ಪರಿಷತ್ ಗದ್ದಲ ಪ್ರಕರಣ : ಸದನ ಸಮಿತಿಗೆ ವಿಶ್ವನಾಥ್, ಸಂಕನೂರು ರಾಜಿನಾಮೆ

ಸದನ ಸಮಿತಿ ರಚನೆಗೆ ಜೆಡಿಎಸ್, ಬಿಜೆಪಿ ವಿರೋಧ

ಬೆಂಗಳೂರು, ಜ.08: ಡಿಸೆಂಬರ್‌ 15 ರಂದು ವಿಧಾನಪರಿಷತ್‌ನಲ್ಲಿ ನಡೆದ ಕೋಲಾಹಲದ ಕುರಿತಾಗಿ ತನಿಖೆ ನಡೆಸಲು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ರಚಿಸಿದ ತನಿಖಾ ಸಮಿತಿಗೆ ಬಿಜೆಪಿ ಸದಸ್ಯರಾದ ಹೆಚ್‌ ವಿಶ್ವನಾಥ್ ಹಾಗೂ ಎಸ್.ವಿ ಸಂಕನೂರು ರಾಜೀನಾಮೆ ಸಲ್ಲಿಸಿದ್ದಾರೆ.

ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡರಿಗೆ ರಾಜೀನಾಮೆ ಪತ್ರವನ್ನು ವಿಶ್ವನಾಥ್ ಮತ್ತು ಸಂಕನೂರು ನೀಡಿದ್ದಾರೆ. ಆದರೆ ರಾಜೀನಾಮೆಗೆ ಏನು ಕಾರಣ ಎಂಬುವುದನ್ನು ಉಲ್ಲೇಖ ಮಾಡಿಲ್ಲ. ಡಿಸೆಂಬರ್ 15 ರಂದು ವಿಧಾನಪರಿಷತ್‌ ಸಭಾಪತಿ ಬದಲಾವಣೆ ವಿಚಾರವಾಗಿ ಅವಿಶ್ವಾಸ ಮಂಡನೆಯ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಕೋಲಾಹಲ ನಡೆದಿತ್ತು. ವಿಧಾನ ಪರಿಷತ್​ ಒಳಗೆ ನಡೆದ ಗಲಾಟೆಯಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿತ್ತು. ಕಲಾಪ ಆರಂಭಕ್ಕೂ ಮೊದಲು ಬಿಜೆಪಿ, ಕಾಂಗ್ರೆಸ್ ಎಂಎಲ್​ಸಿಗಳ ನಡುವೆ ನಡೆದ ಗಲಾಟೆ, ಕಿತ್ತಾಟ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಸಭಾಪತಿಯ ಪೀಠದಲ್ಲಿ ಕುಳಿತುಕೊಂಡಿದ್ದ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡರನ್ನು ಬಲವಂತವಾಗಿ ಪೀಠದಿಂದ ಎಬ್ಬಿಸಲಾಗಿತ್ತು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದಿತ್ತು. ವಿಧಾನ ಪರಿಷತ್‌ನಲ್ಲಿ ನಡೆದ ಕೋಲಾಹಲ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆ ನಡೆದ ಕೆಲವು ದಿನಗಳ ಬಳಿಕ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಅವರ ಆತ್ಮಹತ್ಯೆಗೆ ಏನು ಕಾರಣ ಎಂಬುವುದು ಇನ್ನೂ ತಿಳಿದುಬಂದಿಲ್ಲ.

 

ಈ ಎಲ್ಲಾ ಹಿನ್ನೆಲೆಯಲ್ಲಿ ಘಟನೆಯ ತನಿಖೆ ನಡೆಸಲು ವಿಧಾನಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಮರಿತಿಬ್ಬೇಗೌಡ ನೇತೃತ್ವದಲ್ಲಿ ಸದನ ತನಿಖಾ ಸಮಿತಿಯನ್ನು ರಚನೆ ಮಾಡಿದ್ದರು. ಇಂದು ಸದನ ಸಮಿತಿಯ ಸಭೆ ಕರೆಯಲಾಗಿದ್ದು, ಸದನ ಸಮಿತಿ ರಚನೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಭಾನಾಯಕರು ಹಾಗೂ ಸದನದಲ್ಲಿ ಚರ್ಚಿಸದೇ ಸದನ ಸಮಿತಿ ರಚನೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈಗಾಗಲೇ ಜೆಡಿಎಸ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೆ ಸದನ ಸಮಿತಿಯ ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸದನ ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಧಾನ ಪರಿಷತ್​ ಸಭಾಪತಿ ಪ್ರತಾಪಚಂದ್ರ ಶೆಟ್ಟಿಗೆ ಭಾರೀ ಹಿನ್ನಡೆಯಾಗಿದೆ. ಸಮಿತಿಯಲ್ಲಿ ಬಿ.ಕೆ ಹರಿಪ್ರಸಾದ್, ಹೆಚ್‌ ವಿಶ್ವನಾಥ್, ಆರ್‌ ಬಿ ತಿಮ್ಮಾಪೂರ, ಎಸ್‌ವಿ ಸಂಕನೂರ ಸದಸ್ಯರಾಗಿದ್ದರು. ಆದರೆ ಈ ಪೈಕಿ ಇದೀಗ ಇಬ್ಬರು ಬಿಜೆಪಿ ಸದಸ್ಯರು ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಘಟನೆಯ ಕುರಿತಾದ ಸದನ ಸಮಿತಿ ತನಿಖೆಗೆ ಭಾರೀ ಹಿನ್ನಡೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *