ನಮ್ಮ ಬಡಿದಾಟಗಳಲ್ಲಿ ಹೆಂಡತಿ, ಮಕ್ಕಳನ್ನು ತರುವುದು ನಮ್ಮ ಕುಟುಂಬಗಳಿಗೆ ನಾವೇ ಮಾಡಿಕೊಂಡ ಅಪಮಾನ – ಶಾಸಕ ಸಾರಾ ಮಹೇಶ್

ಬೆಂಗಳೂರು: ಸಿಡಿ ವಿಚಾರವಾಗಿ ರಾಜಕೀಯ ನಾಯಕರ ನಡುವೆ ನಡೆಯುತ್ತಿರುವ ವಾಗ್ಯುದ್ಧಕ್ಕೆ ಜೆಡಿಎಸ್‌ ಮುಖಂಡರ ಸಾ.ರಾ. ಮಹೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಟ್ವೀಟ್‌ ಮಾಡಿರುವ ಅವರು, ‘ನಾವು ರಾಜಕೀಯದಲ್ಲಿರುವವರು. ಬಡಿದಾಡುತ್ತೇವೆ, ಬೈದಾಡಿಕೊಳ್ಳುತ್ತೇವೆ. ಆದರೆ, ನಮ್ಮ ಬಡಿದಾಟಗಳಲ್ಲಿ ಹೆಂಡತಿ, ಮಕ್ಕಳನ್ನು ತರುವುದು ನಮ್ಮ ಕುಟುಂಬಗಳಿಗೆ ನಾವೇ ಮಾಡಿಕೊಂಡ ಅಪಮಾನ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಕುಟುಂಬಗಳನ್ನು ಅಡ್ಡತರುವುದು ವಂಚನೆಯೇ ಸರಿ. ನಮ್ಮನ್ನೇ ನಂಬಿದ ಕುಟುಂಬಸ್ಥರಿಗೆ ಎಂದಿಗೂ ಅಪಮಾನವಾಗಬಾರದು‌’ ಎಂದು ತಿಳಿಸಿದ್ದಾರೆ.

‘ಸಮಾಜವನ್ನೇ ಶಂಕೆಗೆ ದೂಡಿದವರು ತಾವು ಸೃಷ್ಟಿ ಮಾಡಿದ ಅನಾಹುತದ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೇಳಿಕೆ ತಮ್ಮದೇ ಕುಟುಂಬದಲ್ಲಿ ಸೃಷ್ಟಿ ಮಾಡಿರಬಹುದಾದ ಅಪನಂಬಿಕೆಯನ್ನು ಒಮ್ಮೆ ಗಮನಿಸಬೇಕು. ಸಮಾಜದ ಡೊಂಕು ಪ್ರಶ್ನಿಸಿದವರು ತಮ್ಮ ಕುಟುಂಬದ ದೃಷ್ಟಿಯಲ್ಲಿ ದೊಡ್ಡವರಾದರೋ? ಸಣ್ಣವರಾದರೋ? ನಂಬಿಕೆ ಉಳಿಸಿಕೊಂಡರೋ, ಕಳೆದುಕೊಂಡರೋ?’ ಎಂದು ಸಾ.ರಾ.ಮಹೇಶ್‌ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಬುಧವಾರ ಮಾತನಾಡಿದ್ದ ಸಚಿವ ಸುಧಾಕರ್, ‘ಯಾರ್‍ಯಾರು ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದ್ದಾರೆ ಎಂಬುದು ಹೊರಬರಲಿ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಶ್ರೀರಾಮಚಂದ್ರರೆಂದು ಹೇಳಿಕೊಳ್ಳುತ್ತಿದ್ದಾರಲ್ಲ.ಅವರಿಗೆ ಸವಾಲು ಹಾಕುತ್ತೇನೆ. 224 ಶಾಸಕರು ತನಿಖೆ ಎದುರಿಸಲಿ, ಯಾರ್‍ಯಾರು ವಿವಾಹೇತರ ಮತ್ತು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ಜನರಿಗೆ ಗೊತ್ತಾಗಲಿ. ಯಾರೆಲ್ಲ ಶ್ರೀರಾಮಚಂದ್ರರು.. ಮರ್ಯಾದಾ ಪುರುಷರು ಎಂಬುದು ಗೊತ್ತಾಗಿಹೋಗಲಿ’ ಎಂದು ಅವರು ಹೇಳಿದ್ದರು.

ಸುಧಾಕರ್ ಅವರ ಧಾಟಿಯಲ್ಲೇ ಮಾತನಾಡಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್, ‘ಯಾರೂ ಶ್ರೀರಾಮಚಂದ್ರ, ಸೀತೆಮಾತೆಯರಲ್ಲ. ಒಂದು ಬೆರಳು ಬೇರೆಯವರನ್ನು ತೋರಿದರೆ, 4 ಬೆರಳು ಅವರ ಕಡೆಯೇ ತೋರಿಸುತ್ತದೆ. ಎಲ್ಲರೂ ಅವರವರ ಆತ್ಮಮುಟ್ಟಿ ನೋಡಿಕೊಳ್ಳಲಿ’ ಎಂದಿದ್ದರು.

Donate Janashakthi Media

Leave a Reply

Your email address will not be published. Required fields are marked *