3ನೇ ಅಲೆ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ತಜ್ಞರ ವರದಿಯಂತೆ ಮೂರನೇ ಅಲೆ ಎದುರಾಗಲಿದ್ದು ಕೋವಿಡ್ ನಿರ್ವಹಣೆಗಾಗಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೆ. ಹೇಳಿದರು.

ಬೆಂಗಳೂರು ನಗರದಲ್ಲಿ ಕೋವಿಡ್ ನಿರ್ವಹಣೆ ಸಂಬಂಧಿಸಿದಂತೆ ವೈದ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಸಚಿವರು 18 ವರ್ಷ ಮೇಲ್ಪಟ್ಟವರಿಗೆ ಈಗ ಕೋವಿಡ್ ಲಸಿಕೆ ನೀಡಲಾಗುತ್ತಿದೆ. 18 ವರ್ಷದೊಳಗಿನ ಮಕ್ಕಳಿಗೆ ಸೋಂಕು ತಗುಲಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ ಎಂದು ವಿವರಿಸಿದರು.

ಇದನ್ನು ಓದಿ: ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮೂರನೇ ಅಲೆ ಉತ್ತುಂಗ ಸ್ಥಿತಿಗೆ ತಲುಪುವ ಸಾಧ್ಯತೆ

ಕೋವಿಡ್‌ ಅಲೆಯಿಂದ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಿದರೆ, ಮಧ್ಯಮ, ಹಿರಿಯ ವಯಸ್ಸಿನವರಿಗೆ ನೀಡುವ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಸೋಂಕು ಬಂದರೆ ಮಕ್ಕಳ ತಜ್ಞರ ಬಳಿಯೇ ಹೋಗಬೇಕೆಂದು ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ವೈದ್ಯರಿಗೆ ತರಬೇತಿ ನೀಡುವ ಅವಶ್ಯಕತೆ ಇದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೈದ್ಯರಿಗೆ ತರಬೇತಿ ನೀಡಲಾಗುವುದು ಎಂದು ಪ್ರಕಟಿಸಿದರು.

ತರಬೇತಿಯನ್ನು ವಿಷಯ ತಜ್ಞರು ನೀಡಲಿದ್ದಾರೆ. ಇದನ್ನು ದಾಖಲೆಯಾಗಿಸಿದರೆ ಅನುಕೂಲವಾಗುತ್ತದೆ. ಆದ್ದರಿಂದ ಇಲ್ಲಿ ನೀಡುವ ತರಬೇತಿಯನ್ನು ವೀಡಿಯೋ ರೆಕಾರ್ಡ್ ಮಾಡಿಸಿ ದಾಖಲಿಸಬೇಕು. ಇತರೆ ವೈದ್ಯರಿಗೂ ಈ ವಿಷಯ ತಿಳಿಸಬೇಕು ಎಂದು ಸೂಚಿಸಿದರು.

ಡಾ.ದೇವಿಶೆಟ್ಟಿ ಸಮಿತಿ ಮೂರನೇ ಅಲೆ ಸಿದ್ಧತೆಗೆ ವರದಿ ನೀಡಿದ್ದು, ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ವೈರಾಣು ರೂಪಾಂತರಗೊಳ್ಳುತ್ತಿದ್ದು, ಮುಂದುವರಿದ ದೇಶಗಳು ಕೂಡ ಎಡವಿದೆ. ಮೊದಲ ಅಲೆಯಲ್ಲಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದೇವೆ. ಎರಡನೇ ಅಲೆಗೆ ಮುನ್ನ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ. 4 ಸಾವಿರ ವೈದ್ಯರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಇದನ್ನು ಓದಿ: ಡೆಲ್ಟಾ ಪಲ್ಸ್‌ ಕೋವಿಡ್‌ ರೂಪಾಂತರಿ : ಮೂರನೆ ಅಲೆಗೆ ಕಾರಣವಾಗುತ್ತಾ? ಕರ್ನಾಟಕದಲ್ಲೂ 2 ಪ್ರಕರಣ ಪತ್ತೆ

