ಹೈದರಾಬಾದ್ : ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಒಂದು ವೇಳೆ ಜೀವಂತವಾಗಿ ಇದ್ದಿದ್ದರೆ ಅವರನ್ನು ಕೊಲ್ಲುತ್ತಿದ್ದೆ ಎಂದು ಅವಹೇಳನಕಾರಿ ಭಾಷೆ ಬಳಸಿ ಪ್ರಚೋದನಕಾರಿ ಭಾಷಣ ಮಾಡಿದ ತೆಲಂಗಾಣದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಗಾಂಧೀಜಿಯನ್ನು ಗೂಡ್ಸೆ ಹೇಗೆ ಕೊಂದ ಹಾಗೆ ನಾನು ಅಂಬೇಡ್ಕರ್ ಅವರನ್ನು ಕೊಲ್ಲುತ್ತಿದ್ದೆ ಎಂದು ಹಮಾರಾ ಪ್ರಸಾದ್ ಎಂಬ ವ್ಯಕ್ತಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟದ್ದ. ಇದಕ್ಕೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದರು ಹಾಗೂ ಆತನ ಬಂಧನಕ್ಕೆ ಒತ್ತಾಯಿಸಿದ್ದರು.
ವಿಡಿಯೋದಲ್ಲಿ ಏನಿದೆ? : ಅಂಬೇಡ್ಕರ್ ಅವರು ಬರೆದಿರುವ ‘ಹಿಂದೂಯಿಸಂನ ಒಗಟುಗಳು: ಜನಸಾಮಾನ್ಯರನ್ನು ಪ್ರಬುದ್ಧಗೊಳಿಸಲು ಒಂದು ನಿರೂಪಣೆ’ ಎಂಬ ಪುಸ್ತಕದ ಬಗ್ಗೆ ಆಕ್ಷೇಪ ಎತ್ತಿರುವ ವೀಡಿಯೊದಲ್ಲಿ ಹಮಾರಾ ಪ್ರಸಾದ್, ‘ಈ ಮನುಷ್ಯ (ಅಂಬೇಡ್ಕರ್) ಸ್ಪಷ್ಟವಾಗಿ 12 ಡಿಗ್ರಿ (ಮಾಸ್ಟರ್ಸ್) ಹೊಂದಿರುವ ಬುದ್ಧಿಜೀವಿ. ರಾಷ್ಟ್ರನಾಯಕನಾದವನು ದೇಶದ ಎಲ್ಲ ಜನರನ್ನು ಸಮಾನವಾಗಿ ಕಾಣಬೇಕು. ಅವನು ಕಷ್ಟ ಅನುಭವಿಸಿದರೂ ಇತರರ ಮೇಲೆ ತನ್ನ ದ್ವೇಷವನ್ನು ತೋರಿಸಬಾರದು. ಆದರೆ, ಅಂಬೇಡ್ಕರ್ ಅವರು ಇಂತಹ ‘ಕಸ’ ಬರೆಯುವ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅಂಬೇಡ್ಕರ್ ಬದುಕಿದ್ದಾಗ ನಾನು ಹುಟ್ಟಿದ್ದು, ಈ ಪುಸ್ತಕ ನನ್ನ ಕಣ್ಣಿಗೆ ಬಿದ್ದಿದ್ದರೆ, ಗೋಡ್ಸೆ ಗಾಂಧಿಗೆ ಹೇಗೆ ಗುಂಡು ಹಾರಿಸಿದನೋ ಹಾಗೆ ನಾನು ಅಂಬೇಡ್ಕರ್‌ಗೆ ಗುಂಡು ಹಾರಿಸುತ್ತಿದ್ದೆ.’ ಎಂದು ಹೇಳಿದ್ದಾನೆ.
ಈತನ ವಿರುದ್ಧ ದಲಿತ ಕಾರ್ಯಕರ್ತ ಕಾರ್ತಿಕ್ ನವಯನ್ ಅವರು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ಆನ್‌ಲೈನ್ ದೂರು ದಾಖಲಿಸಿದ್ದಾರೆ. “ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನಿಂದಿಸುವ ಮತ್ತು ಪರಿಶಿಷ್ಟ ಜಾತಿಯ ನಾಗರಿಕರ ಭಾವನೆಗಳನ್ನು ನೋಯಿಸುವ ವೀಡಿಯೊಗಳನ್ನು ರಚಿಸಿ ಹಂಚಿಕೆ ಮಾಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಹುಜನ ಸಮಾಜವಾದಿ ಪಕ್ಷದ ತೆಲಂಗಾಣ ಮುಖ್ಯಸ್ಥ ಆರ್.ಎಸ್.ಪ್ರವೀಣ್ ಕುಮಾರ್ ಹೈದರಾಬಾದ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಬಳಿಕ ಐಪಿಸಿ ಸೆಕ್ಷನ್ 153 A and 505 (2) ಅಡಿಯಲ್ಲಿ ಹಮಾರಾ ಪ್ರಸಾದ್ ಎಬ ವ್ಯಕ್ತಿಯನ್ನು ಬಂಧಿಸಿದ್ದಾರೆ.