ನವದೆಹಲಿ: ‘ಅಶಿಸ್ತಿನ ವರ್ತನೆ’ ಮತ್ತು ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ವಿರೋಧ ಪಕ್ಷದ 33 ಲೋಕಸಭಾ ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರ ಅಮಾನತುಗೊಳಿಸಿದ್ದಾರೆ. ಡಿಸೆಂಬರ್ 14 ರಂದು 14 ಸಂಸದರನ್ನು ಅವರು ಅಮಾನತುಗೊಳಿಸಿದ್ದರು. ಇದು ಒಂದು ವಾರದ ಒಳಗೆ ಮಾಡುತ್ತಿರುವ ವಿರೋಧ ಪಕ್ಷದ ಸಂಸದರ ಎರಡನೇ ಸುತ್ತಿನ ಅಮಾನತಾಗಿದೆ. ಅಮಾನತುಗೊಂಡಿರುವ ಸಂಸದರಲ್ಲಿ ಡಿಎಂಕೆಯ 9, ಕಾಂಗ್ರೆಸ್‌ನ 11, ತೃಣಮೂಲ ಕಾಂಗ್ರೆಸ್‌ನ 9, ಆರ್‌ಎಸ್‌ಪಿಯ 1ಮತ್ತು ಮುಸ್ಲಿಂ ಲೀಗ್‌ನ ಇಬ್ಬರು ಸಂಸದರಿದ್ದಾರೆ.
ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನೀಡುವಂತೆ ಪ್ರತಿಪಕ್ಷದ ಲೋಕಸಭಾ ಸಂಸದರು ಒತ್ತಾಯಿಸಿದ್ದರು. ಅಮಾನತಾದ ಒಟ್ಟು 33 ಸಂಸದರಲ್ಲಿ 30 ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದ್ದು, ಇತರ ಮೂವರ ಅಮಾನತು ಅವಧಿಯು ವಿಶೇಷಾಧಿಕಾರ ಸಮಿತಿಗಳ ವರದಿಯನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ: ಕೊರೊನಾ ರೂಪಾಂತರಿ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ; ಸಚಿವ ದಿನೇಶ್ ಗುಂಡೂರಾವ್
ಅಮಾನತುಗೊಂಡ ಲೋಕಸಭಾ ಸಂಸದರಲ್ಲಿ ಲೋಕಸಭೆಯ ಮಾಜಿ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ವಿಜಯ್ ವಸಂತ್, ರಾಜಮೋಹನ್ ಉನ್ನಿತಾನ್, ತೃಣಮೂಲ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಕಾಕೋಲಿ ಘೋಷ್ ದಸ್ತಿದಾರ್, ಸೌಗತ ರೇ ಮತ್ತು ಸತಾಬ್ದಿ ರಾಯ್ ಮತ್ತು ಡಿಎಂಕೆ ಸಂಸದ ದಯಾನಿಧಿ ಮಾರನ್ ಮತ್ತು ಎ ರಾಜಾ ಸೇರಿದ್ದಾರೆ.
ಸೋಮವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ಸಂಸದರು ಡಿಸೆಂಬರ್ 13 ರಂದು ಸಂಭವಿಸಿದ ಭದ್ರತಾ ಲೋಪದ ಪ್ರಶ್ನೆಗಳಿಂದ ಬಿಜೆಪಿ ಓಡಿಹೋಗುತ್ತಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು. ಅಲ್ಲದೆ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿದ್ದ ಸಂಸದರು ತಮ್ಮ ಬೇಡಿಕೆಗಳನ್ನು ಬರೆದ ಫಲಕಗಳನ್ನು ಹಿಡಿದುಕೊಂಡಿದ್ದರು. ಅದೇ ವೇಳೆ ಮೂವರು ಕಾಂಗ್ರೆಸ್ ಸಂಸದರು-ಕೆ ಜಯಕುಮಾರ್, ವಿಜಯ್ ವಸಂತ್ ಮತ್ತು ಅಬ್ದುಲ್ ಖಲೀಕ್ ಅವರು ಸಭಾಧ್ಯಕ್ಷರ ಟೇಬಲ್ ಮೇಲೆ ಹತ್ತಿ ಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ.
ಸಂಸತ್ತಿನ ಕಲಾಪಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿ ಇತ್ತಿಚೆಗಷ್ಟೆ ಕಾಂಗ್ರೆಸ್, ಡಿಎಂಕೆ, ಸಿಪಿಎಂ ಮತ್ತು ಇತರ ವಿವಿಧ ಪಕ್ಷಗಳ 13 ವಿರೋಧ ಪಕ್ಷದ ಸಂಸದರನ್ನು ಡಿಸೆಂಬರ್ 14 ರಂದು ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು. ಅದೇ ದಿನ ಟಿಎಂಸಿಯ ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅದೇ ಕಾರಣಕ್ಕಾಗಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.
ವಿಡಿಯೊ ನೋಡಿ: ಹೆಂಚು ಕಾರ್ಮಿಕರ ಬದುಕು ಬೇಯುತ್ತಿದೆ: ಇವರ ಬಾಳಿಗೆ ಬೆಳಕು ಯಾವಾಗ? Janashakthi Media