ಕೇರಳ, ಮಹಾರಾಷ್ಟ್ರ ಗಡಿ ಹಂಚಿಕೊಳ್ಳುವುದರಿಂದ ಕೋವಿಡ್ ಬಗ್ಗೆ ಎಚ್ಚರವಾಗಿರಬೇಕು. ಸೋಂಕು ಇನ್ನೂ ಇರುವುದರಿಂದ ಸುರಕ್ಷತಾ ಕ್ರಮ ವಹಿಸಬೇಕು. ಬೆಂಗಳೂರು ನಗರ ಜಿಲ್ಲೆ ಕೋವಿಡ್ ಲಸಿಕಾಕರಣದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕಾಗಿ ಎಲ್ಲ ಸಿಬ್ಬಂದಿಗೆ ಧನ್ಯವಾದ ಎಂದರು.

ಮಕ್ಕಳಿಗೆ ಚಿಕಿತ್ಸೆ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಆರೈಕೆಗಾಗಿ ವಿಶೇಷ ವಿಭಾಗ ಆರಂಭಿಸಲಾಗುತ್ತಿದೆ. ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸಲಾಗಿದೆ. ಹಲವು ದೇಶಗಳಲ್ಲಿ ಮೂರನೇ ಅಲೆ ಬಂದಿದೆ. ಮೈಮರೆತರೆ ಮೂರನೇ ಅಲೆ ನಾವೇ ಉಂಟುಮಾಡಿದಂತಾಗುತ್ತದೆ. ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಕನಿಷ್ಠ ಶೇ.70 ಜನಸಂಖ್ಯೆಗೆ ಲಸಿಕೆ ನೀಡುವವರೆಗೂ ಎಚ್ಚರ ಅಗತ್ಯ ಎಂದರು.

ಪ್ರಧಾನಿಗಳು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು, ನಮ್ಮ ಮುಖ್ಯಮಂತ್ರಿಗಳು ದಿನಕ್ಕೆ 5 ಲಕ್ಷ ಲಸಿಕೆಗೆ ಬೇಡಿಕೆ ಇಟ್ಟಿದ್ದಾರೆ. ಒಂದು ತಿಂಗಳಲ್ಲಿ ಒಂದೂವರೆ ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಈಗಾಗಲೇ 2.40 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಿದ್ದೇವೆ ಎಂದು ಸಿಎಂ ಮನವಿ ಮಾಡಿದ್ದಾರೆ. ಈ ತಿಂಗಳಲ್ಲೇ ಹೆಚ್ಚು ಲಸಿಕೆ ಸಿಗುವ ನಿರೀಕ್ಷೆ ಇದೆ ಎಂದರು.

ಕೋವಿಡ್ ವ್ಯಾಪಿಸದಂತೆ ತಡೆಯಲು ಜನರು ಹೆಚ್ಚು ಎಚ್ಚರಿಕೆಯಿಂದಿರಬೇಕೆಂದು ಪ್ರಧಾನಿ ಕಿವಿಮಾತು ಹೇಳಿದ್ದಾರೆ. ಲಸಿಕೆ ಹೆಚ್ಚು ನೀಡಲು ಹಾಗೂ ಕಂಟೈನ್ಮೆಂಟ್ ನಿಯಮ ಪಾಲಿಸಲು ಸೂಚಿಸಿದ್ದಾರೆ. ಈಗಾಗಲೇ ಮೂಲಸೌಕರ್ಯ ಹೆಚ್ಚಳಕ್ಕೆ 23 ಸಾವಿರ ಕೋಟಿ ರೂ. ಅನ್ನು ಕೇಂದ್ರ ನೀಡಿದೆ. ಇದನ್ನು ಗ್ರಾಮೀಣ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಬಳಸಲು ಸಲಹೆ ನೀಡಲಾಗಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *