನಿಗಧಿತ ಪ್ರಮಾಣಕ್ಕಿಂತ  ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ 33ರಷ್ಟಿದೆ. ಶೇ 65.5 ರಷ್ಟು ಮಕ್ಕಳ ಹಿಮೊಗ್ಲೋಬಿನ್ ಪ್ರಮಾಣ 11 ಗ್ರಾಂ ಗಿಂತ ಕಡಿಮೆ ಇದೆ. ಇದು ಅತ್ಯಂತ ಗಾಬರಿ ಹುಟ್ಟಿಸುವ ಸಂಗತಿಯಾಗಿದೆ’.

ಇದನ್ನು ಓದಿ: ಮೂರು ತಿಂಗಳೊಳಗೆ ಶೇಕಡಾ 80ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಿ-3ನೇ ಅಲೆಯಿಂದ ರಕ್ಷಿಸಿ: ಡಿ.ಕೆ.ಶಿವಕುಮಾರ್

‘ಅದೇ ರೀತಿ 1000 ಮಕ್ಕಳಲ್ಲಿ  25 ಮಕ್ಕಳು 5 ವರ್ಷ ತುಂಬುವ ಮೊದಲೆ ರಾಜ್ಯದಲ್ಲಿ ಮರಣ ಹೊಂದುತ್ತಿದ್ದಾರೆ. ಗ್ರಾಮೀಣ ಕರ್ನಾಟಕದಲ್ಲಿ 28 ಮಕ್ಕಳು ಮರಣ ಹೊಂದುತ್ತಿದ್ದಾರೆ. ಒಕ್ಕೂಟ ಸರ್ಕಾರದ ಸುಸ್ಥಿರ ಅಭಿವೃದ್ಧಿ ಗುರಿ 2020-21ರ ಸಮೀಕ್ಷೆಯ ಪ್ರಕಾರ ಈ ವಯಸ್ಸಿನ ಮಕ್ಕಳ ಮರಣ ಪ್ರಮಾಣವ ಶೇ 28 ರಷ್ಟಿದೆ. ಹೀಗಾಗಿ 2019-20ಕ್ಕೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಾಗಿದೆ.’

‘ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇಕಡಾ 40ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಯಾದಗಿರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ಧಾರವಾಡ ಮುಂತಾದ ಜಿಲ್ಲೆಗಳಿವೆ. ರಾಜ್ಯದ ಸರಾಸರಿ ಪ್ರಮಾಣ ಶೇ 32 ರಷ್ಟಿದೆ. ತೀವ್ರ ಅಪೌಷ್ಟಿಕತೆಯುಳ್ಳವರಲ್ಲಿ ಶೇ 25ರಷ್ಟು ಮಕ್ಕಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೆ ಇದ್ದಾರೆ ಎಂಬುದು ತೀವ್ರ ಕಳವಳದ ವಿಚಾರ. ಇಂಥ ಸ್ಥಿತಿ ಇರುವಾಗ ರಾಜ್ಯ ಸರ್ಕಾರವು ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಮರೋಪಾದಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದೂ ಅವರು ಮನವಿ ಮಾಡಿದ್ದಾರೆ.

”ಅಪೌಷ್ಟಿಕತೆಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು ಮತ್ತಿತರರನ್ನು ಸಮರ್ಪಕವಾಗಿ ಗುರುತಿಸಿ ಅವರ ಆರೋಗ್ಯವನ್ನು ಸುಧಾರಿಸುವ ಕೆಲಸವನ್ನು ಮಾಡಲೇಬೇಕಾಗಿದೆ. ಈಗಾಗಲೆ ನಮ್ಮ ಪಕ್ಷದ ಹಲವು ಶಾಸಕರು ಸಿದ್ಧ ಪೌಷ್ಟಿಕಾಂಶದ ಔಷಧಿ, ಆಹಾರ ವಿತರಿಸುತ್ತಿದ್ದಾರೆ. ಸರ್ಕಾರ ಕೇವಲ ಬಾಯಿಮಾತಿನ ಕೆಲಸಗಳನ್ನು ಬಿಟ್ಟು ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಮತ್ತು  ಇತರೆ ವಯಸ್ಸಿನ ಜನರನ್ನು ಗುರುತಿಸಿ ಸಮರೋಪಾದಿಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ವಿತರಿಸಬೇಕು’ ಎಂದು ಸಿದ್ಧರಾಮಯ್ಯ ಅವರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *