ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮೂವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿರುವ ಗೋವಿಂದಪುರ ಠಾಣೆ ಪೊಲೀಸರು, ಬಂಧಿತರಿಂದ 35 ಕೋಟಿ ರೂ. ಮೌಲ್ಯದ ಮೆಥಾ ಕ್ವಾಲೋನ್, ಕೊಕೈನ್, ಎಂಡಿಎಂಎ, ಟ್ರೊಮೊಡೋಲ್ ಮಾದಕಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಬೈದಂದರ್ ರಂಜಿತ್ ಬಾನ್ ಗುಪ್ತಾ (24), ತಮಿಳುನಾಡಿನ ಕಾಂಚಿಪುರಂನ ಅಂಡ್ರೆಸ್ ಪಿಲಿಪೋ, (59), ತಮಿಳುನಾಡಿನ ಗ್ರಾಂಟ್ ಐಲ್ಯಾಂಡ್‌ನ ರಾಜೇಶ್ (35) ಅಂತಾರಾಜ್ಯ ಬಂಧಿತ ಡ್ರಗ್ಸ್ ಫೆಡ್ಲರ್‌ಗಳಾದರೆ, ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಸ್ಸಾದ ಸಮರಕರ (22), ರಮೇಶ್ ಕೆಮುಂದಿ (25), ಮಂಗಲ್‌ಹಿಸಾ (20) ಬಂಧಿತರಾಗಿದ್ದಾರೆ.
ಬಂಧಿತರಿಂದ 70 ಕೆಜಿ ಮೆಥಕ್ವಾಲೋನ್ ಡ್ರಗ್, 6.5 ಕೆಜಿ ಎಮ್ಡಿಎಮ್ 75 ಗ್ರಾಂ ಕೊಕೇನ್, 300 ಗ್ರಾಂ ಟ್ರೊಮೊಡೊಲ್ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಮೆಥಕ್ವಾಲೋನ್ ಡ್ರಗ್ ಒಂದು ಗ್ರಾಂಗೆ 5 ಸಾವಿರ ರೂಪಾಯಿ. 2016ರ ನಂತರ ಇದೇ ಮೊದಲ ಬಾರಿಗೆ ಈ ಡ್ರಗ್ ಪತ್ತೆಯಾಗಿದೆ.
ಆರೋಪಿಗಳು ನಾಗವಾರದ ಹಂದಿಜೋಗಿ ರುದ್ರಭೂಮಿ ಬಳಿಯ ಚಿಕ್ಕ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು ಅದರಲ್ಲಿ 290 ಕೆಜಿ ಗಾಂಜಾವನ್ನು ಮೂಟೆಗಳಲ್ಲಿ ಶೇಖರಿಸಿಟ್ಟುಕೊಂಡಿದ್ದರು. ಆರೋಪಿಗಳು ಒಡಿಸ್ಸಾದಿಂದ ರೈಲಿನಲ್ಲಿ ಗಾಂಜಾವನ್ನು ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ನಗರದಲ್ಲಿ ಶೇಖರಿಸಿ ಚಿಕ್ಕ ಪ್ಯಾಕೇಟ್‌ಗಳಾಗಿ ಕಟ್ಟಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಎಚ್‍ಬಿಆರ್ ಲೇಔಟ್, 5ನೇ ಹಂತ, 1ನೇ ಬ್ಲಾಕ್, ಅರಣ್ಯ ವಿಭಾಗ ಕಚೇರಿ ಹಿಂಭಾಗದಲ್ಲಿರುವ ವಾಟರ್ ಟ್ಯಾಂಗ್ ಬಳಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ ನಂತರ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಭೀಮಾಶಂಕರ್ ಎಸ್.ಗುಳೇದ ಮಾರ್ಗದರ್ಶನದಲ್ಲಿ ಕೆಜಿಹಳ್ಳಿ ಉಪವಿಭಾಗದ ಎಸಿಪಿ ಜಗದೀಶ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಪ್ರಕಾಶ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಹಾಗೂ ತನ್ನದೇ ಆದ ಗಿರಾಕಿಗಳಿಗೆ ಮಾದಕವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಎನ್‍ಡಿಪಿಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
1950ರಿಂದ ಮಲೇರಿಯಾಗೆ ಔಷಧವಾಗಿ ಮೆಥಕ್ವಾಲೋನ್ ಡ್ರಗ್ ಅನ್ನು ಬಳಸಲಾಗುತ್ತಿತ್ತು. ಮಾದಕ ಲೋಕದ ‘ಐಸ್’ ಎಂದೇ ಖ್ಯಾತಿ ಹೊಂದಿದೆ.
ಅಧಿಕಾರಿ ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲಪಂಥ್ ಮತ್ತು ಅಪರ ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.