25 ಜನ ಸಂಸದರು ಎಲ್ಲಿ ಅಡಗಿ ಕೂತಿದ್ದಾರೆ? ಪಿಎಂ ಮನೆ ಮುಂದೆ ಧರಣಿ ಕೂರಿಸಿ – ಸಿದ್ಧರಾಮಯ್ಯ

ಬೆಂಗಳೂರು : ಔಷಧಿ,‌ಆಮ್ಲಜನಕ, ವೆಂಟಿಲೇಟರ್ ಕೊಡಿ ಎಂದು‌ ಪ್ರಧಾನಿ ಅವರನ್ನು ಬೇಡುತ್ತಿರುವ ಮುಖ್ಯಮಂತ್ರಿ ಅವರನ್ನು ಕಂಡಾಗ‌ ಕನಿಕರ ಮೂಡುತ್ತಿದೆ. 25 ಬಿಜೆಪಿ ಸಂಸದರು ಎಲ್ಲಿ ಅಡಗಿ ಕೂತಿದ್ದಾರೆ? ಅವರನ್ನು ದೆಹಲಿಗೆ ಅಟ್ಟಿ ರಾಜ್ಯದ ನ್ಯಾಯಬದ್ಧ ಪಾಲಿಗಾಗಿ ಪ್ರಧಾನಿ ಮನೆ ಮುಂದೆ ಧರಣಿ ಕೂರಿಸಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯನವರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್​ಗಳ ಮೂಲಕ ಬಿಜೆಪಿ ವಿರುದ್ಧ ದಾಳಿ ನಡೆಸಿರುವ ಸಿದ್ಧರಾಮಯ್ಯ, ಕೊರೋನಾ ಸೋಂಕಿನಿಂದ ಜನರು ಆತಂಕಕ್ಕೀಡಾಗಿದ್ದು, ಲಸಿಕೆ‌ ಪಡೆಯುವುದನ್ನು ಪ್ರೊತ್ಸಾಹಿಸಬೇಕಾದ ಕೇಂದ್ರ ಬಿಜೆಪಿ ಸರ್ಕಾರ, ಲಸಿಕೆ ಬೆಲೆ ಏರಿಸಿ ಜನತೆ ಅದನ್ನು ಪಡೆಯದಂತೆ ಮಾಡಲು ಹೊರಟಿದೆ.
ನರೇಂದ್ರ ಮೋದಿ ಅವರೇ, ‘ಟೀಕಾ ಉತ್ಸವ್’ ನಂತಹ ಬಾಯಿ ಬಡಾಯಿಯನ್ನು ಬಿಟ್ಟಾಕಿ ಎಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಅನ್ನಭಾಗ್ಯ ಯೋಜನೆ ಎಂದರೆ ಉರ್ಕೊಳ್ಳುತ್ತಿದ್ದ ಮತ್ತು ಆ ಯೋಜನೆಗೆ ಕಲ್ಲು ಹಾಕಲು ಪ್ರಯತ್ನಿಸುತ್ತಿರುವ ರಾಜ್ಯ ಬಿಜೆಪಿ ನಾಯಕರು, ಈಗ ಪ್ರಧಾನಿಗಳು ಘೋಷಿಸಿರುವ ಎರಡು ತಿಂಗಳ ಕಾಲ ಐದು ಕಿಲೋ ಅಕ್ಕಿ ನೀಡುವ ಯೋಜನೆಯನ್ನು ಕೊಂಡಾಡುತ್ತಿರುವುದು ತಮಾಷೆಯಾಗಿದೆ.
ಕೊರೊನಾದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಜನರಿಗೆ ಪ್ರತಿ ತಿಂಗಳು ಉಚಿತವಾಗಿ ಹತ್ತು ಕಿಲೋ ಅಕ್ಕಿ ನೀಡಬೇಕೆಂದು ಪ್ರಾರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ.

ಪ್ರಧಾನಿಗಳು ಈಗಲಾದರೂ ಎಚ್ಚೆತ್ತುಕೊಳ್ಳಿ. ಕೊರೊನಾ‌ ಕಷ್ಟ ಕೊನೆಯಾಗುವ ವರೆಗಾದರೂ ಹತ್ತು ಕಿಲೋ ಅಕ್ಕಿ ನೀಡಿ ಪುಣ್ಯ ಕಟ್ಕೊಳ್ಳಿ. ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸಲು ಶತಪ್ರಯತ್ನ ಮಾಡುತ್ತಿರುವ ರಾಜ್ಯ ಸರ್ಕಾರ ಹಲವಾರು ಜಿಲ್ಲೆಗಳಲ್ಲಿ ತಿಂಗಳಿಗೆ ಐದು‌ ಕಿಲೋ ಅಕ್ಕಿ ಬದಲಿಗೆ ಎರಡು ಕಿಲೋ ಅಕ್ಕಿ ನೀಡುತ್ತಿದೆ. ಮುಖ್ಯಮಂತ್ರಿ ಅವರೇ, ಈ ಅನ್ಯಾಯವನ್ನು ತಕ್ಷಣ ಸರಿಪಡಿಸಿ. ಬಡವರ ಶಾಪಕ್ಕೆ ಈಡಾಗಬೇಡಿ.

ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡುವ ಉದ್ದೇಶದಿಂದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಅವೆಲ್ಲವನ್ನೂ ಬಡವರ ವಿರೋಧಿ ಬಿಜೆಪಿ ಸರ್ಕಾರ ನಿಲ್ಲಿಸಲು ಹೊರಟಿದೆ. ಅವುಗಳಿಗೆ ಅಡ್ಡಗಾಲು ಹಾಕಿದರೆ ಬಡವರ ಶಾಪ ತಟ್ಟದೆ ಇರದು ಎಂದು ಸಿದ್ಧರಾಮಯ್ಯ ಎಚ್ಚರಿಸಿದ್ದಾರೆ.

Donate Janashakthi Media

One thought on “25 ಜನ ಸಂಸದರು ಎಲ್ಲಿ ಅಡಗಿ ಕೂತಿದ್ದಾರೆ? ಪಿಎಂ ಮನೆ ಮುಂದೆ ಧರಣಿ ಕೂರಿಸಿ – ಸಿದ್ಧರಾಮಯ್ಯ

Leave a Reply

Your email address will not be published. Required fields are marked *