ಸಚಿವರ ವಿರುದ್ಧ ಭ್ರಷ್ಟಾಚಾರದ ದೂರು ಇದ್ದರೂ ಎಸಿಬಿ ನಿಷ್ಕ್ರಿಯ – ಸಿದ್ದರಾಮಯ್ಯ ಆರೋಪ

ಬೆಂಗಳೂರು:  ಹಲವಾರು ಸಚಿವರುಗಳ ವಿರದ್ಧ ಭ್ರಷ್ಟಚಾರದ ದೂರುಗಳಿರುವುದರಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಭ್ರಷ್ಟಚಾರ ನಿಗ್ರಹ ದಳವನ್ನು ನಿಷ್ಕ್ರಿಯ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರ ಎಸಿಬಿ ರಚನೆ ಮಾಡುವಾಗಲೇ ಬಿಜೆಪಿಯವರು ವಿರೋಧಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರದ ಹಲವಾರು ಸಚಿವರುಗಳ ವಿರುದ್ಧ ಭ್ರಷ್ಟಾಚಾರದ ದೂರುಗಳನ್ನು ನೀಡಿದರೂ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿಲ್ಲ. ಎ.ಸಿ.ಬಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಷ್ಕ್ರಿಯವಾಗಿದೆ. ಎಸಿಬಿಯನ್ನು ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗಲೇ ವಿರೋಧಿಸಿದ್ದರು. ಈಗ ಅದರ ಅಸ್ತಿತ್ವವನ್ನೇ ಇಲ್ಲವಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ಎಸಿಬಿ ಗಮನಾರ್ಹವಾದ ಯಾವ ಚಟುವಟಿಕೆಗಳನ್ನು ನಡೆಸಿರುವುದು ಕಂಡು ಬಂದಿಲ್ಲ. ಅಕ್ರಮ ಆಸ್ತಿ ಸಂಪಾದನೆ ಮಾಡಿದರವ ಮೇಲೆ ಈ ಮೊದಲು ಕಾಲಕಾಲಕ್ಕೆ ದಾಳಿಗಳು ನಡೆಯುತ್ತಿದ್ದವು. ಕೊರೊನಾ ಕಾಲದಲ್ಲಿ ಆ ರೀತಿಯ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಜೊತೆಗೆ ಎಸಿಬಿಯಲ್ಲಿ ಬಿಬಿಎಂಪಿ ಹಾಗೂ ಬಿಡಿಎ ಕೆಲ ಹಗರಣಗಳು, ಹಲವಾರು ಸಚಿವರ ಇಲಾಖೆಗಳಿಗೆ ಸಂಬಂಧ ಪಟ್ಟ ದೂರುಗಳು ದಾಖಲಾಗಿವೆ. ಅವುಗಳ ವಿಚಾರಣೆಯಲ್ಲೂ ಚುರುಕು ಕಾಣುತ್ತಿಲ್ಲ. ನಿಟ್ಟಿನಲ್ಲಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಈ ಮೊದಲು ರಾಜ್ಯದಲ್ಲಿ ಭ್ರಷ್ಟಚಾರದ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಸಂಸ್ಥೆ ಕೆಲಸ ಮಾಡುತ್ತಿತ್ತು. ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ಅದರ ಮುಖ್ಯಸ್ಥರಾಗಿರುತ್ತಿದ್ದರು. ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರ ಅಧಿಕಾರವಾಧಿಯಲ್ಲಿ ಪ್ರಚಲಿತಕ್ಕೆ ಬಂದ ಲೋಕಾಯುಕ್ತ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿತ್ತು. ಸಂತೋಷ್ ಹೆಗಡೆ ಲೋಕಾಯುಕ್ತರಾಗಿದ್ದಾಗ ದಾಖಲಾರ್ಹ ಚಟುವಟಿಕೆಗಳು ನಡೆದವು.

ಸಂತೋಷ್ ಹೆಗಡೆ ಅವರು ಗಣಿ ಹಗರಣ ಕುರಿತು ತನಿಖೆ ಮಾಡಿ ವರದಿ ನೀಡಿದ್ದರಿಂದ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಲೋಕಾಯುಕ್ತರಾಗಿದ್ದ ಭಾಷ್ಕರ್ ರಾವ್ ಕಾಲದಲ್ಲಿ ಲೋಕಾಯುಕ್ತದಲ್ಲೇ ಭ್ರಷ್ಟಚಾರ ನಡೆದ ಆರೋಪಗಳು ಕೇಳಿ ಬಂದಿದ್ದವು.

ಆ ಸಂದರ್ಭದಲ್ಲಿ ನಡೆದ ಚರ್ಚೆಗಳ ಭಾಗವಾಗಿ ಸಿದ್ದರಾಮಯ್ಯ ಅವರ ಸರ್ಕಾರ ಲೋಕಾಯುಕ್ತದಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ಹಿಂಪಡೆದು ಹೊಸದಾಗಿ ಭ್ರಷ್ಟಚಾರ ನಿಗ್ರಹ ದಳವನ್ನು ಸ್ಥಾಪನೆ ಮಾಡಿತ್ತು. ಅಲ್ಲಿಂದ ಭ್ರಷ್ಟರ ವಿರುದ್ಧ ಸಮರ ಸಾರುವ ಅಧಿಕೃತ ಸಂಸ್ಥೆಯಾಗಿ ಎಸಿಬಿ ಗುರುತಿಸಿಕೊಂಡಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹ್ಯೂಬ್ಲೇಟ್ ವಾಚ್ ಹಗರಣವನ್ನು ಎಸಿಬಿ ತನಿಖೆ ಮಾಡಿತ್ತು.

ಎಸಿಬಿ ರಚನೆಯನ್ನು ವಿರೋಧ ಮಾಡಿದ್ದ ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿ, ಬಲ ಪಡಿಸುವುದಾಗಿ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿತ್ತು. ಈಗ ಅಧಿಕಾರ ಬಂದು ಒಂದುವರೆ ವರ್ಷ ಕಳೆದರೂ ಬಿಜೆಪಿ ಸರ್ಕಾರ ಲೋಕಾಯುಕ್ತದ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಎಸಿಬಿ ನಿಷ್ಟ್ಕೀಯತೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *