ಬೆಂಗಳೂರ: ಅಶ್ಲೀಲ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಪರವಾಗಿ ವಕೀಲ ಜಗದೀಶ್ ದೂರು ನೀಡಿದ ಬೆನ್ನಲ್ಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ಸಂಪರ್ಕ ನಡೆಸಿ, ವಿಡಿಯೋ ಕರೆ ಮಾಡಿ ಅಶ್ಲೀಲ ಮಾತುಗಳನ್ನಾಡಿ ನಗ್ನವಾಗಿ ಮಾತನಾಡಲು ಪುಸಲಾಯಿಸಿದ್ದಾರೆ. ಅಲ್ಲದೇ, ಕೆಲಸ ಕೊಡಿಸದೆ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಿಡಿ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಸಿಡಿಯಲ್ಲಿದ್ದ ಯುವತಿಯ ಲಿಖಿತ ದೂರು ಆಧರಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ. ಐಪಿಸಿ ಸೆಕ್ಷನ್ 376 ಸಿ (ಅತ್ಯಾಚಾರ), 354 ಎ(ಕೆಲಸ ನೀಡುವುದಾಗಿ ನಂಬಿಸಿ ದೈಹಿಕ ಸಂಪರ್ಕ) 506 (ಜೀವ ಬೆದರಿಕೆ) 417(ವಂಚನೆ) ಅಡಿ ಅಲ್ಲದೇ ವಿಡಿಯೋ ಹೊರ ಹಾಕಿದ್ದಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸಿಡಿ ಪ್ರಕರಣ : ಎಸ್ಐಟಿ ಯಾರ ಪರ? ವಿಡಿಯೊ ಹೇಳಿಕೆ ಮೂಲಕ ಸಂತ್ರಸ್ತ ಯುವತಿಯ ಪ್ರಶ್ನೆ
ಸಿಡಿ ಪ್ರಕರಣದ ಸಂತ್ರಸ್ತೆ ಇಂದು ತಮ್ಮ ವಕೀಲರ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾಳೆ. ಈ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಇದೀಗ ಯುವತಿ ಪರವಾಗಿ ದೂರು ನೀಡಿರುವ ವಕೀಲ ಜಗದೀಶ್ ಅವರು ಇಂದು ಡಿಜಿ-ಐಜಿಪಿ ಪ್ರವೀಣ್ ಸೂದ್ರನ್ನ ಭೇಟಿಯಾಗಿದ್ದರು. ಭೇಟಿ ವೇಳೆ ಯುವತಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಸಿಡಿ ಪ್ರಕರಣ: ಸಿಡಿ ಗ್ಯಾಂಗ್ ಗೆ ಹಣ ಸಂದಾಯ ಮಾಡಿದ್ದ ರಮೇಶ್ ಜಾರಕಿಹೊಳಿ
ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ವಕೀಲ ಜಗದೀಶ್.. ದೂರಿನ ಆಧಾರದ ಮೇಲೆ ಎಫ್‌ಐಆರ್ ಆಗಿದೆ. ಯುವತಿಗೆ ರಕ್ಷಣೆ ಕೊಡಿ ಎಂದು ಕೇಳಿದ್ದೇವೆ. ಸದ್ಯ ಸೆಕ್ಷನ್ಸ್ ರಿವೀಲ್ ಮಾಡಲು ಆಗಲ್ಲ. ನಾನು ಏನೂ ಫರ್ದರ್ ರಿವೀಲ್ ಮಾಡೋಕೆ ಆಗಲ್ಲ. ಯುವತಿಯ ಸೆಕ್ಯೂರಿಟಿ ವಿಚಾರಕ್ಕೆ ಸಂಬಂಧಿಸಿ ಡಿಜಿ & ಐಜಿಪಿಗೆ ಮನವಿ ಮಾಡ್ತೇನೆ. ಡಿಜಿ & ಐಜಿಪಿ ಇದಕ್ಕೆ ಅನುಮತಿ ಕೊಟ್ಟರೆ, ಯುವತಿ ನೇರವಾಗಿ ಬಂದು ಸ್ಟೇಟ್ಮೆಂಟ್ ನೀಡುತ್ತಾಳೆ ಎಂದರು.
ಯುವತಿಗೆ ರಕ್ಷಣೆಗಾಗಿ ನಾವು ಡಿಜಿಗೆ ಮನವಿ ಮಾಡಿದ್ದೇವೆ. ಆಕೆಯ ತಂದೆ-ತಾಯಿಗೆ ರಕ್ಷಣೆ ನೀಡುವಂತೆಯೂ ಮನವಿ ಮಾಡಿದ್ದೇವೆ. ಯುವತಿಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ರಕ್ಷಣೆ ನೀಡ್ತಾರೆ. ಯುವತಿ ಎಲ್ಲಿದ್ದಾಳೆ ಅಂತ ರಿವೀಲ್ ಮಾಡೋಕೆ ಆಗಿಲ್ಲ. ಕಿಡ್ನ್ಯಾಪ್ ಆಗಿದ್ದಾಳೆ ಅಂತ ಪೋಷಕರು ಹೇಳಿದ್ದಾರೆ. ಅವಳು ಇಷ್ಡು ದಿನ ಪೋಷಕರ ಜೊತೆ ಕಾಂಟಾಕ್ಟ್ನಲ್ಲಿ ಇರಲಿಲ್ಲ. ಹೀಗಾಗಿ ಅವರು ಕಿಡ್ನ್ಯಾಪ್ ಭಾವನೆಯಲ್ಲಿದ್ದಾರೆ ಎಂದು ಜಗದೀಶ್ ತಿಳಿಸಿದ್ದಾರೆ.