ವೃತ್ತಿ ಧರ್ಮ ಕಳೆದುಕೊಂಡು ಬೆತ್ತಲಾಗಿರುವ ಮಾಧ್ಯಮಗಳನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ

ಭಾರತದ ಮಾಧ್ಯಮ ವಲಯ,  ವಿಶೇಷವಾಗಿ ಬಹುತೇಕ ವಿದ್ಯುನ್ಮಾನ ಸುದ್ದಿಮನೆಗಳು ಸಂಪೂರ್ಣ ಬೆತ್ತಲಾಗಿಬಿಟ್ಟಿವೆ. ಕನ್ನಡದ ಸುದ್ದಿಮನೆಗಳ ನಿರ್ಲಜ್ಜ ವರದಿಗಾರಿಕೆ ಮತ್ತು ಪಕ್ಷಪಾತಿ ಧೋರಣೆ ಸಾರ್ವಜನಿಕವಾಗಿಯೇ ಬಯಲಾಗಿದೆ. ಬೆಂಗಳೂರಿನಲ್ಲಿ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಸುವರ್ಣ ವಾಹಿನಿಯ ವರದಿಗಾರ್ತಿ ನಡೆಸಿದ ಪ್ರಹಸನ ಸುದ್ದಿಮನೆಗಳ ನಿರ್ಲಜ್ಜತೆಗೆ ಸಾಕ್ಷಿಯಾಗಿದೆ. ಕಾರ್ಪೋರೇಟ್ ಉದ್ಯಮಿಗಳ ಮತ್ತು ರಾಜಕೀಯ ನಾಯಕರ ಒಡೆತನದಲ್ಲಿರುವ ಸುದ್ದಿವಾಹಿನಿಗಳಿಂದ ಹೆಚ್ಚಿನ ಸೌಜನ್ಯ, ಸಭ್ಯತೆ , ಸಂವೇದನೆ ಮತ್ತು ಪತ್ರಿಕಾ ವೃತ್ತಿಧರ್ಮವನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ.  ಸೂಕ್ಷ್ಮ ಸಂವೇದನೆ, ಮಾನವ ಸೂಕ್ಷ್ಮತೆ, ವೃತ್ತಿ ಧರ್ಮ, ಸಂವಿಧಾನ ನಿಷ್ಠೆ, ಪ್ರಜಾತಂತ್ರ ಮೌಲ್ಯ ಇವೆಲ್ಲವನ್ನೂ ಕಳೆದುಕೊಂಡು ಬೆತ್ತಲಾಗಿರುವ ಕನ್ನಡದ ಸುದ್ದಿಮನೆಗಳು ಪ್ರಜ್ಞಾವಂತ ನಾಗರಿಕ  ಸಮಾಜಕ್ಕೆ ಅನಗತ್ಯ ಹೊರೆಯಂತೆ ಕಾಣುತ್ತಿವೆ. ಸುಳ್ಳುಗಳನ್ನೇ ಸತ್ಯ ಎಂದು ಬಿಂಬಿಸುವ ಮೂಲಕ ತಮ್ಮ ಸ್ವಾಮಿನಿಷ್ಠೆಗೆ ಬದ್ಧರಾಗಿ, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಎಲ್ಲ ಭಾಷೆಯ ಮಾಧ್ಯಮಗಳನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜ ಯೋಚಿಸಬೇಕಿದೆ. ಇದು ಇವತ್ತಿನ ತುರ್ತು ಮತ್ತು ಅನಿವಾರ್ಯ.
