ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯದ ಕೋವಿಡ್ ವಾರ್ ರೂಮ್‌ಗೆ ಗುರುವಾರ ಸಂಜೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ ಅಲ್ಲಿನ ಮುಸ್ಲಿಂ ಸಿಬ್ಬಂದಿಯ ಕ್ಷಮೆ ಕೋರಿದ್ದಾರೆ ಎಂಬ ವಿಚಾರ ಈಗ ಬಯಲಾಗಿದೆ.
ಇದನ್ನೂ ಓದಿ: ತೇಜಸ್ವಿ ಸೂರ್ಯ ಹೇಳುವಂತೆ ಬೆಂಗಳೂರಲ್ಲಿ ಹಾಸಿಗೆ ಲಭ್ಯತೆ ಶೂನ್ಯಕ್ಕೆ ಇಳಿದಿಲ್ಲ
‘ಈ ಪ್ರಕರಣವನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ತನಿಖೆ ನಡೆಸುವುದು ಮಾತ್ರ ನನ್ನ ಉದ್ದೇಶವಾಗಿತ್ತು. ಈ ವೇಳೆ ನನ್ನ ಮಾತು ಅಥವಾ ನಡೆಯಿಂದ ಯಾವುದೇ ಸಮುದಾಯಕ್ಕೆ ಇದರಿಂದ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ’ ಎಂದು ತೇಜಸ್ವಿ ಸೂರ್ಯ ಹೇಳಿದರು ಎಂದು ಹೆಸರು ಹೇಳಲಿ ಇಚ್ಚಿಸದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಕ್ಷಮೆಯಾಚನೆ ಸುದ್ದಿ ಅಲ್ಲಗೆಳೆದ ಸಂಸದ ತೇಜಸ್ವಿ ಸೂರ್ಯ : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ (ಮೇ 5) ಸಂಜೆ 7 ಗಂಟೆಗೆ ಬೆಂಗಳೂರು ದಕ್ಷಿಣ ಕೋವಿಡ್ ವಾರ್ ರೂಂಗೆ ಭೇಟಿ ನೀಡಿ, ಅಲ್ಲಿ ಕೆಲಸ ಮಾಡುತ್ತಿದ್ದ 200 ಜನರ ಕ್ಷಮೆಯಾಚಿಸಿದ್ದಾರೆ ಎಂಬ ಸುದ್ದಿಯನ್ನು ಸಂಸದ ತೇಜಸ್ವಿ ಸೂರ್ಯ ಅವರ ಅಧಿಕೃತ ಕಚೇರಿ ಅಲ್ಲಗೆಳೆದಿದೆ. ಕ್ಷಮಾಯಾಚನೆ ಖಚಿತದ ವಿಚಾರ ತಿಳಿಯಲು ಸಂಸದರ ಕಚೇರಿಯನ್ನು ಸಂಪರ್ಕಿಸಿದರೆ ಯಾರೂ ದೂರವಾಣಿ ಕರೆ ತೆಗೆಯಲಿಲ್ಲ, ಸಂಸದ ತೇಜಸ್ವಿ ಸೂರ್ಯ ಕೂಡ ದೂರವಾಣಿ ಕರೆಯನ್ನು ಸ್ವಿಕರಿಸಲಿಲ್ಲ.
ಆರೋಪ ಸಿಬ್ಬಂದಿಗಳ ರಜೆ : ಪ್ರಕರಣದ ನಂತರ, ವಾರ್ ರೂಮ್ ನ ಹಲವು ಸಿಬ್ಬಂದಿ ರಜೆ ತೆಗೆದುಕೊಂಡಿದ್ದಾರೆ. ಈ ತುರ್ತು ಸಂದರ್ಭದಲ್ಲಿ ರಜೆ ಹಾಕಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿಕೊಂಡವರ ವಿರುದ್ಧ ಮಾತ್ರ ನಾವು ಕ್ರಮ ಕೈಗೊಳ್ಳುತ್ತೇವೆ. ಉಳಿದವರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿ ಎಂದೂ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ.
ಕ್ಷಮೆ ಕೇಳುವಾಗ ನೇರಪ್ರಸಾರ ಇಲ್ಲ : ಮೂರು ಬಿಜೆಪಿ ನಾಯಕರ ಜೊತೆ ಮಂಗಳವಾರ ಮಾಡಿದ ದಾಳಿಯ ಸಮಯದಲ್ಲಿ ಸಂಸದ ತೇಜಸ್ವಿ ಸೂರ್ಯ ಅದರ ನೇರ ಪ್ರಸಾರವನ್ನು ಮಾಡಿಸಿದ್ದರು. ಆದರೆ, ಕ್ಷಮಾಪಣೆ ವೇಳೆ ಯಾವುದೇ ನೇರ ಪ್ರಸಾರ ಇರಲಿಲ್ಲ ಮತ್ತು ವಾರ್ ರೂಂನಲ್ಲಿದ್ದವರಿಗೆ ವಿಡಿಯೋಗಳನ್ನು ಚಿತ್ರೀಕರಿಸದಂತೆ ತಿಳಿಸಲಾಗಿತ್ತು ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರು ವಾರ್ ರೂಂ ಸದಸ್ಯರ ಪಟ್ಟಿಯನ್ನು ಎಲ್ಲಿಂದ ಪಡೆದರು, ಅಥವಾ ಅದನ್ನು ಓದುವ ಮೊದಲು ಅದರ ರುಜುವಾತುಗಳನ್ನು ಹೇಗೆ ಪರಿಶೀಲಿಸಿದರು ಎಂದು ತಿಳಿಸಲಿಲ್ಲ. ಈ ಹಿಂದಿನ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತರು ತಮಗೆ ಈ ಪಟ್ಟಿಯನ್ನು ನೀಡಿದ್ದಾರೆ ಎಂದು ತೇಜಸ್ವಿ ಸೂರ್ಯ ಮಾಧ್ಯಮಗಳಿಗೆ ತಿಳಿಸಿದ್ದರು.