ಬರ್ಮಿಂಗ್‌ಹ್ಯಾಮ್ : ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಪುರುಷರ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಪುರುಷರ 67 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ ಮೊದಲ ಪ್ರಯತ್ನದಲ್ಲೇ 136 ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತಕ್ಕೆ ಎರಡನೇ ಚಿನ್ನ ಗೆದ್ದುಕೊಟ್ಟರು.
ಎರಡನೇ ಪ್ರಯತ್ನದಲ್ಲಿ 140 ಕೆಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು. ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 160 ಕೆಜಿ ಲಿಫ್ಟ್‌ನೊಂದಿಗೆ ಒಟ್ಟು 300 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮೊದಲ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಎರಡು ಚಿನ್ನ, ಎರಡು ಬೆಳ್ಳಿ, ಒಂದು ಕಂಚು
ಈ ಮೊದಲು ಮೀರಾಬಾಯಿ ಚಾನು ಶನಿವಾರ ಭಾರತಕ್ಕೆ ಮೊದಲ ಚಿನ್ನವನ್ನು ಗೆದ್ದುಕೊಟ್ಟ ನಂತರ ಲಾಲ್ರಿನ್ನುಂಗ ಭಾರತಕ್ಕೆ ಎರಡನೇ ಚಿನ್ನದ ಪದಕ ತಂದರು ಮತ್ತು ಒಟ್ಟಾರೆಯಾಗಿ ಈವರೆಗೆ ಐದು ಪದಕಗಳನ್ನು ಗೆದ್ದಂತಾಗಿದೆ.
ಇದಕ್ಕೂ ಮುನ್ನ ವೈಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ 55 ಕೆಜಿ ವಿಭಾಗದಲ್ಲಿ ಶನಿವಾರ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಭಾರತದ ಮಹಿಳಾ ವೇಟ್‌ಲಿಫ್ಟರ್ ಬಿಂದ್ಯಾ ಒಟ್ಟಾರೆ 202 ಕೆಜಿ ಎತ್ತುವಲ್ಲಿ ಸಫಲರಾಗಿದ್ದು ಬೆಳ್ಳಿ ಪದಕವನ್ನ ಗೆದ್ದು ಬೀಗಿದ್ದಾರೆ. ಈ ಮೂಲಕ ಭಾರತಕ್ಕೆ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದು ಬೀಗಿದೆ. ಎಲ್ಲಾ ಪದಕಗಳು ವೇಟ್‌ಲಿಫ್ಟಿಂಗ್‌ನಲ್ಲಿ ವಿಭಾಗದಿಂದ ಬಂದಿರುವುದು ವಿಶೇಷ.