              – ನಾ ದಿವಾಕರ
ದೆಹಲಿಯಲ್ಲಿ ಮತ್ತು ದೇಶಾದ್ಯಂತ ಹಂತಹಂತವಾಗಿ ವ್ಯಾಪಿಸುತ್ತಿರುವ ರೈತ ಮುಷ್ಕರ ಜನವರಿ ೨೬ರ ಜನಗಣರಾಜ್ಯೋತ್ಸವ ಮತ್ತು ಟ್ರಾಕ್ಟರ್ ಪರೇಡ್ ನಂತರ ಮತ್ತಷ್ಟು ಪ್ರಬಲವಾಗಿದೆ. ಹೋರಾಟವನ್ಮು ಹೇಗಾದರೂ ಮಾಡಿ ಕೊನೆಗೊಳಿಸುವ ಕೇಂದ್ರ ಬಿಜೆಪಿ ಸರ್ಕಾರದ ಹುನ್ನಾರಗಳು ಒಂದೊಂದಾಗಿ ವಿಫಲವಾಗುತ್ತಿವೆ. ದೇಶಪ್ರೇಮದ ಉನ್ಮಾದ ಸೃಷ್ಟಿಸಿ ಹೋರಾಟಕ್ಕೆ ಮಸಿಬಳಿಯಲೂ ಸಾಧ್ಯವಾಗದೆ ಬಿಜೆಪಿ ಮತ್ತು ಸಂಘಪರಿವಾರ ಕಂಗಾಲಾಗಿರುವುದು ಸ್ಪಷ್ಟ. ಮುಷ್ಕರದ ಆರಂಭದಲ್ಲಿ ಈ ವಿಕೃತ ಮನಸುಗಳಿಗೆ ಗೋಚರಿಸಿದ ಉಗ್ರಗಾಮಿಗಳನ್ನು ಈಗ ಗುರುತಿಸಲಾಗುವುದಿಲ್ಲ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಚಿಂತನಾವಾಹಿನಿಗಳು ಲಕ್ಷಾಂತರ ರೈತಾಪಿಯ ನಡುವೆ ಕಾಣಬಯಸಿದ್ದ ಖಲಿಸ್ತಾನಿಗಳು, ಪಾಕಿಸ್ತಾನಿಗಳು, ಭಯೋತ್ಪಾದಕರು, ನಗರ ನಕ್ಸಲರು, ತುಕಡೆ ತುಕಡೆ ಗುಂಪುಗಳು ಎಲ್ಲರೂ ಈಗ ರೈತರಾಗಿಯೇ ಕಾಣುತ್ತಿದ್ದಾರೆ. ಇದೊಂದು ಜನಾಂದೋಲನ, ಇಲ್ಲಿ ತನ್ನ ಮತೀಯ ರಾಜಕಾರಣದ ಉನ್ಮಾದ ಮತ್ತು ಪ್ರಚೋದನೆ ಕಾರ್ಯಗತವಾಗುವುದಿಲ್ಲ ಎನ್ನುವ ಕನಿಷ್ಟ ಪ್ರಜ್ಞೆ ಬಿಜೆಪಿಗೆ ಇರಬೇಕಿತ್ತು.
ತಮ್ಮ ಅಸ್ತಿತ್ವ, ಅಸ್ಮಿತೆ ಮತ್ತು ಹಕ್ಕುಗಳಿಗಾಗಿ ಹೋರಾಡುತ್ತಿರುವ ಲಕ್ಷಾಂತರ ರೈತರ ನಡುವೆ ” ಅನ್ಯರನ್ನು ”  ಸೃಷ್ಟಿಸಿ ಪ್ರತ್ಯೇಕಿಸಿ ದ್ವೇಷರಾಜಕಾರಣ ಮಾಡಲಾಗುವುದಿಲ್ಲ, ಮತ್ತೊಂದು ಶಹೀನ್ ಭಾಗ್ ಸಾಧ್ಯವಿಲ್ಲ ಎನ್ನುವುದು ಸಂಘ ನಾಯಕರಿಗೂ ಸ್ಪಷ್ಟವಾಗಿದೆ. ಇದು ಪರಿಪೂರ್ಣ ಜಾತ್ಯತೀತ ಹೋರಾಟ, ಇಲ್ಲಿ ಅನ್ನದ ಪ್ರಶ್ನೆ ಇದೆ, ಮಣ್ಣಿನ ಪ್ರಶ್ನೆ ಇದೆ, ನಾಳಿನ ಪ್ರಶ್ನೆ ಇದೆ. ಬದುಕಿನ ಪ್ರಶ್ನೆ ಇದೆ. ಶಹೀನ್ ಭಾಗ್ ಹೋರಾಟದಲ್ಲೂ ಇದೇ ಪ್ರಶ್ನೆಗಳಿದ್ದವು ಆದರೆ ಅಲ್ಲಿ ” ಅನ್ಯರನ್ನು ” ಸೃಷ್ಟಿಸುವುದು ಬಿಜೆಪಿಗೆ ಸುಲಭವಾಗಿತ್ತು. ಕತ್ತಿ ಝಳಪಿಸುವುದು ಸುಲಭವಾಗಿತ್ತು. ಇಂದು ಶಹೀನ್ ಭಾಗ್, ಸಿಂಘು, ಟಿಕ್ರಿ, ಘಜಿಯಾಬಾದ್ ಎಲ್ಲವೂ ಒಂದಾಗಿದೆ. ಜಾತಿ, ಭಾಷೆ,  ಮತಧರ್ಮಗಳ ಎಲ್ಲೆಗಳನ್ನು ದಾಟಿ ಈ ದೇಶದ ಬಹುಸಂಖ್ಯೆಯ ಜನತೆ ಅನ್ನದಾತರ ಪರ ನಿಂತಿದ್ದಾರೆ. ಭಾರತದಲ್ಲಿ ಕೋಮುವಾದಿ ಫ್ಯಾಸಿಸ್ಟರು ವಸ್ತುಶಃ ಅಲ್ಪಸಂಖ್ಯಾತರಾಗಿರುವುದನ್ನು ಹುತಾತ್ಮ ದಿನದ ದೇಶವ್ಯಾಪಿ ಉಪವಾಸ ಸತ್ಯಾಗ್ರಹ ನಿರೂಪಿಸಿದೆ.
ಈ ಹೋರಾಟದ ಸಂದರ್ಭದಲ್ಲಿ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಮಸ್ತ ಭಾರತೀಯರಿಗೆ ತಮ್ಮ ಶತ್ರುಗಳು ಯಾರು ಎಂದು ಸ್ಪಷ್ಟವಾಗಿದೆ. ನವ ಉದಾರವಾದಿ ಆರ್ಥಿಕ ನೀತಿಗಳು, ಬಲಪಂಥೀಯ ರಾಜಕಾರಣ, ಕೋಮುವಾದಿ ಫ್ಯಾಸಿಸಂ ಈ ದೇಶದ ದುಡಿಯುವ ವರ್ಗಗಳ, ಕಾರ್ಮಿಕರ, ಶ್ರಮಜೀವಿಗಳ, ಬಡಜನತೆಯ ಮತ್ತು ರೈತಾಪಿಯ ಪ್ರಥಮ ಶತ್ರು ಎಂದು ಮನದಟ್ಟಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಸರ್ಕಾರಗಳು ಪ್ರದರ್ಶಿಸಿರುವ ಆಡಳಿತ ಕ್ರೌರ್ಯ, ನಿರ್ಲಕ್ಷ್ಯ ಮತ್ತು ನಿರ್ಲಜ್ಜ ನಿಷ್ಕ್ರಿಯತೆ ಇದನ್ನು ದೃಢೀಕರಿಸಿದೆ.
ಈ ಸಂದರ್ಭದಲ್ಲೇ ಭಾರತದ ಮಾಧ್ಯಮ ವಲಯ,  ವಿಶೇಷವಾಗಿ ಬಹುತೇಕ ವಿದ್ಯುನ್ಮಾನ ಸುದ್ದಿಮನೆಗಳು ಸಂಪೂರ್ಣ ಬೆತ್ತಲಾಗಿಬಿಟ್ಟಿವೆ. ಕನ್ನಡದ ಸುದ್ದಿಮನೆಗಳ ನಿರ್ಲಜ್ಜ ವರದಿಗಾರಿಕೆ ಮತ್ತು ಪಕ್ಷಪಾತಿ ಧೋರಣೆ ಸಾರ್ವಜನಿಕವಾಗಿಯೇ ಬಯಲಾಗಿದೆ. ಬೆಂಗಳೂರಿನಲ್ಲಿ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಸುವರ್ಣ ವಾಹಿನಿಯ ವರದಿಗಾರ್ತಿ ನಡೆಸಿದ ಪ್ರಹಸನ ಸುದ್ದಿಮನೆಗಳ ನಿರ್ಲಜ್ಜತೆಗೆ ಸಾಕ್ಷಿಯಾಗಿದೆ. ಕಾರ್ಪೋರೇಟ್ ಉದ್ಯಮಿಗಳ ಮತ್ತು ರಾಜಕೀಯ ನಾಯಕರ ಒಡೆತನದಲ್ಲಿರುವ ಸುದ್ದಿವಾಹಿನಿಗಳಿಂದ ಹೆಚ್ಚಿನ ಸೌಜನ್ಯ, ಸಭ್ಯತೆ , ಸಂವೇದನೆ ಮತ್ತು ಪತ್ರಿಕಾ ವೃತ್ತಿಧರ್ಮವನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ.
ಆದರೆ ಈ ವಾಹಿನಿಗಳನ್ನು ನಿರ್ವಹಿಸುವ ಪತ್ರಕರ್ತರಲ್ಲಿ ಈ ಎಲ್ಲ ಮೌಲ್ಯಗಳ ತುಣುಕುಗಳಾದರೂ ಇರಬೇಕಲ್ಲವೇ ? ರಾಜಪ್ರಭುತ್ವದ ಕಾಲಘಟ್ಟದಲ್ಲಿ ದೊರೆಯ ಕಿವಿಗಿಂಪಾಗುವ, ಮನತಣಿಸುವ ಸುದ್ದಿ ಒಪ್ಪಿಸಿ, ದೊರೆಯು ಬಿಸಾಡುವ ವರಾಹಗಳಿಗಾಗಿ ಹಲ್ಲುಗಿಂಜುತ್ತಾ ಕೈಚಾಚಿ ನಿಲ್ಲುವ ಭಟ್ಟಂಗಿಗಳೇ ಹೊಸ ಅವತಾರದಲ್ಲಿ ಸುದ್ದಿಮನೆಗಳಲ್ಲಿ ತುಂಬಿದ್ದಾರೆ ಎನಿಸುತ್ತದೆ. ಯಾವುದೇ ಕಾಲಘಟ್ಟದಲ್ಲೂ ಮಾಧ್ಯಮ ಲೋಕ ಇಂತಹ ವಂದಿಮಾಗಧರಿಂದ ಪೂರ್ಣ ಮುಕ್ತವಾಗಿರಲಿಲ್ಲ. ಆದರೆ ಈಗಿನಷ್ಟು ಕುಲಗೆಟ್ಟಿರಲೂ ಇಲ್ಲ. ಹಿಂಸಾತ್ಮಕ ಘಟನೆಗಳನ್ನು ಸಂಭ್ರಮಿಸುವಂತೆಯೇ, ಮುಷ್ಕರ ನಿರತ ರೈತರ‌ ಮೇಲೆ ನಡೆಯುವ ದೌರ್ಜನ್ಯವನ್ನೂ ಸಂಭ್ರಮಿಸುವ ಈ ವಿಕೃತಿ ಕಳೆದ ಒಂದೆರಡು ದಶಕಗಳ ಸಾಂಸ್ಕೃತಿಕ-ಮತಾಂಧ ರಾಜಕಾರಣದ ಫಲ.
ರೈತರ ಮೇಲಿನ ಪೊಲೀಸರ ದೌರ್ಜನ್ಯ ಮತ್ತು ಉತ್ತರಪ್ರದೇಶ ಸರ್ಕಾರ ಘಜಿಯಾಬಾದ್ ಗಡಿಯಲ್ಲಿ ಪ್ರದರ್ಶಿಸಿದ ಅಮಾನುಷ ಕ್ರೌರ್ಯ ರಾಜೇಶ್ ಟಿಕಾಯತ್ ಅವರನ್ನು ಕಣ್ಣೀರಿಡುವಂತೆ ಮಾಡುತ್ತದೆ. ಅವರ ಎರಡು ಹನಿ ಕಣ್ಣೀರು ಹೋರಾಟದ ದಿಕ್ಕನ್ನೇ ಬದಲಿಸುತ್ತದೆ. ರಾತ್ರೋರಾತ್ರಿ ರೈತರು ತಂಡೋಪತಂಡವಾಗಿ ಮುಷ್ಜರಕ್ಕೆ ಸೇರಲಾರಂಭಿಸುತ್ತಾರೆ. ಪೊಲೀಸರ ದರ್ಪ, ದಬ್ಬಾಳಿಕೆಯನ್ನೂ ಲೆಕ್ಕಿಸದೆ ಜನಸಾಗರ ವ್ಯಾಪಿಸುತ್ತದೆ. ಈ ದೃಶ್ಯ, ಟಿಕಾಯತ್ ಅವರ ಕಂಬನಿ ನಮ್ಮ ಪಬ್ಲಿಕ್ ಟಿವಿ ರಂಗನಾಥ್ ಅವರಿಗೆ ನಾಟಕದಂತೆ ಕಾಣುತ್ತದೆ. ನೇರವಾಗಿ ಟಿಕಾಯತ್ ಅವರನ್ನು ಲೇವಡಿ ಮಾಡುವುದೇ ಅಲ್ಲದೆ ರಂಗನಾಥ್, ಇದು ಹಿಂಸೆಗೆ ಪ್ರಚೋದಿಸುವ ತಂತ್ರ ಎಂದು ಹೇಳುವ ಮೂಲಕ ತಮ್ಮ ಅಸೂಕ್ಷ್ಮತೆ ಪ್ರದರ್ಶಿಸುತ್ತಾರೆ. ಅಷ್ಟೇ ಅಲ್ಲ, ಟಿಕಾಯತ್ ವಿರುದ್ಧ ಮತ್ತೊಂದು ಮೊಕದ್ದಮೆ ಹೂಡಲು ಆಗ್ರಹಿಸುತ್ತಾರೆ .ಇದು ಒಂದು ನಿದರ್ಶನ ಮಾತ್ರ. ಹಿಂದಿ ಭಾಷೆಯ ಸುದ್ದಿಮನೆಗಳು ಇನ್ನೂ ಹೆಚ್ಚಿನ ಅಸೂಕ್ಷ್ಮತೆ ಪ್ರದರ್ಶಿಸಿವೆ.
ತಮ್ಮ ಬಳಿ ಇರುವ ಕ್ಯಾಮರಾಗಳು ದೇಶದಲ್ಲಿ ಸಂಭವಿಸುವ ಘಟನೆಗಳನ್ನು, ವಿದ್ಯಮಾನಗಳನ್ನು ಪ್ರಜೆಗಳ ಕಣ್ಣುಗಳ ಮೂಲಕ ನೋಡಿದಾಗ ಮಾತ್ರವೇ ಮಾಧ್ಯಮ ವಲಯ ತನ್ನ  ವೃತ್ತಿಧರ್ಮವನ್ನು ಉಳಿಸಿಕೊಳ್ಳಲು ಸಾಧ್ಯ ಎನ್ನುವ ಕನಿಷ್ಟ ಪ್ರಜ್ಞೆ ರಂಗನಾಥ್, ಭರದ್ವಾಜ್,  ಅಜಿತ್ ಮುಂತಾದ ಪತ್ರಕರ್ತರಿಗೆ ಇರಬೇಕು. ದೇಶದ ಸಮಸ್ತ ರೈತರನ್ನು ಪ್ರತಿನಿಧಿಸುವ ಚಾರಿತ್ರಿಕ ಹೋರಾಟವನ್ನು ” ರಾಷ್ಟ್ರದ್ರೋಹ ” ಎಂದು ಲೇವಡಿ ಮಾಡುವ ಹೀನ ಮಟ್ಟಕ್ಕೆ ಕುಸಿದಿರುವ ಕನ್ನಡದ ಸುದ್ದಿಮನೆಗಳು ತಮ್ಮ ಬೌದ್ಧಿಕ ದಾರಿದ್ರ್ಯವನ್ನು ಪ್ರದರ್ಶಿಸಿರುವುದೇ ಅಲ್ಲದೆ, ನೈತಿಕತೆಯನ್ನೂ ಕಳೆದುಕೊಂಡು ನಡುಬೀದಿಯಲ್ಲಿ ಬೆತ್ತಲಾಗಿಬಿಟ್ಟಿವೆ. ಪ್ರಜಾಪ್ರಭುತ್ವದ ಕಾವಲುಗಾರರಂತೆ ಇರಬೇಕಾದ ಮಾಧ್ಯಮಗಳು ದೊರೆಮನೆಯ ಹೊಸ್ತಿಲು ಕಾಯುವಂತಾಗಿರುವುದು ಪತ್ರಕೋದ್ಯಮಕ್ಕೇ ಮಸಿ ಬಳಿದಂತಾಗಿದೆ.
ವೃತ್ತಿ ನಿಷ್ಠೆಯ ಅನಿವಾರ್ಯತೆಗಳು ವ್ಯಕ್ತಿಗತ ಪ್ರಾಮಾಣಿಕತೆ, ವಸ್ತುನಿಷ್ಠತೆ ಮತ್ತು  ನಿಷ್ಠೆಯನ್ನು ಭ್ರಷ್ಟಗೊಳಿಸಿದರೆ ಎಂತಹ ಅನಾಹುತಗಳಾಗುತ್ತವೆ, ಎಂತಹ ವಿಕೃತಿಗಳನ್ನು ಸೃಷ್ಟಿಸುತ್ತವೆ, ಸಮಾಜವನ್ನು ಹೇಗೆ ದಿಕ್ಕು ತಪ್ಪಿಸುತ್ತವೆ ಎನ್ನುವುದನ್ನು ಕನ್ನಡದ ಸುದ್ದಿವಾಹಿನಿಗಳು ನಿರೂಪಿಸಿಬಿಟ್ಟಿವೆ. ಪತ್ರಿಕೋದ್ಯಮದ ಪ್ರಥಮ ನಿಷ್ಠೆ  ಸಂವಿಧಾನ ಮತ್ತು ಪ್ರಜೆಗಳಿಗೆ ಎನ್ನುವ ಸರಳ ಸತ್ಯ ಸುದ್ದಿಮನೆಗಳ ಸಂಪಾದಕರಿಗೆ ತಿಳಿದಿರಬೇಕಲ್ಲವೇ ? ಬಹುಶಃ ಈ ಪರಿಜ್ಞಾನ ಇದ್ದಿದ್ದರೆ ಸುವರ್ಣ ವಾಹಿನಿಗೆ ರೈತ ಮುಷ್ಕರ ರಾಷ್ಟ್ರದ್ರೋಹದಂತೆ ಕಾಣುತ್ತಿತಲಿಲ್ಲ, ಪಬ್ಲಿಕ್ ಟಿವಿ ಸಂಪಾದಕರಿಗೆ ಟಿಕಾಯತ್ ಅವರ ಕಂಬನಿ ಅಪರಾಧದಂತೆ ಕಾಣುತ್ತಿರಲಿಲ್ಲ. ಈ ಪರಿಜ್ಞಾನ ಇದ್ದಿದ್ದರೆ ದೆಹಲಿ ಗಡಿಯಲ್ಲಿ ಮುಷ್ಕರದ ನಡುವೆ ಹುತಾತ್ಮರಾದ ರೈತರ ಮೃತದೇಹಗಳಲ್ಲಿ ಈ ಸಂಪಾದಕರಿಗೆ ನೊಂದ ಧ್ವನಿ‌ ಕೇಳಿಸುತ್ತಿತ್ತು. ಎರಡು  ತಿಂಗಳ‌ ಮುಷ್ಕರದ ಕಡೆ ಇವರ ಗಮನ ಹರಿಯುತ್ತಿತ್ತು.
ಸೂಕ್ಷ್ಮ ಸಂವೇದನೆ, ಮಾನವ ಸೂಕ್ಷ್ಮತೆ, ವೃತ್ತಿ ಧರ್ಮ, ಸಂವಿಧಾನ ನಿಷ್ಠೆ, ಪ್ರಜಾತಂತ್ರ ಮೌಲ್ಯ ಇವೆಲ್ಲವನ್ನೂ ಕಳೆದುಕೊಂಡು ಬೆತ್ತಲಾಗಿರುವ ಕನ್ನಡದ ಸುದ್ದಿಮನೆಗಳು ಪ್ರಜ್ಞಾವಂತ ನಾಗರಿಕ  ಸಮಾಜಕ್ಕೆ ಅನಗತ್ಯ ಹೊರೆಯಂತೆ ಕಾಣುತ್ತಿವೆ. ಸುಳ್ಳುಗಳನ್ನೇ ಸತ್ಯ ಎಂದು ಬಿಂಬಿಸುವ ಮೂಲಕ ತಮ್ಮ ಸ್ವಾಮಿನಿಷ್ಠೆಗೆ ಬದ್ಧರಾಗಿ, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಎಲ್ಲ ಭಾಷೆಯ ಮಾಧ್ಯಮಗಳನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜ ಯೋಚಿಸಬೇಕಿದೆ. ಇದು ಇವತ್ತಿನ ತುರ್ತು ಮತ್ತು ಅನಿವಾರ್ಯ.
-೦–೦-೦-೦-

 

 

Donate Janashakthi Media

Leave a Reply

Your email address will not be published. Required fields are marked *