ಬೆಂಗಳೂರು : ಕೊರೋನಾ 2ನೇ ಅಲೆ ಅಬ್ಬರಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್ಡೌನ್ ಹೇರಿದೆ. ಲಾಕ್ಡೌನ್ ಘೋಷಣೆ ಬೆನ್ನಲ್ಲೇ ಜನ ಊರುಗಳತ್ತ ಮುಖ ಮಾಡಿದ್ದಾರೆ. ನಿನ್ನೆಯಿಂದಲೆ ಜನ ಊರುಗಳತ್ತ ಬಸ್ ಗಳನ್ನು ಹತ್ತಿ ಹೋಗುತ್ತಿದ್ದ ದೃಶ್ಯಗಳು ಕೆಂಪೇಗೌಡ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಕಂಡು ಬಂತು.
ಮೆಜೆಸ್ಟಿಕ್, ಸ್ಯಾಟ್ಲೈಟ್ ಬಸ್ ನಿಲ್ದಾಣ, ಗೊರಗುಂಟೆ ಪಾಳ್ಯ, ಜಾಲಹಳ್ಳಿ ಕ್ರಾಸ್, 8 ನೇ ಮೈಲಿ ಬಳಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಇಂದು ರಾತ್ರಿಯಿಂದ ಲಾಕ್ಡೌನ್ ಜಾರಿಯಾಗುತ್ತಿದ್ದು, ಅಷ್ಟರಲ್ಲಿ ಊರು ಸೇರಲು ಜನ ತರಾತುರಿಯಲ್ಲಿ ಹೊರಟ್ಟಿದ್ದಾರೆ.
ಜನ ಸಿಕ್ಕ ಬಸ್ ಹಿಡಿದು ಊರು ತಲುಪುವ ಗಡಿಬಿಡಿಯಲ್ಲಿದ್ದು, ಸಮಯದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ಗಳು ವಸೂಲಿಗೆ ಇಳಿದಿದ್ದು ನಾಲ್ಕುಪಟ್ಟು ದರ ಹೆಚ್ಚಿಸಿವೆ.
ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಟಿಕೆಟ್ ದರ ಕೇಳಿ ಹೌಹಾರುತ್ತಿದ್ದಾರೆ. ಮನೆಯಿಂದ ಹೊರಟು ಬಂದ ಮೇಲೆ ಮತ್ತೆ ಹಿಂತಿರುಗಲಾರದೆ ಕೇಳಿದಷ್ಟು ಹಣ ಕೊಟ್ಟು ಊರುಗಳಿಗೆ ಪ್ರಯಾಣಿಸುತ್ತಿದ್ದಾರೆ. ಬೆಂಗಳೂರಿಂದ ದಕ್ಷಿಣ ಕನ್ನಡಕ್ಕೆ 800 ರೂ. ಇದ್ದ ಟಿಕೆಟ್ ದರ 2,500 ರೂ.ಗೆ ಏರಿಕೆಯಾಗಿದೆ. 1,000 ರೂ. ಕೊಟ್ಟು ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಜನ ಈಗ 2,500 ರೂ. ತೆರಬೇಕಾಗಿದೆ. ಇನ್ನು ಬೆಳಗಾವಿಗೆ ಹೊರಟ್ಟಿದ್ದ ಪ್ರಯಾಣಿಕರಂತು ಟಿಕೆಟ್ ದರ ಕೇಳಿ ಅಘಾತಕ್ಕೊಳಗಾಗಿದ್ದಾರೆ. ಸಾಮಾನ್ಯವಾಗಿ 1,000 ರೂ. ಇರುತ್ತಿದ್ದ ದರ ಈಗ ಬರೋಬ್ಬರಿ 5,000ಕ್ಕೆ ಏರಿ ಕೂತಿದೆ. ಹುಬ್ಬಳ್ಳಿ – ಧಾರವಾಡಕ್ಕೆ ಹೋಗುವವರು ಹಿಂದು 800 ರೂ ನೀಡುತ್ತಿದ್ದರು ಈಗ 2000 ದಿಂದ 6500 ನಿಗದಿ ಮಾಡಿದ್ದಾರೆ. ಬೀದರ್ ಕಲಬುರ್ಗಿ ಕಡೆ 1000 ರೂ ನಲ್ಲಿ ಪ್ರಯಾಣಿಸುತ್ತಿದ್ದ ಜನ 2000 ರೂ ನಿಂದ 3500 ವಸೂಲಿ ಮಾಡುತ್ತಿವೆ.
ಬೆಂಗಳೂರಿಂದ ಬೇರೆ ಜಿಲ್ಲೆಗಳಿಗೆ ಹೊರಟಿರುವ ಖಾಸಗಿ ಬಸ್ಗಳಲ್ಲಿ 4ರಿಂದ 5 ಪಟ್ಟು ಟಿಕೆಟ್ ದರ ಏರಿಸಲಾಗಿದೆ. ಲಾಕ್ಡೌನ್ ಭಯದಲ್ಲಿ ಊರು ಸೇರಬೇಕೆಂದಿದ್ದ ಜನ ದುಬಾರಿ ಟಿಕೆಟ್ ದರದಿಂದ ಹೈರಾಣಾಗಿದ್ದಾರೆ. ಇಂದು ಬೆಳಗ್ಗೆಯಲ್ಲಾ ಪ್ರಯಾಣಿಕರು ಭಾರೀ ಸಂಖ್ಯೆಯಲ್ಲಿ ಬೆಂಗಳೂರು ತೊರೆಯಲಿದ್ದು, ಟಿಕೆಟ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.
ಸಾರಿಗೆ ನೌಕರರು ಪ್ರತಿಭಟನೆ ನಡೆಸಿದಾಗ ಖಾಸಗಿ ಬಸ್ ಓಡಿಸಿದ್ದ ಸರಕಾರ ಈಗ ಯಾಕೆ ಖಾಸಗಿ ಬಸ್ ಗಳ ದರವನ್ನು ನಿಯಂತ್ರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.