ಢಾಕಾ: ದಕ್ಷಿಣ ಬಾಂಗ್ಲಾದೇಶದಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಡಗು ಬೆಂಕಿಗಾಹುತಿಯಾಗಿದ್ದು ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ಹಡಗಿನಲ್ಲಿ ಸಂಭವಿಸಿದ ಅಗ್ನಿ ಅವಘಡವಾಗಿದ್ದು, ಘಟನೆಯಲ್ಲಿ ಸುಮಾರು 200 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ 250 ಕಿಲೋಮೀಟರ್ ದಕ್ಷಿಣದ ಗ್ರಾಮೀಣ ಪಟ್ಟಣವಾದ ಜಕಾಕತಿ ನದಿಯಲ್ಲಿ ಘಟನೆ ನಡೆದಿದ್ದು, ಈವರೆಗೆ 37 ಸುಟ್ಟ ದೇಹಗಳನ್ನು ಅಧಿಕಾರಿಗಳು ಹೊರತೆಗೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ನಾವು 37 ಮೃತದೇಹಗಳನ್ನು ಹೊರತೆಗೆದಿದ್ದೇವೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ಹೆಚ್ಚಿನವರು ಬೆಂಕಿಯಿಂದ ಸಾವನ್ನಪ್ಪಿದರು ಮತ್ತು ಕೆಲವರು ನದಿಗೆ ಹಾರಿದ ನಂತರ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಯಿನುಲ್ ಇಸ್ಲಾಂ ತಿಳಿಸಿದರು.
ಸಮುದ್ರದ ಮಧ್ಯದಲ್ಲಿ ಇಂದು (ಡಿಸೆಂಬರ್ 24) ನಸುಕಿನ ಜಾವ 3 ಗಂಟೆ ಸಮಯದಲ್ಲಿ ಬಾಂಗ್ಲಾದ ಬಾರ್ಗಾನ ಮೂಲದ ಎಂವಿ ಅಭಿಜಾನ್-10 ಹೆಸರಿನ ಮೂರು ಅಂತಸ್ತಿನ ಬೋಟ್ಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರ ಹಡಗಿನ ಇಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಳಿಕ ಬೆಂಕಿಯ ಜ್ವಾಲೆ ಹೆಚ್ಚಾಗಿ ಹಲವು ಮಂದಿ ಸಜೀವ ದಹನಗೊಂಡಿದ್ದಾರೆ.
ಗಾಯಗೊಂಡಿರುವವರನ್ನು ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಹಡಗಿನಲ್ಲಿ ಕಾರ್ಯಾಚರಣೆ ಮುಂದುವರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿ 310 ಮಂದಿ ಪ್ರಯಾಣಿಸಬಹುದಾಗಿದ್ದು, ಆದರೆ 500 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅವರು ರಾಜಧಾನಿಯಿಂದ ವಾಪಸಾಗುತ್ತಿದ್ದರು. 4 ರಿಂದ 5 ಗಂಟೆಗಳ ಕಾಲ ಹಡಗಿನಲ್ಲಿ ಬೆಂಕಿಯ ಕೆನ್ನಾಲಿಗೆ ಇತ್ತು.